Dilip Raj: 'ಹಿಟ್ಲರ್ ಕಲ್ಯಾಣ' ಖ್ಯಾತಿಯ ನಟ ದಿಲೀಪ್ ರಾಜ್ ನಿಧನ; ಇವರ ಸಿನಿ ಪಯಣ ಹೇಗಿತ್ತು?
ಸಿನಿಮಾ ಮತ್ತು ಕಿರುತೆರೆಯಲ್ಲಿ ಖ್ಯಾತಿ ಪಡೆದಿದ್ದ ನಟ ದಿಲೀಪ್ ರಾಜ್ ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 48ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದದ್ದು, ಚಿತ್ರರಂಗವೇ ಕಂಬನಿ ಮಿಡಿದಿದೆ. ಸಿನಿಮಾ, ಸೀರಿಯಲ್ ಮೂಲಕ ಪ್ರೇಕ್ಷಕರ ಗಮನ ಸೆಳೆದ ಅವರು ಅಪಾರ ಅಭಿಮಾನಿಗಳನನು ಹೊಂದಿದ್ದಾರೆ.
ಹೃದಯಾಘಾತ
ಮನೆಯಲ್ಲೇ ದಿಲೀಪ್ ರಾಜ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಬದುಕುಳಿಯಲಿಲ್ಲ. ದಿಲೀಪ್ ರಾಜ್ ಅವರ ನಿಧನವು ಚಿತ್ರರಂಗಕ್ಕೆ ಹಾಗೂ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ದೊಡ್ಡ ಆಘಾತ ತಂದಿತ್ತಿದೆ.
ಕೊರಿಯಾಗ್ರಾಫಿಗೂ ಸೈ
ಕಾಲೇಜು ದಿನಗಳಲ್ಲಿಯೇ ನೃತ್ಯ ನಿರ್ದೇಶನದಲ್ಲಿ ಪರಿಣಿತ ಹೊಂದಿದ್ದ ದಿಲೀಪ್ ನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2005ರಲ್ಲಿ ತೆರೆಕಂಡ 'ಬಾಯ್ ಫ್ರೆಂಡ್' ಸಿನಿಮಾದಲ್ಲಿ ನಾಯಕನಾಗಿ ಪದಾರ್ಪಣೆ ಮಾಡಿದರು. ಪುನೀತ್ ರಾಜ್‌ಕುಮಾರ್ ಅಭಿನಯನದ 'ಮಿಲನ' ಚಿತ್ರದಲ್ಲಿ ಖಳ ನಾಯಕನಾಗಿ ಜನಪ್ರಿಯರಾದರು.
ಜನಪ್ರಿಯ ಧಾರಾವಾಹಿ
ಧಾರಾವಾಹಿಗಳ ಮೂಲಕ ಮನರಂಜನೆ ಕ್ಷೇತ್ರಕ್ಕೆ ಕಾಲಿಟ್ಟ ದಿಲೀಪ್ ರಾಜ್, ಸಿನಿಮಾ ಮಾಡ್ತಾನೇ ಮತ್ತೆ ಕಿರುತೆರೆಗೆ ಬಂದಿದ್ದರು. ʼಕ್ಷಣ ಕ್ಷಣʼ, ʼ7 ಓಕ್ಲಾಕ್ʼ, ʼಲವ್ ಗುರು', ಇತ್ತೀಚೆಗೆ ಹಿಟ್ ಪಡೆದ 'ಲವ್ ಮಾಕ್ಟೇಲ್ 3' ಸಿನಿಮಾದಲ್ಲೂ ನಟಿಸಿದ್ದರು.
ನಿರ್ಮಾಪಕರಾಗಿಯೂ ಜನಪ್ರಿಯ
ಕೇವಲ ಹೀರೋ ಅಲ್ಲದೆ ಪೋಷಕ ಪಾತ್ರಗಳಲ್ಲಿ ದಿಲೀಪ್ ರಾಜ್ ನಟಿಸಿದ್ದು, ನಿರ್ಮಾಪಕನಾಗಿ, ರಿಯಾಲಿಟಿ ಶೋಗಳಲ್ಲಿ ನಿರೂಪಕನಾಗಿಯೂ ಅವರು ಗುರುತಿಸಿಕೊಂಡಿದ್ದರು. ʼಹಿಟ್ಲರ್ ಕಲ್ಯಾಣʼ ಧಾರಾವಾಹಿಯಲ್ಲಿ ನಟಿಸಿದ ಅವರು ‘ಪಾರು’, ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದರು. ಇದೀಗ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ ʼಕೃಷ್ಣ ರುಕ್ಕುʼ ಸೀರಿಯಲ್ ನಿರ್ಮಿಸುತ್ತಿದ್ದರು.
ಎ.ಜೆ. ಪಾತ್ರ ಜನಪ್ರಿಯ
'ರಥಸಪ್ತಮಿ' ಸೀರಿಯಲ್‌ನೊಂದಿಗೆ ಕನ್ನಡ ಕಿರುತೆರೆಗೆ ಮರಳಿದ್ದ ದಿಲೀಪ್ ರಾಜ್, ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಹಿಟ್ಲರ್ ಕಲ್ಯಾಣʼ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಧಾರಾವಾಹಿಯನ್ನು ಅವರೇ ನಿರ್ಮಿಸಿದ್ದು, ಹೆಚ್ಚು ಜನಪ್ರಿಯತೆ ತಂದುಕೊಟ್ಟ ಸೀರಿಯಲ್‌ಗಳಲ್ಲಿ ಒಂದು. ಅದರಲ್ಲಿನ ಎ.ಜೆ. ಪಾತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು.
ಡಬ್ಬಿಂಗ್‌ನಲ್ಲೂ ಛಾಪು
20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ನಟನಾಗಿ ಮಾತ್ರವಲ್ಲದೇ ಡಬ್ಬಿಂಗ್ ಕಲಾವಿದನಾಗಿ ಕೂಡ ದಿಲೀಪ್ ರಾಜ್ ಕಾರ್ಯನಿರ್ವಹಿಸಿದ್ದರು.
ಪತ್ನಿಯೂ ನಿರ್ಮಾಪಕಿ
ದಿಲೀಪ್ ರಾಜ್ ವೈಯಕ್ತಿಕ ಜೀವನದಲ್ಲೂ ಫ್ಯಾಮಿಲಿ ಮ್ಯಾನ್ ಆಗಿದ್ದರು. ಅವರು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದರು. ಇವರದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು ಪತ್ನಿ ಶ್ರೀವಿದ್ಯಾ ಕೂಡ ನಿರ್ಮಾಪಕಿಯಾಗಿ ಹೆಸರು ಪಡೆದಿದ್ದಾರೆ.
ಏನಾಗಿತ್ತು?
ಇನ್ನು ನಟ ದಿಲೀಪ್ ರಾಜ್ ಅವರಿಗೆ ಮನೆಯಲ್ಲಿ ಹಠಾತ್ ಆರೋಗ್ಯ ಸಮಸ್ಯೆ ಕಾಣಿಸಿದ್ದು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.