Summer Jewel Fashion 2026: ಬೇಸಿಗೆಗೆ ಮರಳಿದ ಲೈಟ್‌ವೇಟ್ ಟ್ಯಾಟೂ ಚೋಕರ್ಸ್
ದಶಕಗಳ ಹಿಂದೆ ಟ್ರೆಂಡಿಯಾಗಿದ್ದ ಲೈಟ್‌ವೇಟ್ ಟ್ಯಾಟೂ ಚೋಕರ್ಸ್ ಇದೀಗ ಹೊಸ ವಿನ್ಯಾಸದಲ್ಲಿ ಈ ಸೀಸನ್‌ಗೆ ಮರಳಿವೆ. ಕತ್ತಿಗೆ ಧರಿಸಿದಾಗ ಅಂಟಿಕೊಂಡಂತೆ ಕಾಣಿಸುವ ಇವು ನೋಡಲು ಟ್ಯಾಟೂ ಡಿಸೈನ್ ಬಿಡಿಸಿದಂತೆ ಕಾಣುತ್ತವೆ. ತೂಕವಿಲ್ಲದ ಚೋಕರ್‌ಗಳಿವು. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ದಶಕಗಳ ಹಿಂದೆ ಮಾಡರ್ನ್ ಬೆಡಗಿಯರ ಫಂಕಿ ಜ್ಯುವೆಲ್ ಲಿಸ್ಟ್‌ನಲ್ಲಿದ್ದ ಟ್ಯಾಟು ಚೋಕರ್‌ಗಳು ಈ ಸೀಸನ್‌ನಲ್ಲಿ ಹೊಸ ವಿನ್ಯಾಸದಲ್ಲಿ ಆಗಮಿಸಿವೆ.
ಏನಿದು ಟ್ಯಾಟೂ ಚೋಕರ್ಸ್?
ಕತ್ತಿಗೆ ಧರಿಸಿದಾಗ ಅಂಟಿಕೊಂಡಂತೆ ಕಾಣಿಸುವ ಇವು ನೋಡಲು ಟ್ಯಾಟೂ ಡಿಸೈನ್ ಬಿಡಿಸಿದಂತೆ ಕಾಣುತ್ತವೆ. ತೂಕವಿಲ್ಲದ ಚೋಕರ್‌ಗಳಿವು! ಹಾಗೆಂದು ಇವೇನೂ ಹೊಸ ಕಾನ್ಸೆಪ್ಟ್‌ನ ಚೋಕರ್‌ಗಳಲ್ಲ! ನಯಾ ಡಿಸೈನ್ ಹಾಗೂ ಹೊಸ ವೆರೈಟಿ ಕಾನ್ಸೆಪ್ಟ್‌ನಲ್ಲಿ ಬಂದಿವೆ ಅಷ್ಟೇ! ಸದ್ಯಕ್ಕೆ ಲೈಟ್‌ವೇಟ್ ಫಂಕಿ ಆಕ್ಸೆಸರೀಸ್‌ನ ಟಾಪ್ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ಜನ್ನತ್.
ಲೈಟ್‌ವೇಟ್ ಫಂಕಿ ಟ್ಯಾಟೂ ಚೋಕರ್ಸ್
ನಾನಾ ಶೈಲಿಯ ಸಿಂಪಲ್ ಟ್ಯಾಟೂ ಡಿಸೈನ್‌ಗಳಿಂದ ಹಿಡಿದು ಕಾಂಪ್ಲಿಕೇಟೆಡ್ ಟ್ಯಾಟೂ ಡಿಸೈನ್‌ನ ಚೋಕರ್‌ಗಳು ಫ್ಯಾನ್ಸಿ ಶಾಪ್‌ಗಳಲ್ಲಿ ದೊರೆಯುತ್ತಿವೆ. ಧರಿಸಿದಾಗ ನೋಡಲು ನೆಕ್ ಮೇಲೆ ಟ್ಯಾಟೂ ಅಂಟಿಸಿದ ರೀತಿಯಲ್ಲಿಯೇ ಇವು ಕಾಣಿಸುತ್ತವೆ. ಧರಿಸಿದರೂ ಭಾರವೆನಿಸುವುದಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ವೆರೈಟಿ ಡಿಸೈನ್ಸ್‌ನಲ್ಲಿ ಟ್ಯಾಟೂ ಚೋಕರ್ಸ್
ಸುರುಳಿಯಾಕಾರ, ಮಧ್ಯೆ ಮಧ್ಯೆ ಬೀಡ್ಸ್, ಬ್ಲಾಕ್‌ಪರ್ಲ್, ಬಾರ್ಡರ್ ಚಿತ್ತಾರ ಹೀಗೆ ಸಾಮಾನ್ಯ ಡಿಸೈನ್‌ಗಳಿಂದಿಡಿದು ಎರಡ್ಮೂರಿಂಚಿನ ಟ್ಯಾಟೂ ಡಿಸೈನ್‌ನವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಕೆಲವು ವೆಲ್ವೆಟ್ ಕ್ಲಾತ್‌ನಲ್ಲೂ ಲಭ್ಯ. ಇನ್ನು ಕೆಲವು ಲೇಯರ್ ಡಿಸೈನ್‌ನಲ್ಲಿಯೂ ದೊರೆಯುತ್ತವೆ ಎನ್ನುತ್ತಾರೆ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಫಂಕಿ ಜ್ಯುವೆಲ್ ಮಾರಾಟ ಮಾಡುವ ಮಾರಾಟಗಾರರಾದ ಜೀವನ್.
ಬ್ಲಾಕ್ ಶೇಡ್ ಟ್ಯಾಟೂ ಚೋಕರ್ಸ್‌ಗೆ ಬೇಡಿಕೆ
ಅತಿ ಹೆಚ್ಚು ಟ್ರೆಂಡ್ನಲ್ಲಿರುವ ಟ್ಯಾಟೂ ಚೋಕರ್ಸ್‌ನಲ್ಲಿ ಬ್ಲಾಕ್ ಕಲರ್‌ನವಕ್ಕೆ ಹೆಚ್ಚು ಬೇಡಿಕೆ. ಇವು ಎಲ್ಲಾ ಬಗೆಯ ಉಡುಪುಗಳಿಗೂ ಮ್ಯಾಚ್ ಆಗುತ್ತವೆ ಎನ್ನುತ್ತಾರೆ ಜ್ಯುವೆಲ್ ಪ್ರೇಮಿ ರೀಟಾ. ಅವರ ಪ್ರಕಾರ, ಬ್ಲಾಕ್ ವರ್ಣಗಳ ಟ್ಯಾಟೂ ಚೋಕರ್ಸ್ ಯಾವುದೇ ವೆಸ್ಟರ್ನ್ ಕಾನ್ಸೆಪ್ಟ್‌ನ ಉಡುಪುಗಳಿಗಾದರೂ ಧರಿಸಬಹುದಂತೆ!
- ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತವೆ.
- ಸ್ಟ್ರೀಟ್ ಶಾಪ್‌ಗಳಲ್ಲಿ ಲಭ್ಯ.
- ಸ್ಪ್ರಿಂಗ್‌ನಂತಹ ಈ ಚೋಕರ್ಸ್ ಯಾರೂ ಬೇಕಾದರೂ ಧರಿಸಬಹುದು.
- ಬಾಳಿಕೆ ಹೆಚ್ಚು ಬರುತ್ತವೆ.