ಜುಲೈನಿಂದ ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿರುವ ಬಹುನಿರೀಕ್ಷಿತ ʻಟಾಪ್ 10ʼ ಸಿನಿಮಾಗಳ ಲಿಸ್ಟ್ ಇಲ್ಲಿದೆ; IMDb ಪಟ್ಟಿಯಲ್ಲಿ ಯಶ್ ಅಬ್ಬರ!
ವರ್ಷದ ಮೊದಲಾರ್ಧವು ಈಗಾಗಲೇ ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಬಾಲಿವುಡ್, ಟಾಲಿವುಡ್ ಒಳ್ಳೆಯ ಬೆಳೆ ತೆಗೆದಿವೆ. ತಮಿಳು ಚಿತ್ರರಂಗ ಕೂಡ ಒಂದು ಹಂತಕ್ಕೆ ಸೇಫ್ ಆಗಿದೆ. ಮಲಯಾಳಂನಿಂದ ಕಂಟೆಂಟ್ ಆಧಾರಿತ ಸಿನಿಮಾಗಳ ಸದ್ದು ಜೋರಾಗಿದೆ. ಸ್ಯಾಂಡಲ್‌ವುಡ್ ಇನ್ನೂ ಚೇತರಿಸಿಕೊಳ್ಳಬೇಕಿದೆ. ಸದ್ಯ ಎಲ್ಲರ ಕಣ್ಣುಗಳು 2026ರ ದ್ವಿತೀಯಾರ್ಧದ ಮೇಲಿದೆ. ಭಾರತದ ವಿವಿಧ ಭಾಷೆಯ ಹಲವು ದೊಡ್ಡ ಬಜೆಟ್ ಸಿನಿಮಾಗಳು ಜುಲೈನಿಂದ ಡಿಸೆಂಬರ್ ಅವಧಿಯಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಆ ಹಿನ್ನೆಲೆಯಲ್ಲಿ IMDb ಸಂಸ್ಥೆಯು '2026ರ ರ ದ್ವಿತೀಯಾರ್ಧದ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ' ಪಟ್ಟಿಯನ್ನು ಅನಾವರಣಗೊಳಿಸಿದೆ. ಎಲ್ಲರ ನಿರೀಕ್ಷೆಯಂತೆಯೇ, ರಣಬೀರ್ ಕಪೂರ್ - ಯಶ್ ಅವರ 'ರಾಮಾಯಣ: ಪಾರ್ಟ್ 1' ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗಾದರೆ, ಕನ್ನಡ ಟಾಕ್ಸಿಕ್‌ಗೆ ಎಷ್ಟನೇ ಸ್ಥಾನ ಮುಂದೆ ನೋಡಿ.
1.ರಾಮಾಯಣ: ಪಾರ್ಟ್ 1
ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾವು ದೀಪಾವಳಿ ಹಬ್ಬದೊತ್ತಿಗೆ ತೆರೆಗೆ ಬರಲಿದೆ. ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ರಾವಣನಾಗಿ ಯಶ್ ನಟಿಸಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಇದ್ದಾರೆ. ಈ ಸಿನಿಮಾವು ಮೊದಲ ಸ್ಥಾನದಲ್ಲಿದೆ.
2.ಆಲ್ಫಾ
2ನೇ ಸ್ಥಾನದಲ್ಲಿ ಆಲಿಯಾ ಭಟ್ ಅವರ ಮುಂಬರುವ ಸ್ಪೈ ಆಕ್ಷನ್ ಚಿತ್ರ 'ಆಲ್ಫಾ' ಇದೆ. ಶಿವ್ ರವೈಲ್ ನಿರ್ದೇಶನದ ಈ ಚಿತ್ರದಲ್ಲಿ ಶರ್ವರಿ, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಕೂಡ ನಟಿಸಿದ್ದಾರೆ. ಇದು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸ್ಪೈ ಯೂನಿವರ್ಸ್‌ನ (ಪಠಾಣ್, ಟೈಗರ್ 3 ಮತ್ತು ವಾರ್ 2 ನಂತರದ) ಮುಂದಿನ ಭಾಗವಾಗಿದೆ.
3.ಟಾಕ್ಸಿಕ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವು ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪೀರಿಯಡ್ ಗ್ಯಾಂಗ್‌ಸ್ಟರ್ ಆಕ್ಷನ್ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಮುಂತಾದವರು ನಟಿಸಿದ್ದಾರೆ. ಆಗಸ್ಟ್ 26ರಂದು ತೆರೆಕಾಣುತ್ತಿದೆ.
4.ಕಿಂಗ್
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ನಟನೆಯ, ಸಿದ್ದಾರ್ಥ್ ಆನಂದ್ ನಿರ್ದೇಶನದ 'ಕಿಂಗ್' ಸಿನಿಮಾವು 4ನೇ ಸ್ಥಾನದಲ್ಲಿದೆ. ಈ ಚಿತ್ರದ ಮೂಲಕ ಶಾರುಖ್ ಪುತ್ರಿ ಸುಹಾನಾ ಖಾನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ವಿಶೇಷ. ದೀಪಿಕಾ ಪಡುಕೋಣೆ, ಜೈದೀಪ್ ಅಹ್ಲಾವತ್, ಅರ್ಶದ್ ವಾರ್ಸಿ, ಸೌರಭ್ ಶುಕ್ಲಾ, ಜಾಕಿ ಶ್ರಾಫ್, ಅನಿಲ್ ಕಪೂರ್, ರಾಘವ್ ಜುಯಲ್, ಅಭಯ್ ವರ್ಮಾ ಮತ್ತು ರಾಣಿ ಮುಖರ್ಜಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. 2026ರ ಕ್ರಿಸ್ಮಸ್ ಹಬ್ಬಕ್ಕೆ 'ಕಿಂಗ್' ಬಿಡುಗಡೆಯಾಗಲಿದೆ.
