ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಈ 10 ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ

ದೇಶದಲ್ಲಿ ಕೆಲವೊಂದು ವಹಿವಾಟುಗಳಿಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ ಕಡ್ಡಾಯವಾಗಿದೆ. ಅದರಲ್ಲೂ ಮುಖ್ಯವಾಗಿ ಆದಾಯ ತೆರಿಗೆ, ಆಸ್ತಿ ಖರೀದಿ, ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ವಿವರಗಳನ್ನು ನೀಡಲೇಬೇಕಿದೆ. ಅಂತಹ ವಹಿವಾಟುಗಳು ಯಾವುದು ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಸಂಗ್ರಹ ಚಿತ್ರ
1/11

ಬೆಂಗಳೂರು: ಆದಾಯ ತೆರಿಗೆ (Income taxs) ವಿವರ ಸಲ್ಲಿಕೆ, ಆಸ್ತಿ ಖರೀದಿ, ಹೆಚ್ಚಿನ ಮೌಲ್ಯದ ವಹಿವಾಟು, ಹೂಡಿಕೆಗಳು ಸೇರಿದಂತೆ ಹತ್ತು ಪ್ರಮುಖ ವಹಿವಾಟುಗಳಿಗೆ ಶಾಶ್ವತ ಖಾತೆ ಸಂಖ್ಯೆ (PAN card) ಕಾರ್ಡ್ ವಿವರವನ್ನು ನೀಡುವುದು ಕಡ್ಡಾಯವಾಗಿದೆ. ದೇಶದ ಆದಾಯ ತೆರಿಗೆ ಇಲಾಖೆಯು (Income Tax Department) ವ್ಯಕ್ತಿ, ಕಂಪೆನಿ, ಇತರ ಹಲವು ಘಟಕಗಳಿಗೆ ನೀಡುವ 10 ಅಕ್ಷರಗಳ ಆಲ್ಫಾನ್ಯೂಮರಿಕ್ ಗುರುತು ಪ್ಯಾನ್ ಕಾರ್ಡ್. ಇದು ತೆರಿಗೆದಾರರ ಪ್ರಮುಖ ದಾಖಲೆಯಾಗಿದ್ದು, ಇದು ಕೇವಲ ಐಟಿಆರ್ ಸಲ್ಲಿಕೆಗೆ ಮಾತ್ರವಲ್ಲ ಇನ್ನು ಹಲವು ವಹಿವಾಟುಗಳಿಗೆ ಮುಖ್ಯ ದಾಖಲೆಯಾಗಿ ಬಳಸಲಾಗುತ್ತದೆ. ಅಂತಹ ವಹಿವಾಟುಗಳ ಕುರಿತು ಇಲ್ಲಿದೆ ಮಾಹಿತಿ.

2/11

ಬ್ಯಾಂಕ್ ಡ್ರಾಫ್ಟ್‌, ಪೇ ಆರ್ಡರ್‌

ಭಾರತೀಯ ರಿಸರ್ವ್ ಬ್ಯಾಂಕ್ 2007ರ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ ಸೆಕ್ಷನ್ 18 ರ ಅಡಿಯಲ್ಲಿ ಬ್ಯಾಂಕ್ , ಸಹಕಾರಿ ಬ್ಯಾಂಕ್ ಅಥವಾ ಯಾವುದೇ ಇತರ ಕಂಪೆನಿ ಅಥವಾ ಸಂಸ್ಥೆಗೆ ನೀಡುವ ಪ್ರಿ-ಪೇಯ್ಡ್ ಪಾವತಿ ಮತ್ತು ಕಾರ್ಯಾಚರಣೆಗಾಗಿ ಒಂದು ಹಣಕಾಸು ವರ್ಷದಲ್ಲಿ 50,000 ರೂ. ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಅಥವಾ ಬ್ಯಾಂಕ್ ಡ್ರಾಫ್ಟ್, ಪೇ ಆರ್ಡರ್ ಅಥವಾ ಬ್ಯಾಂಕರ್ ಚೆಕ್ ಮೂಲಕ ಪಾವತಿಸಬೇಕಾದರೆ ಪ್ಯಾನ್ ಕಾರ್ಡ್ ವಿವರವನ್ನು ಒದಗಿಸಬೇಕಾಗುತ್ತದೆ.

3/11

ಖರೀದಿಗಳು

2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಯಾವುದೇ ರೀತಿಯ ಸರಕು ಅಥವಾ ಸೇವೆಗಳ ಮಾರಾಟ ಅಥವಾ ಖರೀದಿ ಮಾಡುವುದಿದ್ದರೆ ಅದಕ್ಕೆ ಪ್ಯಾನ್ ಕಾರ್ಡ್ ಮಾಹಿತಿಯನ್ನು ನೀಡಬೇಕು.

4/11

ಹೂಡಿಕೆಗಳು

ಯಾವುದೇ ರೀತಿಯ ಹೂಡಿಕೆಗಳು, ಮ್ಯೂಚುವಲ್ ಫಂಡ್‌ಗಳಲ್ಲಿ 50,000 ರೂ. ಗಿಂತ ಹೆಚ್ಚಿನ ಹಣ ಹೂಡಿಕೆ ಮಾಡುವಾಗ ಅಥವಾ 50,000 ರೂ.ಗಿಂತ ಹೆಚ್ಚಿನ ಬಾಂಡ್‌, ಡಿಬೆಂಚರ್‌ಗಳನ್ನು ಖರೀದಿಸುವಾಗ ಪ್ಯಾನ್ ಕಾರ್ಡ್ ಅಗತ್ಯವಾಗಿರುತ್ತದೆ.

