Shiva Rajkumar: ಸೆಂಚುರಿ ಸ್ಟಾರ್ಗೆ ಹುಟ್ಟುಹಬ್ಬದ ಸಂಭ್ರಮ; ಶಿವರಾಜ್ ಕುಮಾರ್ ಸಿನಿ ಜರ್ನಿ ಹೇಗಿತ್ತು ಗೊತ್ತಾ?
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ ವಿಶೇಷ ಅಭಿನಯದ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ನಟರಾಗಿದ್ದಾರೆ. ಇಂದು ಅವರು 63ನೇ ಜನ್ಮ ದಿನದ ಸಂಭ್ರಮದಲ್ಲಿದ್ದು ಅವರ ಸಾಧನೆ ಬಹುತೇಕರಿಗೆ ಸ್ಫೂರ್ತಿ ಎಂದರೂ ತಪ್ಪಾಗದು. ವರನಟ ಡಾ. ರಾಜ್ ಕುಮಾರ್ ಅವರ ಪುತ್ರರಾಗಿದ್ದರೂ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ಶಿವರಾಜ್ ಕುಮಾರ್ ಅವರ ಜನ್ಮದಿನಕ್ಕೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಇವರ ವೃತ್ತಿ ಬದುಕು ವೈಯಕ್ತಿಕ ಜೀವನದ ಕೆಲವು ಕುತೂಹಲಕರ ಮಾಹಿತಿಗಳು ಇಲ್ಲಿವೆ.



ವರನಟ ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರ ವಿವಾಹವಾಗಿ 9ವರ್ಷದ ಬಳಿಕ 1962ರ ಜುಲೈ 12ರಂದು ಶಿವರಾಜ್ ಜನನವಾಯಿತು. ಆಗ ಡಾ. ರಾಜ್ ಕುಟುಂಬದಲ್ಲಿ ಮಕ್ಕಳೇ ಇರಲಿಲ್ಲವಾದ ಕಾರಣ ಇಡೀ ಕುಟುಂಬದ ಮುದ್ದು ಮಗನಾಗಿ ಶಿವರಾಜ್ ಕುಮಾರ್ ಬೆಳೆದರು. ತಮ್ಮ ತಂದೆಯಿಂದಲೇ ಪ್ರೇರಣೆ ದೊರೆತು ಶ್ರೀನಿವಾಸ ಕಲ್ಯಾಣ ಸಿನಿಮಾ ಮೂಲಕ ಬಾಲ ಕಲಾವಿದರಾಗಿ ಸಿನಿಮಾ ಇಂಡ್ರಸ್ಟ್ರಿಗೆ ಪಾದಾರ್ಪಣೆ ಮಾಡಿದರು.

ವಿಜ್ಞಾನ ಪದವಿ ವ್ಯಾಸಾಂಗ ಮುಗಿದ ಬಳಿಕ ಇವರು ತಮ್ಮ ತಾಯಿ ಪಾರ್ವತಮ್ಮ ನಿರ್ಮಾಣದ ಆನಂದ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಸಿನಿಮಾ ಕ್ಷೇತ್ರದಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ಈ ಸಿನಿಮಾದಲ್ಲಿ ಅವರ ಅಭಿನಯಕ್ಕೆ ಸಿನಿಮಾ ಎಕ್ಸ್ ಪ್ರೆಸ್ ಪ್ರಶಸ್ತಿ ಕೂಡ ಲಭಿಸಿತ್ತು. 1986ರಲ್ಲಿ ತೆರೆ ಕಂಡ ರತಸಪ್ತಮಿ, 1987ರಲ್ಲಿ ಮನಮೆಚ್ಚಿದ ಹುಡುಗಿ ಕೂಡ ಸೂಪರ್ ಹಿಟ್ ಆಗಿ ಇವರಿಗೆ ಖ್ಯಾತಿ ನೀಡಿತ್ತು.

ಸಂಯುಕ್ತ, ಇನ್ ಸ್ಪೆಕ್ಟರ್ ವಿಕ್ರಂ, ಆಸೆಗೊಬ್ಬ ಮೀಸೆಗೊಬ್ಬ, ರಣರಂಗ ಸಿನಿಮಾದಲ್ಲಿ ಅಭಿನ ಯಿಸಿದ್ದು ಈ ಸಿನಿಮಾ ಕೂಡ ಪ್ರೇಕ್ಷಕರ ಮನಗೆದ್ದಿತ್ತು. ಇದಾದ ಬಳಿಕ 1990ರ ದಶಕದಲ್ಲಿ ನಟ ಉಪೇಂದ್ರ ನಿರ್ದೇಶನದ ಓಂ ಸಿನಿಮಾದಲ್ಲಿ ಆಭಿನಯಿಸಿ ಖಡಕ್ ಪಾತ್ರದಲ್ಲಿ ರಗಡ್ ಆಗಿ ಮಿಂಚಿದರು.

ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, ಎಕೆ 47, ಅಶೋಕ, ಸಂತ, ಜೋಗಿ, ಅಸುರ, ಚಿಗುರಿದ ಕನಸು, ಅಣ್ಣ- ತಂಗಿ, ತವರಿಗೆ ಬಾ ತಂಗಿ, ದೇವರು ಕೊಟ್ಟ ತಂಗಿ, ಗಲಾಟೆ ಅಳಿಯಂದ್ರು, ಯಾರೇ ನೀ ಅಭಿಮಾನಿ, ಅಂಡಾಮಾನ್ , ಜೋಡಿಹಕ್ಕಿ, ರೌಡಿ ಅಳಿಯ, ಲಕ್ಷ್ಮೀ, ಶಿವ, ಕಬ್ಜ , ವೇದಾ ಸೇರಿದಂತೆ 130ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಮಾತ್ರವಲ್ಲದೆ ಹೊರ ರಾಜ್ಯದ ಸಿನಿಮಾದಿಂದ ಕೂಡ ನಟ ಶಿವರಾಜ್ ಕುಮಾರ್ ಗುರುತಿಸಿ ಕೊಂಡಿದ್ದಾರೆ. ಜೈಲರ್ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಅಭಿನಯಿಸಿ ಅಪಾರ ಅಭಿ ಮಾನಿಗಳ ಮನಗೆದ್ದಿದ್ದಾರೆ. ಓಂ ಸಿನಿಮಾದ ಅದ್ಭುತ ಅಭಿನಯಕ್ಕೆ ಫಿಲ್ಮ್ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಜೋಗಿ, ಹೃದಯ ಹೃದಯ, ಚಿಗುರಿದ ಕನಸು ಚಿತ್ರಗಳಲ್ಲಿ ಅಭಿನಯಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. 2014 ರಲ್ಲಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನು ಕೂಡ ಪಡೆದಿದ್ದಾರೆ.

ಸದ್ಯ ಅವರಿಗೆ ಸಿನಿಮಾ ಆಫರ್ ಚೆನ್ನಾಗಿ ಬರುತ್ತಿದೆ. 666ಆಪರೇಶನ್ ಡ್ರೀಮ್ ಥಿಯೇಟರ್, ಮನ ಮೋಹಕ, ನೀ ಸಿಗೊವರೆಗೂ, ಭೈರವನ ಕೊನೆ ಪಾಠ, ಬಾದ್ ಷಾ, ಶಿವಣ್ಣ 131, ಎ ಫಾರ್ ಆನಂದ್, ಸಿಂಹ, 45, ಉತ್ತರಕಾಂಡ, ಪೆದ್ದಿ ಇತರ ಸಾಲು ಸಾಲು ಸಿನಿಮಾ ಆಫರ್ ನಟ ಶಿವರಾಜ್ ಕುಮಾರ್ ಅವರಿಗೆ ಬಂದಿದ್ದು ಇದರ ಶೂಟಿಂಗ್ ಕೆಲಸ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದಾರೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಈಗ ವಯಸ್ಸು 63 ವರ್ಷವಾಗಿದ್ದರೂ ಅವರ ಜೀವನೋತ್ಸಾಹ ನಿಜಕ್ಕೂ ಅಚ್ಚರಿ ಎನಿಸುವಂತಿದೆ. ಕ್ಯಾನ್ಸರ್ ನಿಂದ ಬಳಲಿದ್ದಾಗಲೂ ಅಂಜದೆ ಅದಕ್ಕೆ ಚಿಕಿತ್ಸೆ ಪಡೆದು ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅವರ ಇಷ್ಟೇಲ್ಲ ವೃತ್ತಿ ಜೀವನದ ಸಾಧನೆಗೆ ಡಾ. ರಾಜ್ ಕುಟುಂಬ ಹಾಗೂ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರ ಬೆಂಬಲ ತುಂಬಾನೆ ಇದೆ ಎನ್ನಬಹುದು. ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಬಳಿಕ ಈ ವರ್ಷದ ಬರ್ತ್ಡೇ ಅವರಿಗೆ ತುಂಬಾ ವಿಶೇಷ ಎನಿಸಿಕೊಂಡಿದೆ.