Photos: ʻವಿಕ್ಟರಿʼ ವೆಂಕಟೇಶ್ - ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾಗೆ ಮುಹೂರ್ತ; ನಾಯಕಿಯರಾಗಿ ಕೀರ್ತಿ ಸುರೇಶ್ - ಕೃತಿ ಶೆಟ್ಟಿ
ತೆಲುಗು ಚಿತ್ರರಂಗದ 'ಹಿಟ್ ಮಿಷನ್' ಎಂದೇ ಖ್ಯಾತರಾಗಿರುವ ನಿರ್ದೇಶಕ ಅನಿಲ್ ರವಿಪುಡಿ ಅವರ ಮತ್ತೊಂದು ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ ಇಂದು ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ಈ ಚಿತ್ರದಲ್ಲಿ 'ವಿಕ್ಟರಿ' ವೆಂಕಟೇಶ್ ಹಾಗೂ ನಂದಮೂರಿ ಕಲ್ಯಾಣ್ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಸಾಥ್ ನೀಡುತ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಪ್ರಮುಖ ನಿರ್ಮಾಪಕರಾದ ದಿಲ್ ರಾಜು ಮತ್ತು ಸಿರೀಶ್ ಅವರು ಚಿತ್ರದ ಚಿತ್ರಕಥೆಯನ್ನು (ಸ್ಕ್ರಿಪ್ಟ್) ನಿರ್ದೇಶಕ ಅನಿಲ್ ರವಿಪುಡಿ ಹಾಗೂ ನಿರ್ಮಾಪಕ ಸಾಹು ಗರಪತಿ ಅವರಿಗೆ ಹಸ್ತಾಂತರಿಸಿದರು. ವೆಂಕಟೇಶ್, ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಒಳಗೊಂಡ ಮೊದಲ ದೃಶ್ಯಕ್ಕೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರೆ, ಸುರೇಶ್ ಬಾಬು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಹಿರಿಯ ನಿರ್ದೇಶಕ-ನಿರ್ಮಾಪಕ ಕೆ. ರಾಘವೇಂದ್ರ ರಾವ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.
ವೆಂಕಟೇಶ್, ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ನಟನೆಯ ಹೊಸ ಸಿನಿಮಾದ ಮುಹೂರ್ತ ನೆರವೇರಿದ್ದು, 2027ರ ಸಂಕ್ರಾಂತಿ ಹಬ್ಬದ ಬಿಡುಗಡೆಯ ಗುರಿಯೊಂದಿಗೆ ಬಿರುಸಿನಲ್ಲಿ ಶೂಟಿಂಗ್ ಮಾಡಲು ಯೋಜನೆ ರೂಪಿಸಲಾಗಿದೆ.
ಚಿತ್ರದ ಮೊದಲ ಶಾಟ್‌ಗೆ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ಕ್ಲಾಪ್ ಮಾಡಿ, ಸಿನಿಮಾ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿ ಎಂದು ಶುಭ ಹಾರೈಸಿದರು.
ಮುಹೂರ್ತದ ದೃಶ್ಯಕ್ಕೆ ಕೆ. ರಾಘವೇಂದ್ರ ರಾವ್ ನಿರ್ದೇಶನ ಮಾಡಿದರೆ, ಡಿ ಸುರೇಶ್ ಬಾಬು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು ಮತ್ತು ದಿಲ್ ರಾಜು ಚಿತ್ರತಂಡಕ್ಕೆ ಸ್ಕ್ರಿಪ್ಟ್ ಹಸ್ತಾಂತರಿಸಿದರು.
ಇದೊಂದು ಪಕ್ಕಾ ಕಾಮಿಡಿ ಎಂಟರ್ಟೈನರ್ ಸಿನಿಮಾವಾಗಿದ್ದು, ಚಿತ್ರದಲ್ಲಿ ವೆಂಕಟೇಶ್‌ಗೆ ಜೋಡಿಯಾಗಿ ಕೀರ್ತಿ ಸುರೇಶ್ ಹಾಗೂ ಕಲ್ಯಾಣ್ ರಾಮ್‌ಗೆ ಜೋಡಿಯಾಗಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.
ಈ ಚಿತ್ರವು ವೆಂಕಟೇಶ್-ಅನಿಲ್ ರವಿಪುಡಿ ಅವರ ಯಶಸ್ವಿ ಕಾಂಬಿನೇಷನ್ (ಎಫ್2, ಎಫ್3, ಸಂಕ್ರಾಂತಿಕಿ ವಸ್ತುನ್ನಾಂ, ಮನ ಶಂಕರ ವರಪ್ರಸಾದ್ ಗಾರು) ಹಾಗೂ ಕಲ್ಯಾಣ್ ರಾಮ್ ಅವರ 'ಪಟಾಸ್' ಚಿತ್ರದ ಬಳಿಕ ಅನಿಲ್ ಜೊತೆ ಕೆಲಸ ಮಾಡುತ್ತಿರುವುದರಿಂದ ನಿರೀಕ್ಷೆ ಮೂಡಿಸಿದೆ.
ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗಾರಪಾಟಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಸುರೇಶ್ ಪ್ರೊಡಕ್ಷನ್ಸ್, ಅರ್ಚನಾ ಮತ್ತು ಜೀ ಸ್ಟುಡಿಯೋಸ್ ಸಂಸ್ಥೆಗಳು ಚಿತ್ರವನ್ನು ಪ್ರಸ್ತುತಪಡಿಸುತ್ತಿವೆ.
ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದು, ಗೀತಸಾಹಿತಿ ಅನಂತ ಶ್ರೀರಾಮ್ ಅವರು ಹಾಡುಗಳನ್ನು ಬರೆಯುತ್ತಿದ್ದಾರೆ.
ಸಮೀರ್ ರೆಡ್ಡಿ ಅವರು ಛಾಯಾಗ್ರಹಣ (ಕ್ಯಾಮೆರಾ) ಹಾಗೂ ತಮ್ಮಿರಾಜು ಅವರು ಸಂಕಲನ (ಎಡಿಟಿಂಗ್) ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಈ ಚಿತ್ರದ ಕಲಾ ನಿರ್ದೇಶಕರಾಗಿ (ಆರ್ಟ್ ಡೈರೆಕ್ಟರ್) ಎ.ಎಸ್. ಪ್ರಕಾಶ್ ಅವರು ಕಾರ್ಯನಿರ್ವಹಿಸುತ್ತಿದ್ದು, ಸದ್ಯದಲ್ಲೇ ಚಿತ್ರದ ಹೆಚ್ಚಿನ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು.