Su From So Movie: ಬಾಕ್ಸ್ ಆಫೀಸ್ನಲ್ಲಿ ʼಸು ಫ್ರಮ್ ಸೋʼ ಮ್ಯಾಜಿಕ್; ಸ್ಟಾರ್, ಅಬ್ಬರದ ಪ್ರಚಾರವಿಲ್ಲದೆ ಗೆದ್ದ ಕನ್ನಡದ ಚಿತ್ರಗಳಿವು
ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಯಾಗಿದೆ. ಈ ಬಾರಿಯೂ ಹೊಸ ಪ್ರತಿಭೆಗಳೇ ಸೇರಿಕೊಂಡು ಹೊಸ ಅಧ್ಯಾಯ ಬರೆದಿದ್ದಾರೆ. ಕರಾವಳಿ ಸೊಗಡಿನ ಸು ಫ್ರಮ್ ಸೋ ಸದ್ಯ ಬಾಕ್ಸ್ ಆಪೀಸ್ನಲ್ಲಿ ಅಬ್ಬರಿಸುತ್ತಿದೆ. ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿದ್ದ ಥಿಯೇಟರ್ಗಳಿಗೆ ಜನ ಮುಗಿಬೀಳಲು ಈ ಚಿತ್ರ ಕಾರಣವಾಗಿದೆ. ಆ ಮೂಲಕ ಸೋತು ಸೊರಗಿದ್ದ ಸ್ಯಾಂಡಲ್ವುಡ್ಗೆ ಬೂಸ್ಟ್ ನೀಡಿದೆ. ಸ್ಟಾರ್ಗಳಿಲ್ಲದೆ, ಅದ್ಧೂರಿ ಪ್ರಚಾರವಿಲ್ಲದೆ ತೆರೆಗೆ ಬಂದ ಈ ಸಿನಿಮಾ ರಿಲೀಸ್ ಆದ 3 ದಿನಗಳಲ್ಲೇ ಕೋಟಿ ಕೋಟಿ ರೂ. ಬಾಚಿಕೊಂಡಿದೆ. ಈ ರೀತಿಯ ಮ್ಯಾಜಿಕ್ ಸ್ಯಾಂಡಲ್ವುಡ್ನಲ್ಲಿಯೂ ಈ ಹಿಂದೆಯೂ ನಡೆದಿದೆ. ಅಂದರೆ ಯಾವುದೇ ಸ್ಟಾರ್ಗಳಿಲ್ಲದೆ ರಿಲೀಸ್ ಆದ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅಂತಹ ಪ್ರಮುಖ ಚಿತ್ರಗಳ ವಿವರ ಇಲ್ಲಿದೆ.



ʼರಂಗಿತರಂಗʼ
2015ರಲ್ಲಿ ಸದ್ದಿಲ್ಲದೆ ರಿಲೀಸ್ ಆಗಿ ಬಳಿಕ ಭಾರಿ ಸುದ್ದಿಯಾದ ಚಿತ್ರ ʼರಂಗಿತರಂಗʼ. ಅನೂಪ್ ಭಂಡಾರಿ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಈ ಮಿಸ್ಟರಿ-ಥ್ರಿಲ್ಲರ್ ಸ್ಯಾಂಡಲ್ವುಡ್ನಲ್ಲಿ ಭಾರಿ ಸಂಚಲನ ಮೂಡಿಸಿತು. ಈ ಸಿನಿಮಾದ ಮೂಲಕ ನಾಯಕನಾಗಿ ನಿರೂಪ್ ಭಂಡಾರಿ ಮತ್ತು ನಾಯಕಿಯರಾಗಿ ರಾಧಿಕಾ ನಾರಾಯಣ್ ಮತ್ತು ಆವಂತಿಕಾ ಶೆಟ್ಟಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ವಿಶೇಷ ಎಂದರೆ ಅದೇ ಸಮಯದಲ್ಲಿ ರಿಲೀಸ್ ಆದ ಪ್ಯಾನ್ ಇಂಡಿಯಾ ಚಿತ್ರ, ಬಿಗ್ ಬಜೆಟ್ನ ರಾಜಮೌಳಿ-ಪ್ರಭಾಸ್ ಕಾಂಬಿನೇಷನ್ನ ʼಬಾಹುಬಲಿʼಗೂ ಸೆಡ್ಡು ಹೊಡೆದು ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಯಿತು. ಜತೆಗೆ ಪರಭಾಷಿಕರನ್ನೂ ಸೆಳೆಯಿತು. ಯಾವುದೇ ನಿರೀಕ್ಷೆ ಇಲ್ಲದೆ ತೆರೆಗೆ ಬಂದಿದ್ದರೂ ಉತ್ತಮ ಕಥೆ, ಚಿತ್ರಕಥೆ, ಸಂಗೀತದ ಮೂಲಕ ಗಮನ ಸೆಳೆಯಿತು. ಇಂದಿಗೂ ಈ ಚಿತ್ರ ಕನ್ನಡಿಗರ ಫೆವರೇಟ್ ಎನಿಸಿಕೊಂಡಿದೆ.