5.ಧಮಾಲ್ 4
5ನೇ ಸ್ಥಾನದಲ್ಲಿ ಕಾಮಿಡಿ-ಡ್ರಾಮಾ ಶೈಲಿಯ 'ಧಮಾಲ್ 4' ಚಿತ್ರವಿದೆ. ಇದು ಯಶಸ್ವಿ 'ಧಮಾಲ್' ಫ್ರಾಂಚೈಸಿಯ ಮುಂದುವರಿದ ಭಾಗವಾಗಿದ್ದು, ಅಜಯ್ ದೇವ್‌ಗನ್, ರಿತೇಶ್ ದೇಶ್‌ಮುಖ್, ಅರ್ಶದ್ ವಾರ್ಸಿ, ಜಾವೇದ್ ಜಾಫೆರಿ, ರವಿ ಕಿಶನ್, ಸಂಜಯ್ ಮಿಶ್ರಾ, ಉಪೇಂದ್ರ ಲಿಮಾಯೆ, ಅಂಜಲಿ ಆನಂದ್, ಸಂಜೀದಾ ಶೇಖ್ ಮತ್ತು ಇಶಾ ಗುಪ್ತಾ ನಟಿಸಿದ್ದಾರೆ.
6.ದೃಶ್ಯಂ 3
ಅಜಯ್ ದೇವ್‌ಗನ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸೀಕ್ವೆಲ್ 'ದೃಶ್ಯಂ 3' 6ನೇ ಸ್ಥಾನದಲ್ಲಿದೆ. ತನ್ನ ಕುಟುಂಬವನ್ನು ರಕ್ಷಿಸಲು ಹೋರಾಡುವ ಐಕಾನಿಕ್ ಪಾತ್ರ 'ವಿಜಯ್ ಸಾಲಗಾಂವ್ಕರ್' ಆಗಿ ಅಜಯ್ ದೇವ್ಗನ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ಅಕ್ಟೋಬರ್ 2ರಂದು ತೆರೆಗೆ ಬರಲಿದೆ.
7.ವಿಶ್ವನಾಥ್ ಆಂಡ್ ಸನ್ಸ್
ಸೂರ್ಯ ಅಭಿನಯದ ತಮಿಳು ಚಿತ್ರ 'ವಿಶ್ವನಾಥ್ ಆಂಡ್ ಸನ್ಸ್' 7ನೇ ಸ್ಥಾನದಲ್ಲಿ ಇದೆ. ಅಂತರರಾಷ್ಟ್ರೀಯ ಶೂಟರ್ ಆಗಿ ದಶಕಗಳ ಕಾಲ ಸಾಧನೆ ಮಾಡಿದ ವ್ಯಕ್ತಿಯೊಬ್ಬನ ಸುತ್ತ ಈ ಕಥೆ ಸಾಗುತ್ತದೆ. ವಯಸ್ಸು, ಕೌಟುಂಬಿಕ ಜವಾಬ್ದಾರಿಗಳು ಮತ್ತು ಅನಿರೀಕ್ಷಿತ ಪ್ರೇಮವು ಆತನ ಮಹತ್ವಾಕಾಂಕ್ಷೆಗಳಿಗೆ ಅಡ್ಡಿಯಾದಾಗ ಆತ ಮುಂದೇನು ಮಾಡುತ್ತಾನೆ ಎಂಬುದೇ ಚಿತ್ರದ ಕಥಾಹಂದರ.
8.ಮಿರ್ಜಾಪುರ್: ದಿ ಮೂವಿ
ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ 'ಮಿರ್ಜಾಪುರ್: ದಿ ಮೂವಿ' ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಡಿಜಿಟಲ್ ಜಗತ್ತಿನಲ್ಲಿ ಭಾರಿ ಯಶಸ್ಸು ಕಂಡ ಭಾರತೀಯ ವೆಬ್ ಸರಣಿಯೊಂದು ಸಿನಿಮಾ ರೂಪದಲ್ಲಿ ಬೆಳ್ಳಿಪರದೆಗೆ ಬರುತ್ತಿರುವುದು ಇದೇ ಮೊದಲು. ಪಂಕಜ್ ತ್ರಿಪಾಠಿ, ದಿವ್ಯೇಂದು ಶರ್ಮಾ, ಅಲಿ ಫಜಲ್, ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಮೂಲ ಸರಣಿಯ ಕಲಾವಿದರೇ ಈ ಚಿತ್ರದಲ್ಲೂ ಇದ್ದಾರೆ.
9.ಹೈವಾನ್
ಪ್ರಿಯದರ್ಶನ್ ನಿರ್ದೇಶನದ 'ಹೈವಾನ್' ಚಿತ್ರ ಒಂಬತ್ತನೇ ಸ್ಥಾನದಲ್ಲಿದೆ. ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸೈಫ್ ಅಲಿ ಖಾನ್ ಈ ಥ್ರಿಲ್ಲರ್ ಚಿತ್ರದಲ್ಲಿ ಅಂಧ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
10.ಈಥಾ
ಶ್ರದ್ಧಾ ಕಪೂರ್ ನಟನೆಯ 'ಈಥಾ' ಸಿನಿಮಾ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರದ ಟೀಸರ್ ಭಾರಿ ಗಮನ ಸೆಳೆದಿತ್ತು. 'ಛಾವಾ' ಸಿನಿಮಾ ಖ್ಯಾತಿಯ ಲಕ್ಷ್ಮಣ್ ಉಟೇಕರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.