Swarnavalli: 26 ವರ್ಷಗಳಿಂದ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ಮಹಾಕಾರ್ಯ; ದೇಶ ಕಾಯುವ ಯೋಧರ ಹೆಸರಲ್ಲಿ ಲಕ್ಷ ತುಳಸಿ ಅರ್ಚನೆ
ಭಾರತದ ಗಡಿಗಳಲ್ಲಿ ನಿಂತು, ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶವನ್ನು ಕಾಪಾಡುವ ಸೈನಿಕರ ಹಿತರಕ್ಷಣೆಗಾಗಿ, ಅವರ ಆರೋಗ್ಯಕ್ಕಾಗಿ, ಬಲವರ್ಧನೆಗಾಗಿ ಸಂಕಲ್ಪಿಸಿ, ಪ್ರತೀ ವರ್ಷದಂತೆ ಈ ವರ್ಷವೂ ಶ್ರೀಕೃಷ್ಣ ಪರಮಾತ್ಮನಿಗೆ ಎಂಟು ಲಕ್ಷ (8,00,000) ತುಲಸೀ ಅರ್ಚನಾ ಕಾರ್ಯಕ್ರಮವು ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನರೆವೇರಿತು.



ಸ್ವರ್ಣವಲ್ಲೀ ಮಹಾಸಂಸ್ಥಾನವು 26 ವರ್ಷಗಳಿಂದ ವಿಶಿಷ್ಟ ಆಚರಣೆಯನ್ನು ನಡೆಸುತ್ತಿದ್ದು, ಪರಮಪೂಜ್ಯರಾದ ಶ್ರೀ ಗಂಗಾಧರೀಂದ್ರ ಸರಸ್ವತಿ ಸ್ವಾಮಿಗಳು ಸೈನಿಕರ ಶ್ರೇಯೋಭಿವೃದ್ದಿಗೆ ಹಾಗೂ 1999 ನಡೆದ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನು ಹೊಂದಿದ ಸೈನಿಕರಿಗೆ ನಮನ ಸಲ್ಲಿಸುವ ಸಲುವಾಗಿ ಸೈನಿಕರ ಹೆಸರಲ್ಲಿ ಕೃಷ್ಣನಿಗೆ ತುಳಸಿಯ ಅರ್ಚನೆ ಮಾಡುತ್ತಾ ಬಂದಿದ್ದಾರೆ. ಇದು ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ನಡೆಯುತ್ತಾ ಬಂದಿದೆ.

ಪ್ರತೀ ವರ್ಷವೂ ಕೂಡ ತಪ್ಪದೇ ಗುರುಗಳು ಶ್ರೀ ಕೃಷ್ಣಾಷ್ಟಮಿಯ ದಿನ ಲಕ್ಷೋಪಲಕ್ಷ ತುಳಸಿಗಳಿಂದ ಶ್ರೀ ಕೃಷ್ಣನಿಗೆ ಅರ್ಚನೆ ಮಾಡುತ್ತಾರೆ. ಆಗ ಸೈನಿಕರ ಹಿತದ ಸಂಕಲ್ಪ ಮಾಡುವುದು ವಿಶೇಷವಾಗಿದೆ. ಈಗ ಎರಡನೇ ಬಾರಿಗೆ ಶ್ರೀ ಮಠಕ್ಕೆ ಕಿರಿಯ ಸ್ವಾಮಿಗಳಾದ ಆನಂದಭೋದೇಂದ್ರ ತೀರ್ಥರು ಹಿರಿಯ ಸ್ವಾಮಿಗಳಾದ ಶ್ರೀ ಗಂಗಾಧರೀಂದ್ರ ಸರಸ್ವತಿ ಸ್ವಾಮಿಗಳೊಂದಿಗೆ ತುಳಸಿ ಅರ್ಚನೆಯಲ್ಲಿ ಪಾಲ್ಗೊಂಡರು.

ಈ ವರ್ಷದ ಈ ಆಚರಣೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ. ಈ ವರ್ಷ ಆಪರೇಷನ್ ಸಿಂದೂರದ ಮೂಲಕ ಜಗತ್ತಿಗೇ ಭಾರತದ ಶಕ್ತಿಯನ್ನು ಸೈನಿಕರು ತೋರಿಸಿದ್ದಾರೆ. ಗಡಿಯಲ್ಲಿ ನಿಂತು ಚಳಿ, ಮಳೆಯನ್ನು ಲೆಕ್ಕಿಸದೆ ನೆಲವನ್ನು ಕಾಯುವ ಸೈನಿಕರಿಗೆ ಈ ಮೂಲಕ ಸ್ವರ್ಣವಲ್ಲಿ ಮಹಾಸಂಸ್ಥಾನ ಹಾಗೂ ಪರಮಪೂಜ್ಯ ಗುರುಗಳು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಿದ್ದಾರೆ.

ತುಳಸಿಯ ಒಂದೊಂದು ದಳವು ಕೂಡ ಭಗವಾನ್ ಶ್ರೀಕೃಷ್ಣ ಪರಮಾತ್ಮನಿಗೆ ಅರ್ಪಣೆ ಮಾಡಲಾಯಿತು. ಶ್ರೀಮಠದ ಪುರೋಹಿತರು ಪಾಠಶಾಲೆಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಾಲ್ಕಣಿ , ನಡಗೋಡ, ಉಮ್ಮಚಗಿ ಪಾಠಶಾಲೆಯ ವಿದ್ಯಾರ್ಥಿಗಳ ಒದಗೂಡುವಿಕೆಯಲ್ಲಿ ಅತ್ಯಂತ ಸುಂದರವಾಗಿ ಲಕ್ಷ ತುಳಸಿ ಅರ್ಚನೆ ನೆರವೇರಿತು. ಕೇಶವ ಹೆಗಡೆ ಗಡಿಕೈ ದಂಪತಿಗಳು ಯಜಮಾನರಾಗಿ ಕಾರ್ಯ ನಿರ್ವಹಿಸಿದರು.