Karnataka Rajyotsava: ಕನ್ನಡ ನಾಡು ನುಡಿಯ ಶ್ರೇಷ್ಠತೆ ಸಾರುವ ಚಿತ್ರ ಗೀತೆಗಳಿವು
ಕರ್ನಾಟಕ ರಾಜ್ಯೋತ್ಸವ ಬಂತೆಂದೆರೆ ನಾಡಿನೆಲ್ಲೆಡೆ ಸಂಭ್ರಮದ ವಾತಾವರಣ. ಕನ್ನಡದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳನ್ನು ಸಾರುವ ಅನೇಕ ವಿಚಾರಗಳು ರಾಜ್ಯೋತ್ಸವದಂದು ಆಗಾಗ ಚರ್ಚಿಸಲ್ಪಡುತ್ತದೆ. ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಿಂದ ಹಿಡಿದು ಸಾಂಸ್ಕೃತಿಕ ಕಾರ್ಯಕ್ರಮಗಳವರೆಗೂ ಕನ್ನಡ ತಾಯಿ ಭುವನೇಶ್ವರಿಯನ್ನು ಸ್ಮರಿಸಲಾಗುತ್ತದೆ. ಅದರಲ್ಲೂ ಕನ್ನಡದ ಬಗ್ಗೆ ನಮ್ಮ ನಾಡು ನುಡಿಯನ್ನು ಜಗತ್ಪಸಿದ್ಧವಾಗಿಸುವ ಅನೇಕ ಸಿನಿಮಾ ಹಾಡುಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಎಲ್ಲೆಡೆ ಆಗಾಗ ಮನನ ಮಾಡುವ ಕನ್ನಡ ಸೂಪರ್ ಹಿಟ್ ರಾಜ್ಯೋತ್ಸವ ಹಾಡುಗಳಿವೆ. ಆ ಹಾಡುಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು...
ಡಾ. ರಾಜ್ ಕುಮಾರ್ ಅಭಿನಯದ ʼಶಬ್ಧವೇದಿʼ ಸಿನಿಮಾದ ಸೂಪರ್ ಹಿಟ್ ಕನ್ನಡದ ಹಾಡು ಎಂದಾಗ ನಮಗೆಲ್ಲ ಮೊದಲು ನೆನಪಾಗುವುದೇ ʼಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕುʼ. ಇದರಲ್ಲಿ ಅಣ್ಣವ್ರು ಕನ್ನಡ ನಾಡಿನ ಸಂಸ್ಕೃತಿ, ನೆಲೆಬೀಡಿನ ತಾಣ ಎಲ್ಲವನ್ನು ಸೊಗಸಾಗಿ ವಿವರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಈ ಹಾಡನ್ನು ಶೂಟ್ ಮಾಡಲಾಗಿದ್ದು ಮನ ಮುಟ್ಟುವಂತಿದೆ.
ಕರುನಾಡೇ ಕೈ ಚಾಚಿದೆ ನೋಡೆ
ʼಮಲ್ಲʼ ಸಿನಿಮಾದ ಈ ಹಾಡಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅದ್ಭುತವಾಗಿ ನಟಿಸಿದ್ದಾರೆ. ಕನ್ನಡದ ಸೊಬಗು, ನಾಡು ನುಡಿ, ಜನಪ್ರಿಯ ವಿಚಾರಗಳ ಬಗೆಗಿನ ಸಾಹಿತ್ಯವು ಬಹಳ ಚೆನ್ನಾಗಿ ಮೂಡಿ ಬಂದಿದ್ದು, ಈಗಲೂ ಜನರು ಗುನುಗುವ ಹಾಡಿನಲ್ಲಿ ಇದು ಒಂದು.
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
‘ಸಿಂಹಾದ್ರಿಯ ಸಿಂಹ’ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ‘ಕಲ್ಲಾದರೆ ನಾನು’ ಹಾಡಿನಲ್ಲಿ ಅಭಿನಯಿಸಿದ್ದಾರೆ. ಎಸ್.ಪಿ. ಬಾಲ ಸುಬ್ರಹ್ಮಣ್ಯ ಅವರ ಅದ್ಭುತ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದ್ದು, ಕರುನಾಡಿನ ಸ್ಥಳ ವಿಶೇಷತೆ ಹಾಗೂ ಐತಿಹಾಸಿಕ ಪರಂಪರೆಯ ಮೇಲೆ ಬೆಳಕು ಚೆಲ್ಲುತ್ತದೆ.