ʼತಿಥಿʼ
2016ರಲ್ಲಿ ರಿಲೀಸ್ ಆಗಿ ಗಮನ ಸೆಳೆದ ಮತ್ತೊಂದು ಕನ್ನಡ ಚಿತ್ರ ʼತಿಥಿʼ. ರಾಮ್ ರೆಡ್ಡಿ ನಿರ್ದೇಶನದ ಈ ಸಿನಿಮಾ ಬಿಡುಗಡೆಯಾಗುವ ವೇಳೆ ಸ್ವಲ್ಪವೂ ನಿರೀಕ್ಷೆ ಇರಲಿಲ್ಲ. ವಿಶೇಷ ಎಂದರೆ ಇದರಲ್ಲಿ ಅಭಿನಯಿಸಿದ ಬಹುತೇಕ ಕಲಾವಿದರೆಲ್ಲ ಹೊಸಬರೇ. ಅಭಿನಯದ ಪರಿಚಯ ಇಲ್ಲದವರೂ ಈ ಸಿನಿಮಾದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ತಮ್ಮೇಗೌಡ ಎಸ್., ಚನ್ನೇಗೌಡ, ಅಭಿಷೇಕ್, ಪೂಜಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ ಈ ಚಿತ್ರ ಮಂಡ್ಯ ಭಾಷೆಯನ್ನು, ಅಲ್ಲಿನ ಜನಜೀವನವನ್ನು ಸಮರ್ಥವಾಗಿ ಬಳಸಿಕೊಂಡಿದೆ. ಇದು ಕೂಡ ಭಾಷೆ, ಪ್ರಾದೇಶಿಕ ಗಡಿ ಮೀರಿ ರಾಜ್ಯದ ಪ್ರೇಕ್ಷಕರನ್ನು ಸೆಳೆಯಿತು. ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ.

ʼರಾಮಾ ರಾಮಾ ರೇ...ʼ
ಕನ್ನಡ ಜತೆಗೆ ಪರಭಾಷಿಕರನ್ನೂ ಆಕರ್ಷಿಸಿದ ಈ ಚಿತ್ರ 2016ರಲ್ಲಿ ರಿಲೀಸ್ ಆಯ್ತು. ಕನ್ನಡದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಸತ್ಯ ಪ್ರಕಾಶ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ 'ರಾಮಾ ರಾಮಾ ರೇ...' ಸ್ಟಾರ್ಗಳ ಹಂಗಿಲ್ಲದೆ ಪ್ರೇಕ್ಷರ ಗಮನ ಸೆಳೆಯಿತು. ಕೆ. ಜಯರಾಮ್, ನಟರಾಜ್, ಧರ್ಮಣ್ಣ ಕಡೂರು, ಬಿಂಬಶ್ರೀ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ ಈ ಸಿನಿಮಾ ತೆಲುಗು, ಮರಾಠಿಗೂ ರಿಮೇಕ್ ಆಗಿದೆ. ಕರ್ನಾಟಕ ಸರ್ಕಾರ ನೀಡುವ ರಾಜ್ಯ ಪ್ರಶಸ್ತಿಯೂ ಸಂದಿದೆ.

