Summer Trend 2026: ಬಿಸಿಲ ಝಳ ಹೆಚ್ಚಳ; ಉದ್ಯಾನನಗರಿಯಲ್ಲಿ ಪೂಲ್ ಪಾರ್ಟಿಗಳ ಅಬ್ಬರ!
ದಶಕಗಳ ಹಿಂದೆ ಉದ್ಯಾನನಗರಿಗೆ ಲಗ್ಗೆ ಇಟ್ಟಿದ್ದ ಪೂಲ್ ಪಾರ್ಟಿ ಕಾನ್ಸೆಪ್ಟ್‌ನ ಅಬ್ಬರ ಈ ಸೀಸನ್‌ನಲ್ಲಿ ಜೋರಾಗಿದೆ. ಬಿಸಿಲ ಝಳಕ್ಕೆ ಜೆನ್ ಜಿ ಹೈಕಳು ಇಂತಹ ಪಾರ್ಟಿಗಳತ್ತ ಮುಖ ಮಾಡುತ್ತಿದ್ದಾರೆ. ಈ ಕುರಿತಂತೆ ಇಲ್ಲಿದೆ ವರದಿ.
ಉದ್ಯಾನನಗರಿಯಲ್ಲಿ ಪೂಲ್ ಪಾರ್ಟಿಗಳ ಅಬ್ಬರ ಜೋರಾಗಿದೆ. ಹೌದು, ದಶಕಗಳ ಹಿಂದೆ ಬೆಂಗಳೂರಿಗೆ ಕಾಲಿಟ್ಟಿದ್ದ ಈ ಪಾರ್ಟಿ ಕಾನ್ಸೆಪ್ಟ್ ಇದೀಗ ಹೆಚ್ಚಾಗಿದೆ. ಅಲ್ಟ್ರಾ ಮಾಡರ್ನ್ ಜೆನ್ ಜಿ ಹೈಕಳು, ಪೇಜ್ 3 ಸೆಲೆಬ್ರೆಟಿಗಳು ಹಾಗೂ ಸ್ವಿಮ್ ಲವರ್ಸ್ ಪೂಲ್ ಪಾರ್ಟಿಗಳತ್ತ ಒಲವು ತೋರಿಸತೊಡಗಿದ್ದಾರೆ. ಪರಿಣಾಮ ವೀಕೆಂಡ್‌ನಲ್ಲಿ ಬಗೆಬಗೆಯ ಪೂಲ್ ಪಾರ್ಟಿಗಳು ಹೆಚ್ಚೆಚ್ಚು ಆಯೋಜನೆಗೊಳ್ಳತೊಡಗಿವೆ.
ಏನಿದು ಪೂಲ್ ಪಾರ್ಟಿ?
ಪೂಲ್ ಪಾರ್ಟಿಗಳಲ್ಲೂ ನಾನಾ ವಿಧಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಪೂಲ್ ಇನ್ ಹಾಗೂ ಅಥವಾ ಪೂಲ್ ಸೈಡ್ ಪಾರ್ಟಿ ಹೆಚ್ಚು ಪಾಪುಲರ್ ಆಗಿದೆ. ಈ ಪಾರ್ಟಿಗಳು ತಮ್ಮದೇ ಆದ ಡ್ರೆಸ್‌ಕೋಡ್ ಹೊಂದಿರುತ್ತವೆ.
ಬಹುತೇಕ ಲಕ್ಷುರಿ ಸ್ಟಾರ್ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ನಡೆಯುವ ಈ ಪಾರ್ಟಿಗಳಲ್ಲಿ ಆಹ್ವಾನಿತರಿಗೆ ಮಾತ್ರ ಎಂಟ್ರಿ. ದುಬಾರಿ ಎಂಟ್ರಿ ಶುಲ್ಕ ಪಡೆಯಲಾಗುತ್ತದೆ ಎನ್ನುವ ಆಯೋಜಕರ ಪ್ರಕಾರ, ಈ ಸೀಸನ್‌ನಲ್ಲಿ ಮಾತ್ರ ನಡೆಯುತ್ತವೆ ಎನ್ನುತ್ತಾರೆ.
