Mandana Karimi: ನಿರ್ದೇಶಕನಿಂದ ಮೋಸ ಹೋದ ನೋವಿನ ಬಗ್ಗೆ ನಟಿ ಮಂದನಾ ಕರಿಮಿ ಹೇಳಿಕೊಂಡಿದ್ದೇನು?
ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿಯರಲ್ಲಿ ಮಂದಾನ ಕರಿಮಿ ಕೂಡ ಒಬ್ಬರು. ʼಭಾಗ್ ಜಾನಿʼ, ʼಮೈ ಔರ್ ಚಾರ್ಲ್ಸ್ʼ ಸಿನಿಮಾ ಖ್ಯಾತಿಯ ನಟಿ ಮಂದಾನ ಕರಿಮಿ ಸಿನಿಮಾಕ್ಕಿಂತಲೂ ವೈಯಕ್ತಿಕ ಗಾಸಿಪ್ನ ಸುಳಿಯಲ್ಲಿ ಸಿಲುಕಿದ್ದೇ ಹೆಚ್ಚು. ಇತ್ತೀಚಿನ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ನಟಿ ಮಂದಾನ ತಮ್ಮ ವೈವಾಹಿಕ ಜೀವನ ಹಾಗೂ ಅನೇಕ ಸವಾಲು, ಸಮಸ್ಯೆಗಳ ಕುರಿತು ಭಾವನಾತ್ಮಕ ವಾಗಿ ಮಾತನಾಡಿದ್ದಾರೆ.

Mandana Karimi


ಗ್ಲಾಮರ್ ಮತ್ತು ಸೆಲ್ಫ್ ಕಾನ್ಫಿಡೆಂಟ್ನಿಂದ ಪ್ರಸಿದ್ಧಿ ಪಡೆದ ನಟಿ ಮಂದಾನ ಕರಿಮಿ ಇರಾನ್ನ ಟೆಹ್ರಾನ್ ಮೂಲದವರು. ಮಾಡೆಲಿಂಗ್ನಲ್ಲಿ ನಟಿ ಸಾಕಷ್ಟು ಪ್ರಚಲಿತವಾಗುತ್ತಿದ್ದಂತೆ ಏರ್ ಹೋಸ್ಟೆಸ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು, ಬಳಿಕ ಭಾರತೀಯ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು.

ʼಭಾಗ್ ಜಾನಿʼ, ʼಮೈ ಔರ್ ಚಾರ್ಲ್ಸ್ʼ ಹಾಗೂ ʼಕ್ಯಾ ಕೂಲ್ ಹೈ ಹಮ್ 3ʼ ಚಿತ್ರಗಳಲ್ಲಿ ಮಂದಾನ ನಟಿಸಿದ್ದಾರೆ. ಇದರ ಜತೆಗೆ ಹಿಂದಿಯ ಬಿಗ್ ಬಾಸ್ ಸೀಸನ್ 9ರಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಲಾಕ್ ಅಪ್ ಎಂಬ ರಿಯಾಲಿಟಿ ಶೋದಲ್ಲಿ ಪಾಲ್ಗೊಂಡ ನಟಿ ತಾನು ತನ್ನ ಗೆಳೆಯನಿಂದಲೇ ಮೋಸ ಹೋಗಿದ್ದು ಗರ್ಭಿಣಿ ಆಗಿ ಅನುಭವಿಸಿದ್ದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

ನಟಿ ಮಂದನಾ ಅವರು 2016ರಲ್ಲಿ ಉದ್ಯಮಿ ಗೌರವ್ ಗುಪ್ತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ 2017ರಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಬಳಿಕ ಇವರ ವೈವಾಹಿಕ ಸಂಬಂಧ ಬಿರುಕು ಮೂಡಿತ್ತು. ಮಂದನಾ ತನ್ನ ಅತ್ತೆ-ಮಾವ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ, ತನ್ನ ಚಲನಚಿತ್ರ ವೃತ್ತಿಜೀವನವನ್ನು ತ್ಯಜಿಸಲು ಒತ್ತಾಯಿಸಿದ್ದು ಇದಕ್ಕೆ ಒಪ್ಪದ್ದಕ್ಕೆ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿದ್ದರು.

ವಿಚ್ಛೇದನದ ನಂತರ ಮಂದನಾ ಚಲನಚಿತ್ರ ನಿರ್ದೇಶಕರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಆದರೆ ಆತನು ತಾನು ಗರ್ಭಿಣಿಯಾದಾಗ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದನು. ಮನವೊಲಿಸಲು ಪ್ರಯತ್ನಿಸಿದರೂ ಆತ ಹೀನಾಯವಾಗಿ ನಡೆದುಕೊಂಡಿದ್ದಾನೆ ಎಂದು ತನ್ನ ನೋವನ್ನು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಂದೆಯಿಲ್ಲದೆ ಮಗುವನ್ನು ಸಮಾಜದಲ್ಲಿ ಸಾಕಿ ಸಲಹುವುದು ಕಷ್ಟವೆಂದು ಅರಿತು ಗರ್ಭಪಾತಕ್ಕೆ ಒಳಗಾಗಬೇಕಾಯಿತು ಎಂದು ತನ್ನ ಮನದ ನೋವನ್ನು ಲಾಕ್ ಅಪ್ ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಈ ಮೂಲಕ ಕೆಲವು ವೈಯಕ್ತಿಕ ವಿಚಾರಗಳ ಬಗ್ಗೆ ನಟಿ ಮಾತನಾಡಿದ್ದಾರೆ.