Sara Arjun: 40 ವರ್ಷದ ರಣವೀರ್ ಸಿಂಗ್ಗೆ ಜೋಡಿಯಾದ 20ರ ಹರೆಯದ ನಟಿ; ಯಾರಿವರು ಗೊತ್ತೆ?
ರಣವೀರ್ ಸಿಂಗ್ ಅವರ ಹೊಸ ಚಿತ್ರ 'ಧುರಂಧರ್' ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿ ರಣವೀರ್ ಸಿಂಗ್ ಅವರಿಗೆ ಜೋಡಿಯಾಗಿ 20ರ ಹರೆಯದ ನಟಿ ಸಾರಾ ಅರ್ಜುನ್ ಕಾಣಿಸಿಕೊಂಡಿದ್ದಾರೆ. ರಣವೀರ್ ಮತ್ತು ಸಾರಾ ನಡುವೆ 20 ವರ್ಷಗಳ ವಯಸ್ಸಿನ ಅಂತರವಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಅಂದ ಹಾಗೆ ಈ ಸಾರಾ ಅರ್ಜುನ್ ಯಾರು? ಯಾವೆಲ್ಲ ಸಿನಿಮಾದಲ್ಲಿ ನಟಿಸಿದ್ದಾರೆ ಇತ್ಯಾದಿ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ.

Sara Arjun


ಸಾರಾ ಅರ್ಜುನ್ ಬಾಲ ನಟಿಯಾಗಿ ಜನಪ್ರಿಯರಾಗಿದ್ದಾರೆ. ಬಾಲಿವುಡ್ ನಟ ರಾಜ್ ಅರ್ಜುನ್ ಅವರ ಪುತ್ರಿಯಾಗಿರುವ ನಟಿ ಸಾರಾ ಅರ್ಜುನ್ 2011ರಲ್ಲಿ ತೆರೆಕಂದ '404' ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ನೀಡಿದರು.

ಸಾರಾ 2005ರ ಜೂನ್ 18ರಂದು ಮುಂಬೈಯಲ್ಲಿ ಜನಿಸಿದರು. ಕೇವಲ 5ನೇ ವಯಸ್ಸಿಗೆ ಅವರು ಬಾಲ ಕಲಾವಿದೆಯಾಗಿ ನಟನೆಯಲ್ಲಿ ತೊಡಗಿಕೊಂಡರು. ಈಗಾಗಲೇ ಅವರು 100ಕ್ಕೂ ಅಧಿಕ ಕಮರ್ಷಿಯಲ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಾರಾ ಅರ್ಜುನ್ ಈ ಹಿಂದೆ ಎ.ಎಲ್.ವಿಜಯ್ ನಿರ್ದೇಶಿಸಿದ್ದ 'ದೈವ ತಿರುಮಗಳ್' ತಮಿಳು ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಜತೆಗೆ ಮಗಳ ಪಾತ್ರ ನಟಿಸಿ ಗಮನ ಸೆಳೆದಿದ್ದಾರೆ. ಆಗಿನ್ನೂ ಸಾರಾಗೆ 5-6 ವರ್ಷ. ಇವರ ನಟನೆಗೆ ಸಾಕಷ್ಟು ಮೆಚ್ಚುಗೆ ಲಭಿಸಿತ್ತು. ಅದಲ್ಲದೆ ಹಿಂದಿ, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.

'ಏಕ್ ಥಿ ದಯಾನ್', 'ಜಜ್ಬಾ' ಮತ್ತು 'ದಿ ಸಾಂಗ್ ಆಫ್ ಸ್ಕಾರ್ಪಿಯಾನ್ಸ್' ನಂತಹ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ 'ಸೈವಂ', 'ಸಿಲು ಕರುಪಟ್ಟಿ' ಮತ್ತು ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್: ಭಾಗ 1 ಮತ್ತು 2' ಚಿತ್ರಗಳಲ್ಲಿಯೂ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಸಾರಾ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲನಟಿ ಎನ್ನಲಾಗುತ್ತಿದೆ. 2023ರಲ್ಲಿ ಅವರು 18 ವರ್ಷದವರಾಗಿದ್ದಾಗ ಸುಮಾರು 10 ಕೋಟಿ ರೂ.ಗಳವರೆಗೆ ಸಂಪಾದನೆ ಮಾಡಿದ್ದಾರೆ. ಸಾರಾ 19 ವರ್ಷದಲ್ಲಿದ್ದಾಗ ಅವರಿಗೆ ‘ಧುರಂಧರ್’ ಸಿನಿಮಾ ಆಫರ್ ಬಂತು. ಇದೀಗ 'ಉರಿ' ಸಿನಿಮಾ ಮಾಡಿದ್ದ ಆದಿತ್ಯ ಧಾರ್ ನಿರ್ದೇಶನ ಮಾಡಿರುವ 'ಧುರಂಧರ್' ಸಿನಿಮಾದಲ್ಲಿ ನಾಯಕಿಯಾಗಿ ಸಾರಾ ಅರ್ಜುನ್ ಕಾಣಿಸಿಕೊಂಡಿದ್ದಾರೆ

ಈಗಿನ್ನೂ ಸಾರಾಗೆ 20 ವರ್ಷ ಆಗಿದ್ದು ರಣವೀರ್ ಸಿಂಗ್ಗೆ 40 ವರ್ಷ. ಇಬ್ಬರ ಮಧ್ಯೆ 20 ವರ್ಷಗಳ ಅಂತರ ಇದೆ. ಮಗಳ ವಯಸ್ಸಿನವರ ಜತೆ ರೊಮ್ಯಾನ್ಸ್ ಮಾಡೋಕೆ ಹೇಗೆ ಸಾಧ್ಯ ಎಂದು ನೆಟ್ಟಿಗರು ಈ ಬಗ್ಗೆ ಟೀಕೆ ಮಾಡುತ್ತಿದ್ದಾರೆ. 'ಧುರಂಧರ್' ಚಿತ್ರವು 2025ರ ಡಿಸೆಂಬರ್ 5ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.