ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

New Rule: ​ಪ್ಯಾನ್‌ , ಎಸ್‌ಬಿಐ ಕಾರ್ಡ್‌ ಸೇರಿದಂತೆ ನಾಳೆಯಿಂದ ಹಲವು ನಿಯಮ ಬದಲಾವಣೆ

ನಾಳೆಯಿಂದ ಅಂದರೆ ಏಪ್ರಿಲ್ 1ರಿಂದ ಮುಂದಿನ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸಿಗೆ ಸಂಬಂಧಿಸಿದ ಹಲವಾರು ಬದಲಾವಣೆಗಳು ಕೂಡ ಆಗಲಿದೆ. ಇದರಲ್ಲಿ ಮುಖ್ಯವಾಗಿ ಆನ್ ಲೈನ್ ಬ್ಯಾಂಕ್ ಪೇಮೆಂಟ್, ತೆರಿಗೆ ನಿಯಮಗಳು, ಪ್ಯಾನ್‌ , ಕ್ರೆಡಿಟ್ ಕಾರ್ಡ್ ನಿಯಮಗಳು ಸೇರಿವೆ. ಹೀಗಾಗಿ ಈ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು ಕೆಲವು ನಿಯಮಗಳು ಇಲ್ಲಿವೆ.

ಸಂಗ್ರಹ ಚಿತ್ರ
1/14

ಬ್ಯಾಂಕ್ ಗ್ರಾಹಕರು, ತೆರಿಗೆದಾರರು ತಿಳಿದುಕೊಳ್ಳಲೇಬೇಕಾದ ಹಲವು ಹಣಕಾಸು ನಿಯಮಗಳು ನಾಳೆಯಿಂದ ಅಂದರೆ ಏಪ್ರಿಲ್ 1ರಿಂದ ಬದಲಾಗಲಿದೆ. 2026-27ರ ಹೊಸ ಆರ್ಥಿಕ ವರ್ಷ ನಾಳೆಯಿಂದ ಪ್ರಾರಂಭವಾಗಲಿದ್ದು, ಹಲವಾರು ಪ್ರಮುಖ ಹಣಕಾಸು ಮತ್ತು ಬ್ಯಾಂಕಿಂಗ್ ನಿಯಮಗಳು ನಾಳೆಯಿಂದಲೇ ಜಾರಿಗೆ ಬರಲಿದೆ. ಈ ನಿಯಮಗಳು ತೆರಿಗೆದಾರರು, ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆದಾರರು, ಬ್ಯಾಂಕ್ ಗ್ರಾಹಕರು ಮತ್ತು ಡಿಜಿಟಲ್ ಪಾವತಿ ಬಳಕೆದಾರರ ವಹಿವಾಟುಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಮುಂದೆ ವಹಿವಾಟಿನ ವೇಳೆ ಉಂಟಾಗಬಹುದಾದ ತೊಂದರೆಗಳನ್ನು ತಪ್ಪಿಸಲು ಈ ನಿಯಮಗಳ ಬಗ್ಗೆ ಮೊದಲೇ ತಿಳಿದಿರುವುದು ಒಳ್ಳೆಯದು.

2/14

ಆದಾಯ ತೆರಿಗೆ ರಿಟರ್ನ್

ಯಾವುದೇ ಆದಾಯ ತೆರಿಗೆ ರಿಟರ್ನ್ ಬಗ್ಗೆ ವರದಿ ಮಾಡುವುದನ್ನು ತಪ್ಪಿಸಿಕೊಂಡಿದ್ದರೆ ನವೀಕರಿಸಿದ ಆದಾಯ ತೆರಿಗೆ ರಿಟರ್ನ್ (ಐಟಿಆರ್-ಯು) ಫೈಲ್ ಮಾಡಿ. ಇದಕ್ಕಾಗಿ ಹೆಚ್ಚುವರಿ ತೆರಿಗೆ, ದಂಡ ಪಾವತಿಸಬೇಕಾಗಬಹುದು. ಆದರೆ ಇದು ಮುಂದೆ ಆದಾಯ ತೆರಿಗೆ ಇಲಾಖೆಯಿಂದ ಪರಿಶೀಲನೆಗೆ ಒಳಗಾಗುವುದನ್ನು ತಪ್ಪಿಸುತ್ತದೆ.