ʼ6-5=2ʼ
ಹಾರರ್ ಚಿತ್ರಗಳಿಗೆ ಹೊಸದೊಂದು ಭಾಷ್ಯ ಬರೆದ ʼ6-5=2ʼ ವಿಭಿನ್ನವಾಗಿ ತೆರೆಗೆ ಬಂದು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವಲ್ಲಿ ಯಶಸ್ವಿಯಾಯ್ತು. 2013ರಲ್ಲಿ ಬಿಡುಗಡೆಗೊಂಡ ಈ ಚಿತ್ರಕ್ಕೆ ಕೆ.ಎಸ್. ಅಶೋಕ್ ನಿರ್ದೇಶನವಿದೆ. ಯಾವುದೇ ಕೃತಕತೆ ಇಲ್ಲದೆ ತೀರಾ ನ್ಯಾಚುರಲ್ ಆಗಿ ಈ ಸಿನಿಮಾವನ್ನು ತೆರೆಗೆ ತರಲಾಗಿದ್ದು, ದರ್ಶನ್ ಅಪೂರ್ವ, ಕೃಷ್ಣ ಪ್ರಕಾಶ್, ವಿಜಯ್ ಚೆಂಡೂರ್ ಮತ್ತಿತರರು ಪ್ರಮುಖ ಪಾತ್ರ ನಿರ್ವಹಿಸಿದರು. ಯಾವುದೇ ಸ್ಟಾರ್ ನಟರಿಲ್ಲದೆ, ಪ್ರಚಾರದ ಹಂಗಿಲ್ಲದೆ ತೆರೆಗೆ ಬಂದ ಈ ಚಿತ್ರವನ್ನು ಪ್ರೇಕ್ಷಕರು ಎರಡೂ ಕೈಚಾಚಿ ಸ್ವಾಗತಿಸಿದರು. ಈ ಸಿನಿಮಾ ಹಿಂದಿಗೂ ರಿಮೇಕ್ ಆಗಿದೆ. ಟ್ರಕ್ಕಿಂಗ್ ಹೋದಾಗ ಯುವಕರ ಗುಂಪಿಗೆ ಎದುರಾಗುವ ಭಯಾನಕ ಅನುಭವವನ್ನು ಇದು ತೆರೆದಿಡುತ್ತದೆ.

ʼಸು ಫ್ರಮ್ ಸೋʼ
ರಂಗಭೂಮಿ ಹಿನ್ನೆಲೆಯ, ಕರಾವಳಿಯ ಪ್ರತಿಭೆ ಜೆ.ಪಿ. ತುಮಿನಾಡ್ ನಿರ್ದೇಶನದ ಕನ್ನಡದ ಚೊಚ್ಚಲ ಚಿತ್ರ 'ಸು ಫ್ರಮ್ ಸೋ' ಸದ್ಯ ಸ್ಯಾಂಡಲ್ವುಡ್ನಲ್ಲಿ ಧೂಳೆಬ್ಬಿಸಿದೆ. ಕರಾವಳಿ ಸೊಗಡಿನ ಈ ಚಿತ್ರ ಸ್ಟಾರ್ ನಟರು, ಅಬ್ಬರದ ಪ್ರಚಾರವಿಲ್ಲದೆ ಸೈಲಂಟ್ ಆಗಿ ತೆರೆಗೆ ಬಂದು ಇದೀಗ ಮ್ಯಾಜಿಕ್ ಮಾಡುತ್ತಿದೆ. ಚಿತ್ರದ ಯಶಸ್ಸಿಗೆ ಅದ್ಧೂರಿ ಮೇಕಿಂಗ್ ಅಗತ್ಯವಿಲ್ಲ, ಕಂಟೆಂಟ್ ಉತ್ತಮವಾಗಿದ್ದರೆ ಸಾಕು ಎನ್ನುವುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ. ಪರಭಾಷಿಕರನ್ನೂ ಸೆಳೆದಿರುವ ಈ ಚಿತ್ರ ʼಕಾಂತಾರʼದಂತೆ ಯಶಸ್ವಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಬಾಕ್ಸ್ ಆಫೀಸ್ ತಜ್ಞರು ಭವಿಷ್ಯ ನುಡಿದಿದ್ದಾರೆ.