ಸಿಂಪಲ್ಲಾಗಿ ಹೇಳ್ತಿನಿ ಕೇಳೆ ನಮ್ಮೂರ ಭಾಷೆ
ʼಮೌರ್ಯʼ ಸಿನಿಮಾದ ಈ ಹಾಡಿನಲ್ಲಿ ಕನ್ನಡವನ್ನು ಸರಳವಾಗಿ ಅರ್ಥೈಸುವ ಬಗೆಯನ್ನು ತಿಳಿಸಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ಆಂಧ್ರದ ಹುಡುಗಿಗೆ ಕನ್ನಡ ಹೇಳಿಕೊಡುವ ಹಾಡು ಇದಾಗಿದ್ದು ಕನ್ನಡ ಜಲ, ನೆಲ ಎಲ್ಲದರ ಮಹತ್ವ ತಿಳಿಸಲಾಗಿದೆ.
ಬೆಳ್ಳಮ್ ಬೆಳಗ ಚೆಲ್ಲೋದಕ್ಕ
ʼಬೃಂದಾವನʼ ಸಿನಿಮಾದ ಈ ಹಾಡಿನಲ್ಲಿ ದರ್ಶನ್ ಮತ್ತು ಕಾರ್ತಿಕಾ ನಾಯರ್ ಕಾಣಿಸಿಕೊಂಡಿದ್ದಾರೆ. ʼಹೇ ಕನ್ನಡ ಮಣ್ಣೇ ಕನ್ನಡ ಹೆಣ್ಣೇ ಕಸ್ತೂರಿ ಕಣೆ ನಂಜಿ...ʼ ಈ ಸಾಲುಗಳು ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಸಾರುತ್ತವೆ. ಈ ಹಾಡು ಕೂಡ ಬಹಳಷ್ಟು ಟ್ರೆಂಡಿಂಗ್‌ನಲ್ಲಿದೆ. ಚಿತ್ರದುದ್ದಕ್ಕೂ ಕನ್ನಡ ಬಾವುಟದ ಕೆಂಪು, ಹಳದಿ ಬಣ್ಣ ಬಳಸಲಾಗಿದೆ.
ಕನ್ನಡ ನಾಡಿನ ಜೀವ ನದಿ...
ವಿಷ್ಣುವರ್ಧನ್, ಖುಷ್ಬೂ ನಟನೆಯ ʼಜೀವ ನದಿʼ ಸಿನಿಮಾದ ಈ ಹಾಡು ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ. ‘ಕನ್ನಡ ನಾಡಿನ ಜೀವ ನದಿ...ʼ ಎಂದು ಆರಂಭವಾಗುವ ಹಾಡು ಕನ್ನಡದ ಬಗ್ಗೆ ಇನ್ನಷ್ಟು ಒಲವನ್ನು ಹೆಚ್ಚಿಸುತ್ತದೆ. ಇದು ಕಾವೇರಿ ನದಿ ಹಾಗೂ ಕರ್ನಾಟಕದ ಮಣ್ಣಿನ ವಿಶೇಷತೆಯನ್ನು ಸಾರಿ ಹೇಳುತ್ತದೆ.
ಕನ್ನಡ ನಾಡಿನ ವೀರ ರಮಣಿಯ..
‘ನಾಗರಹಾವು’ ಚಿತ್ರದಲ್ಲಿ ಬರುವ ‘ಕನ್ನಡ ನಾಡಿನ ವೀರ ರಮಣಿಯ...’ ಹಾಡನ್ನು ಇಂದಿಗೂ ಗುನುಗುವವರಿದ್ದಾರೆ. ವಿಜಯ ಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಮತ್ತು ಪಿ.ಬಿ. ಶ್ರೀನಿವಾಸ್ ಅವರ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು, ಕರ್ನಾಟಕ ರಾಜ್ಯೋತ್ಸವದಂದು ಕೇಳಲೇ ಬೇಕಾದ ಹಾಡು.
ಅವ್ವ ಕಣೋ ಕನ್ನಡ
ಪ್ರೇಮ್ ನಟನೆಯ ‘ಪಲ್ಲಕ್ಕಿ’ ಚಿತ್ರದ ‘ಅವ್ವ ಕಣೋ ಕನ್ನಡ ಹಾಡುʼ ಈ ದಿನ ನೆನಪಿಸುವಂತದ್ದು. ಪ್ರೇಮ್, ರಮಣಿತೊ ಚೌಧರಿ ಮತ್ತು ದೊಡ್ಡಣ್ಣ ನಟಿಸಿದ ʼಪಲ್ಲಕ್ಕಿʼ ಚಿತ್ರದಲ್ಲಿ ಈ ಹಾಡು ಹಿಟ್ ಆಗಿದೆ. ಈ ಹಾಡಿಗೆ ಸಂಗೀತ ನೀಡಿದವರು ಗುರುಕಿರಣ್ ಆಗಿದ್ದು ಕೆ. ನರೇಂದ್ರ ಬಾಬು ಚಿತ್ರ ನಿರ್ದೇಶಿಸಿದ್ದಾರೆ.