3/14

ಹೊಸ ಪ್ಯಾನ್‌ ಕಾರ್ಡ್

ಏಪ್ರಿಲ್ 1ರಿಂದ ಪ್ಯಾನ್‌ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹೆಚ್ಚುವರಿ ದಾಖಲೆಗಳು ಬೇಕಾಗುತ್ತವೆ. ಮುಖ್ಯವಾಗಿ ಆಧಾರ್ ಆಧಾರಿತ ದೃಢೀಕರಣ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಇದಕ್ಕಾಗಿ ಪ್ಯಾನ್‌ ಕಾರ್ಡ್‌ನಲ್ಲಿರುವ ಹೆಸರು ಆಧಾರ್ ಕಾರ್ಡ್‌ನಲ್ಲಿರುವಂತೆಯೇ ಇರುತ್ತದೆ. ಅರ್ಜಿದಾರರು ತಮ್ಮ ಆಧಾರ್ ವಿವರಗಳು ಸರಿಯಾಗಿವೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

4/14

ಎಸ್‌ಬಿಐ ಕ್ರೆಡಿಟ್ ಕಾರ್ಡ್

ಎಸ್‌ಬಿಐ ಕಾರ್ಡ್ ಗ್ರಾಹಕರು ಏಪ್ರಿಲ್ 1ರಿಂದ ರಿವಾರ್ಡ್ ಪಾಯಿಂಟ್‌ಗಳನ್ನು ಸ್ಟೇಟ್‌ಮೆಂಟ್ ಕ್ರೆಡಿಟ್ ಆಗಿ ಹೇಗೆ ಪರಿವರ್ತಿಸಬಹುದು ಎಂಬುದರ ಮೇಲೆ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿದೆ. ಇದರ ಕುರಿತು ಸಂಪೂರ್ಣ ಮಾಹಿತಿಯು ಬ್ಯಾಂಕ್ ವೆಬ್ ಸೈಟ್ ನಲ್ಲಿ ಲಭ್ಯವಿದೆ.

5/14

ಹೆಚ್ ಡಿಎಫ್ ಸಿ ಬ್ಯಾಂಕ್ ನಿಯಮ

ಸಾಲ ದರಗಳಲ್ಲಿನ ಬದಲಾವಣೆ, ಸ್ಥಿರ ಠೇವಣಿ ಬಡ್ಡಿದರ, ಎಟಿಎಂ ನಗದು ಪಡೆಯುವಿಕೆ ನಿಯಮಗಳು ಮತ್ತು ಲಾಕರ್ ಶುಲ್ಕಗಳು ಸೇರಿದಂತೆ ಹಲವಾರು ನವೀಕರಣಗಳನ್ನು ಹೆಚ್ ಡಿಎಫ್ ಸಿ ಬ್ಯಾಂಕ್ ಪ್ರಕಟಿಸಿದೆ. ಇವುಗಳಲ್ಲಿ ಕೆಲವು ಈಗಾಗಲೇ ಜಾರಿಗೆ ಬಂದಿದ್ದರೆ ಇನ್ನು ಕೆಲವು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

6/14

ಫಾಸ್ಟ್ ಟ್ಯಾಗ್ ಪಾಸ್ ಶುಲ್ಕ ಹೆಚ್ಚಳ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2026–27ರ ಹಣಕಾಸು ವರ್ಷದಲ್ಲಿ ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪರಿಷ್ಕರಿಸುವುದಾಗಿ ಘೋಷಿಸಿದೆ. ಹೆಚ್ಚಿನ ಶುಲ್ಕ ಏಪ್ರಿಲ್ 1ರಿಂದ ಅನ್ವಯವಾಗಲಿದೆ. ವಾರ್ಷಿಕ ಪಾಸ್‌ ಶುಲ್ಕವನ್ನು 3,000 ರೂ.ಗಳಿಂದ 3,075 ರೂ.ಗಳಿಗೆ ಪರಿಷ್ಕರಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದೆ.