5/11

ಜೀವ ವಿಮೆ

ಹಣಕಾಸು ವರ್ಷದಲ್ಲಿ ಒಂದೇ ಬಾರಿಗೆ 50,000 ರೂ. ಗಿಂತ ಹೆಚ್ಚಿನ ಜೀವ ವಿಮಾ ಪ್ರೀಮಿಯಂಗಳನ್ನು ಪಾವತಿಸುವ ವಿಮಾದಾರರು ಪ್ಯಾನ್ ವಿವರ ಒದಗಿಸುವುದು ಕಡ್ಡಾಯವಾಗಿದೆ.

6/11

ಬಿಲ್ ಪಾವತಿ

ಹೊಟೇಲ್ ಅಥವಾ ರೆಸ್ಟೋರೆಂಟ್ ಬಿಲ್‌ ಪಾವತಿ ವೇಳೆ ಪ್ಯಾನ್ ಕಾರ್ಡ್ ವಿವರ ಒದಗಿಸಬೇಕಾಗಬಹುದು. ಮುಖ್ಯವಾಗಿ ಯಾವುದೇ ಸಮಯದಲ್ಲಿ 50,000 ರೂ.ಗಿಂತ ಹೆಚ್ಚಿನ ಬಿಲ್‌ಗಳನ್ನು ನಗದು ರೂಪದಲ್ಲಿ ಪಾವತಿಸಬೇಕಾದರೆ ಪ್ಯಾನ್ ವಿವರ ಒದಗಿಸುವುದು ಕಡ್ಡಾಯವಾಗಿದೆ.

7/11

ವಿದೇಶಿ ಕರೆನ್ಸಿ/ಪ್ರಯಾಣ

ವಿದೇಶ ಪ್ರಯಾಣ ಅಥವಾ ಯಾವುದೇ ವಿದೇಶಿ ಕರೆನ್ಸಿ ಖರೀದಿಗೆ ಸಂಬಂಧಿಸಿ 50,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸುವುದಾದರೆ ಪ್ಯಾನ್ ಕಾರ್ಡ್ ವಿವರಗಳನ್ನು ಒದಗಿಸಬೇಕು.

8/11

ವಾಹನ ಖರೀದಿ

ದ್ವಿಚಕ್ರ ವಾಹನ ಹೊರತುಪಡಿಸಿ ಇತರ ಯಾವುದೇ ವಾಹನವನ್ನು ಖರೀದಿಸುವುದಾದರೆ ಅಥವಾ ಮಾರಾಟ ಮಾಡುವುದಾದರೆ ಪ್ಯಾನ್ ಕಾರ್ಡ್ ವಿವರವನ್ನು ಒದಗಿಸಬೇಕಾಗುತ್ತದೆ. ಮುಖ್ಯವಾಗಿ ವಹಿವಾಟು 5 ಲಕ್ಷ ರೂ. ಮೀರಿದರೆ ಪ್ಯಾನ್ ಕಡ್ಡಾಯವಾಗಿದೆ.

9/11

ಬ್ಯಾಂಕ್ ಖಾತೆ

ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕಿನಲ್ಲಿ ಯಾವುದೇ ಬ್ಯಾಂಕ್ ಖಾತೆಯನ್ನು ತೆರೆಯಲು ಟಿಡಿ (time deposit) ಮತ್ತು ಮೂಲ ಉಳಿತಾಯ ಬ್ಯಾಂಕ್ ಠೇವಣಿ (Basic Savings Bank Deposit Account) ಹೊರತು ಪಡಿಸಿ ಉಳಿದ ಎಲ್ಲಾ ರೀತಿಯ ಖಾತೆ ತೆರೆಯಲು ಪ್ಯಾನ್ ಕಾರ್ಡ್ ವಿವರ ಸಲ್ಲಿಸಬೇಕಾಗುತ್ತದೆ.

10/11

ಸ್ಥಿರ ಆಸ್ತಿ

10 ಲಕ್ಷ ರೂ. ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ, ಮಾರಾಟಕ್ಕೆ ಸ್ಥಿರ ಆಸ್ತಿ ಕಾಯಿದೆಯ ಸೆಕ್ಷನ್ 50ಸಿ ನಲ್ಲಿ ಉಲ್ಲೇಖಿಸಿರುವಂತೆ ಪ್ಯಾನ್ ಕಾರ್ಡ್ ವಿವರ ಒದಗಿಸಬೇಕಾಗುತ್ತದೆ. ಇಲ್ಲವಾದರೆ ಇದು ಅಕ್ರಮ ವಹಿವಾಟು ಎಂದು ಕರೆಯಲಾಗುತ್ತದೆ.

11/11

ಬ್ಯಾಂಕ್ ಠೇವಣಿ

ಒಂದೇ ದಿನದಲ್ಲಿ 50,000 ರೂ. ಗಿಂತ ಹೆಚ್ಚಿನ ನಗದು ಠೇವಣಿ ಮಾಡಬೇಕಾದರೆ ಪ್ಯಾನ್ ಕಾರ್ಡ್ ಉಲ್ಲೇಖ ಕಡ್ಡಾಯವಾಗಿದೆ. ಇದು 2016ರಿಂದ ಚಾಲ್ತಿಯಲ್ಲಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ 2.5 ಲಕ್ಷ ರೂ. ಗಿಂತ ಹೆಚ್ಚಿನ ಠೇವಣಿ ಇಟ್ಟಿದ್ದರೆ ಅದಕ್ಕೂ ಕೂಡ ಪ್ಯಾನ್ ಕಾರ್ಡ್ ವಿವರ ಸಲ್ಲಿಸಬೇಕಾಗುತ್ತದೆ.

ವಿದ್ಯಾ ಇರ್ವತ್ತೂರು

View all posts by this author