ಬಿಂದಾಸ್ ಪಾರ್ಟಿ ಇದು
ಸ್ವಿಮ್ಮಿಂಗ್ ಪೂಲ್‌ನ ಸುತ್ತಮುತ್ತ ಇಲ್ಲವೇ ಪೂಲ್‌ನೊಳಗೆ ನರ್ತಿಸುತ್ತಾ, ಓಡಾಡುತ್ತಲೇ ಪಾರ್ಟಿ ಮಾಡಬಹುದಾದಂತಹ ಸದಾವಕಾಶ ಇಲ್ಲಿ ನೀಡಲಾಗಿರುತ್ತದೆ. ಅಷ್ಟೇಕೆ! ಮಸ್ತಿ ಮಾಡುತ್ತಾ ಸ್ನಾಕ್ಸ್ ಜತೆಗೆ ಡ್ರಿಂಕ್ಸ್ ಮಾಡುವ ಮುಕ್ತ ಅವಕಾಶ ಕೂಡ ಇಲ್ಲಿರುತ್ತದೆ. ಸಾಕಷ್ಟು ಪೂಲ್ ಪಾರ್ಟಿಗಳಲ್ಲಿ ಕರೋಕೆ, ಗಾನ-ಬಜಾನ, ಡಿಜೆ ಮ್ಯೂಸಿಕ್, ಸ್ಪೋರ್ಟ್ಸ್, ಗೇಮ್ಸ್ ಕೂಡ ನಡೆಸಲಾಗುತ್ತದೆ ಎನ್ನುತ್ತಾರೆ ಪೂಲ್ ಪಾರ್ಟಿಯೊಂದರ ಆಯೋಜಕರು.
ಸಮ್ಮರ್ ಪಾರ್ಟಿ ಥೀಮ್‌ಗೆ ತಕ್ಕ ಪೂಲ್ ಪಾರ್ಟಿ
ಪಾರ್ಟಿ ಆಯೋಜಕರ ಪ್ರಕಾರ, ಮುಂಬಯಿ ಹಾಗೂ ದಿಲ್ಲಿ ಹೊರತುಪಡಿಸಿದಲ್ಲಿ, ಇತ್ತೀಚೆಗೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಪೂಲ್ ಪಾರ್ಟಿಗಳು ನಡೆಯುತ್ತವಂತೆ.
ಗ್ರೂಪ್ ಪೂಲ್ ಪಾರ್ಟಿ
ಇನ್ನು, ಫ್ಯಾಮಿಲಿ ಹಾಗೂ ಕಾರ್ಪೊರೇಟ್ ಕ್ಷೇತ್ರದವರು ನಡೆಸುವ ಪೂಲ್ ಪಾರ್ಟಿಗಳ ಲುಕ್ ಕಂಪ್ಲೀಟ್ ಚೇಂಜ್ ಆಗಿರುತ್ತದೆ. ಸಂಡೇ ಬ್ರಂಚ್, ಲಂಚ್‌ನಂತಹ ಪಾರ್ಟಿಗಳು ಪೂಲ್‌ಸೈಡ್‌ನಲ್ಲಿ ನಡೆಯುತ್ತವೆ. ಅಂದಹಾಗೆ, ಪೂಲ್ ಪಕ್ಕದಲ್ಲಿ ಪಾರ್ಟಿಗಳು ಆಯೋಜನೆ ಮಾಡಲು ಕಾರಣವೂ ಇದೆ. ಈ ಸೀಸನ್‌ನಲ್ಲಿ ಸೆಕೆ ಹೆಚ್ಚು. ನೀರಿನ ಬಳಿ ಸ್ಥಳ ತಂಪಾಗಿರುತ್ತದೆ. ನೋಡಲು ಅಟ್ರಾಕ್ಟಿವ್ ಆಗಿರುತ್ತದೆ. ಹಾಗಾಗಿ ಬಹುತೇಕ ಮಂದಿ ಪೂಲ್ ಪಾರ್ಟಿ ಪ್ರಿಯರಾಗಿರುತ್ತಾರೆ ಎನ್ನುತ್ತಾರೆ ಪೂಲ್ ಪಾರ್ಟಿಯೊಂದರ ಆಯೋಜಕರಾದ ಜೋಸೆಫ್.
ಪೂಲ್ ಪಾರ್ಟಿಗೂ ನಿಯಮಗಳುಂಟು
- ಪಾರ್ಟಿಯಲ್ಲಿ ಭಾಗವಹಿಸುವವರಿಗೆ ಡ್ರೆಸ್‌ಕೋಡ್ ಇರುತ್ತದೆ.
- ಪೂಲ್ ಇನ್ ಪಾರ್ಟಿಯಲ್ಲಿ ಭಾಗವಹಿಸುವವರಿಗೆ ಸ್ವಿಮ್ಮಿಂಗ್ ಬರುವುದು ಅಗತ್ಯ.
- ಎಥ್ನಿಕ್ ಉಡುಪಿಗೆ ಇಲ್ಲಿಅವಕಾಶವಿಲ್ಲ.
- ಆಯಾ ಪೂಲ್ ಪಾರ್ಟಿಗೆ ತಕ್ಕಂತೆ ನಿಯಮಗಳು ಬದಲಾಗುತ್ತವೆ.