7/14

ರೂಪೇ ಡೆಬಿಟ್ ಕಾರ್ಡ್

ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ದಾರರು ಏಪ್ರಿಲ್ 1ರಿಂದ ಉಚಿತವಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರೈಲು ಲಾಂಜ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದಕ್ಕೆ ಸಂಬಂಧಿಸಿ ಕೆಲವು ನಿಯಮಗಳು ಜಾರಿಯಾಗಿವೆ. ವಿಮಾನ ನಿಲ್ದಾಣ ಅಥವಾ ರೈಲ್ವೆ ಲೌಂಜ್ ಪ್ರವೇಶ ಪ್ರಯೋಜನಗಳಿಗೆ ಅರ್ಹತೆ ಪಡೆಯಲು ಗ್ರಾಹಕರು ಬ್ಯಾಂಕ್ ನಿರ್ದಿಷ್ಟಪಡಿಸಿದ ಖರ್ಚು ಮಾನದಂಡಗಳನ್ನು ಪೂರೈಸಿರಬೇಕಾಗುತ್ತದೆ.

8/14

ಎಟಿಎಂ ನಿಯಮಗಳು

ಎಚ್‌ಡಿಎಫ್‌ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತು ಬಂಧನ್ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕುಗಳು ಎಟಿಎಂ ನಗದು ಹಿಂಪಡೆಯುವಿಕೆ ನೀತಿ, ಶುಲ್ಕ ಮತ್ತು ನಿರ್ಬಂಧಗಳಿಗೆ ಮಾರ್ಪಾಡುಗಳನ್ನು ಘೋಷಿಸಿವೆ. ಪರಿಷ್ಕೃತ ಬದಲಾವಣೆಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

9/14

ಪಾವತಿ ದೃಢೀಕರಣ

ಎಲ್ಲಾ ಡಿಜಿಟಲ್ ಪಾವತಿ ವಹಿವಾಟುಗಳು ದೃಢೀಕರಣದ ಎರಡು ಅಂಶಗಳನ್ನು ನಾಳೆಯಿಂದ ಪೂರೈಸಬೇಕು. ದೃಢೀಕರಣಕ್ಕಾಗಿ ಯಾವುದೇ ನಿರ್ದಿಷ್ಟ ಅಂಶವನ್ನು ಕಡ್ಡಾಯಗೊಳಿಸಲಾಗಿಲ್ಲವಾದರೂ ಡಿಜಿಟಲ್ ಪಾವತಿ ವ್ಯವಸ್ಥೆಯು ಪ್ರಾಥಮಿಕವಾಗಿ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಅನ್ನು ಹೆಚ್ಚುವರಿ ಅಂಶವಾಗಿ ಅಳವಡಿಸಿಕೊಂಡಿದೆ. ಒಟಿಪಿಯು ಇನ್ನು ಮುಂದೆ ಎಸ್ಎಂಎಸ್ ಬದಲಿಗೆ ಗ್ರಾಹಕರು ಬಳಸುವ ಬ್ಯಾಂಕಿಂಗ್ ಅಪ್ಲಿಕೇಶನ್’ನಲ್ಲಿಯೇ ದೊರೆಯಲಿದೆ.

10/14

ವಹಿವಾಟು ಮಿತಿ

ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ಐದು ಲಕ್ಷಕ್ಕಿಂತ ಮೇಲ್ಪಟ್ಟು ಮಾಡುವ ಎಲ್ಲಾ ವಹಿವಾಟಿಗೆ ಆಧಾರ್ ಲಿಂಕ್, ಫಿಂಗರ್ ಪ್ರಿಂಟ್ ಅಥವಾ ಫೇಸ್ ಸ್ಕ್ಯಾನ್ ಮಾಡಲೇಬೇಕು. ಇಲ್ಲವಾದರೆ ಯಾವುದೇ ಪಾವತಿಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಆನ್ಲೈನ್ ಪಾವತಿಯ ವೇಳೆ ಹೆಚ್ಚುವರಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಭದ್ರತಾ ಕಾರಣಕ್ಕಾಗಿ ’ತಾಯಿಯ ಹೆಸರು’, ’ಓದಿದ ಶಾಲೆ’ ಮೊದಲಾದ ಹೆಚ್ಚುವರಿ ಮಾಹಿತಿಗಳನ್ನು ಕೇಳಬಹುದು. ಈ ಮಾಹಿತಿಗಳು ಹೊಂದಿಕೆಯಾದರೆ ಮಾತ್ರ ಪೇಮೆಂಟ್ ವಿಂಡೋ ಮುಂದೆ ಸಾಗುತ್ತದೆ.

11/14

ಗ್ರಾಹಕರ ಗುರುತು ಪತ್ತೆ

ಬ್ಯಾಂಕಿಂಗ್ ಅಪ್ಲಿಕೇಶನ್ ನಲ್ಲಿ ಬಿಹೇವಿಯರ್ ಬಯೋಮೆಟ್ರಿಕ್ಸ್ ಅನ್ನು ಅಳವಡಿಸಲಾಗಿದೆ. ಈ ಮೂಲಕ ಇನ್ನು ಮುಂದೆ ಗ್ರಾಹಕರು ಬ್ಯಾಂಕಿಂಗ್ ಅಪ್ಲಿಕೇಶನ್ ಬಳಸುವಾಗ ಅವರು ಟೈಪ್ ಮಾಡುವ ವಿಧಾನ, ವೇಗ, ಸ್ಕ್ರೀನ್ ನಿರ್ವಹಣೆ ಮೂಲಕ ಗ್ರಾಹಕರ ಗುರುತು ಪತ್ತೆ ಮಾಡಲಾಗುತ್ತದೆ.

12/14

ಎಚ್ಚರಿಕೆ ಸಂದೇಶ

ಏಪ್ರಿಲ್ 1ರಿಂದ ನಕಲಿ ಆಪ್ ಅಥವಾ ಮಾಲ್ವೇರ್ ಡೌನ್’ಲೋಡ್ ಆದ ತಕ್ಷಣವೇ ಬ್ಯಾಂಕ್ ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರಿಗೆ ಎಚ್ಚರಿಕೆಯ ಸಂದೇಶಗಳು ದೊರೆಯಲಿದೆ. ಇದರಿಂದ ಗ್ರಾಹಕರು ತಕ್ಷಣ ತಮ್ಮ ಖಾತೆಯನ್ನು ಸುರಕ್ಷಿತಗೊಳಿಸಬಹುದು.

13/14

ಸಮಯ ನಿರ್ಬಂಧ

ಇನ್ನು ಮುಂದೆ ಬ್ಯಾಂಕುಗಳು ತಮ್ಮ ಅಪ್ಲಿಕೇಶನ್’ಗಳಲ್ಲಿ ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ವಹಿವಾಟುಗಳನ್ನು ಲಾಕ್ ಮಾಡುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಿದೆ. ಒಂದು ವೇಳೆ ಈ ಸಮಯದಲ್ಲಿ ವಹಿವಾಟು ನಡೆಸಲು ಯಾರಾದರೂ ಖಾತೆ ಹ್ಯಾಕ್ ಮಾಡಿದರೂ ಆನ್ಲೈನ್ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಇದು ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ.

14/14

ಪಾವತಿ ಸ್ಥಳದ ದೃಢೀಕರಣ

ಇನ್ನು ಮುಂದೆ ಗ್ರಾಹಕರು ಎಲ್ಲಿಂದ ಪಾವತಿ ಮಾಡುತ್ತಾರೆ ಎಂಬುದನ್ನು ಕೂಡ ಪರಿಶೀಲಿಸಲಾಗುತ್ತದೆ. ಡೈನಾಮಿಕ್- ಟು-ಫ್ಯಾಕ್ಟರ್ ದೃಢೀಕರಣದ ಭಾಗವಾಗಿ ಪಾವತಿ ಸ್ಥಳವನ್ನು ಪತ್ತೆ ಹಚ್ಚಲಾಗುತ್ತದೆ. ಇದರೊಂದಿಗೆ ಪಾವತಿಯ ಸ್ಕ್ರೀನ್’ಶಾಟ್ ತೆಗೆಯಲು ಇನ್ನು ಅವಕಾಶವಿಲ್ಲ. ಇದು ಖಾತೆಯ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳಲು ಅಳವಡಿಸಿರುವ ವ್ಯವಸ್ಥೆಯಾಗಿದೆ.

ವಿದ್ಯಾ ಇರ್ವತ್ತೂರು

View all posts by this author