ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣನ್ನು ಗುರುತಿಸಬೇಕೆ? ಈ ಸುಲಭ ವಿಧಾನ ಫಾಲೋ ಮಾಡಿ
ಬೇಸಗೆಯೊಂದಿಗೆ ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿವೆ. ಬಣ್ಣ, ಸುವಾಸನೆಯಿಂದ ಎಲ್ಲರ ಗಮನ ಸೆಳೆಯುವ ಈ ಹಣ್ಣನ್ನು ಖರೀದಿ ಮಾಡುವ ಮುನ್ನ ಎಚ್ಚರಿಕೆ ಬಹಳ ಮುಖ್ಯ. ಇಲ್ಲವಾದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಕೃತಕವಾಗಿ ಹಣ್ಣು ಮಾಡಲಾದ ಮಾವಿನ ಹಣ್ಣುಗಳನ್ನು ಗುರುತಿಸುವುದನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ. ಅದು ಹೇಗೆ ಎನ್ನುವುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಅಲ್ಫೋನ್ಸೊ, ದಶೇರಿ, ಲ್ಯಾಂಗ್ರಾ, ಬಂಗನಪಲ್ಲಿ.. ಹೀಗೆ ವಿವಿಧ ಬಗೆಯ ಮಾವಿನ ಹಣ್ಣುಗಳು ಬೇಸಗೆಯಲ್ಲಿ ಮಾರುಕಟ್ಟೆಯಲ್ಲಿ ಮೆರೆಯುತ್ತದೆ. ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣುಗಳ ಖರೀದಿಗೆ ಹೋಗುವಾಗ ನೈಸರ್ಗಿಕವಾಗಿ ಮಾಗಿದ ಮತ್ತು ಕೃತಕವಾಗಿ ಹಣ್ಣಾಗಿಸಿದ ಹಣ್ಣುಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಆದರೆ ಅಸಾಧ್ಯವೇನಲ್ಲ.
ಮಾವಿನ ಹಣ್ಣುಗಳು ಮಾರುಕಟ್ಟೆಗೆ ಆಗಮಿಸಿವ ಆರಂಭದಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ಬೇಡಿಕೆ ಪೂರೈಸಲು ಅದನ್ನು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ನಿಷೇಧಿತ ರಾಸಾಯನಿಕಗಳನ್ನು ಬಳಸಿಕೊಂಡು ಕೃತಕವಾಗಿ ಹಣ್ಣು ಮಾಡಲಾಗುತ್ತದೆ. ಇದು ಅಸಿಟಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಇದರಿಂದ ತಲೆನೋವು, ತಲೆತಿರುಗುವಿಕೆ, ವಾಕರಿಕೆ, ಚರ್ಮದ ಕಿರಿಕಿರಿಗಳು ಉಂಟಾಗುತ್ತವೆ.
ಬಣ್ಣ, ವಾಸನೆ
ಬಣ್ಣ, ಸುವಾಸನೆಯಿಂದ ಎಲ್ಲರನ್ನೂ ಸೆಳೆಯುವ ಮಾಗಿದ, ರಸಭರಿತವಾದ ಮಾವಿನ ಹಣ್ಣುಗಳನ್ನು ಗುರುತಿಸುವುದು ಬಹಳ ಸುಲಭ. ಸಾಮಾನ್ಯವಾಗಿ ರಾಸಾಯನಿಕ ಹಾಕಿ ಮಾಗಿಸಿರುವ ಹಣ್ಣುಗಳಲ್ಲಿ ಅತಿಯಾಗಿ ಒಂದೇ ರೀತಿಯ ಬಣ್ಣ ಇರುತ್ತದೆ. ಸಿಪ್ಪೆಯ ಉದ್ದಕ್ಕೂ ಹೊಳೆಯುವ ರೀತಿಯಲ್ಲಿ ಹಳದಿ ಅಥವಾ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳು ಯಾವುದೇ ಪರಿಮಳವನ್ನು ಹೊಂದಿರುವುದಿಲ್ಲ ಅಥವಾ ಅತೀ ಕಡಿಮೆ ವಾಸನೆ, ರಾಸಾಯನಿಕ ಅಥವಾ ಲೋಹದ ರೀತಿಯ ವಾಸನೆ ಇರುವುದು.
ಮೇಲ್ಮೈ, ರುಚಿ
ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳು ವಿಶೇಷವಾಗಿ ತಳದ ಬಳಿ ತುಂಬಾ ಮೃದು ಅಥವಾ ಮೆತ್ತಗಿರುತ್ತವೆ. ಸಾಮಾನ್ಯವಾಗಿ ಮೃದುವಾಗಿದ್ದು ಹುಳಿ ಅಥವಾ ಸೀಮೆಸುಣ್ಣದ ರುಚಿಯನ್ನು ಹೊಂದಿರುತ್ತವೆ. ಇದೊರೊಂದಿಗೆ ರಾಸಾಯನಿಕ ರುಚಿಯನ್ನು ಕೂಡ ಕೊಡಬಹುದು.
ವೇಗವಾಗಿ ಹಣ್ಣಾಗುವುದು
ಕೃತಕವಾಗಿ ಸಂಸ್ಕರಿಸಿದ ಮಾವಿನ ಹಣ್ಣುಗಳು ಹೆಚ್ಚಾಗಿ ವೇಗವಾಗಿ ಹಣ್ಣಾಗುತ್ತವೆ. 2-3 ದಿನಗಳಲ್ಲಿ ಕೊಳೆಯಲು ಪ್ರಾರಂಭವಾಗುತ್ತದೆ. ತುಂಬಾ ದಿನ ಸಂಗ್ರಹ ಕಷ್ಟವಾಗಿರುತ್ತದೆ. ಮಾವಿನ ಹಣ್ಣಿನ ಸಿಪ್ಪೆಯ ಮೇಲೆ ಸೀಮೆಸುಣ್ಣದ ಬಿಳಿ ಅಥವಾ ಬೂದು ಬಣ್ಣದ ಹುಡಿ ಗೋಚರವಾಗುವುದು.
ಬಣ್ಣ, ವಿನ್ಯಾಸ
ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳು ಮಸುಕಾದ ಅಥವಾ ಅಸಮ ತಿರುಳಿನ ಬಣ್ಣ ಹೊಂದಿರುತ್ತದೆ. ರಬ್ಬರ್ ಅಥವಾ ನಾರಿನ ರೀತಿಯ ವಿನ್ಯಾಸವಿರುತ್ತದೆ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಏಕರೂಪದ ಹಳದಿ- ಕಿತ್ತಳೆ ತಿರುಳನ್ನು ಹೊಂದಿದ್ದು, ರಸಭರಿತವಾಗಿ ಮೃದುವಾಗಿರುತ್ತದೆ.
ಪ್ಯಾಕೇಜಿಂಗ್ ಗಮನಿಸಿ
ಮಾವಿನಹಣ್ಣನ್ನು ಎಲ್ಲಿ ಮತ್ತು ಹೇಗೆ ಖರೀದಿಸುತ್ತೀರಿ ಎಂಬುದನ್ನು ಕೂಡ ನೋಡಬೇಕು. ಮಾವಿನ ಹಣ್ಣುಗಳನ್ನು ಸಾವಯವ ಅಂಗಡಿಗಳು ಸರ್ಕಾರ-ಅನುಮೋದಿತ ಮಳಿಗೆಗಳಂತಹ ವಿಶ್ವಾಸಾರ್ಹ ಮೂಲಗಳಿಂದ ಖರೀದಿ ಮಾಡುವುದು ಒಳ್ಳೆಯದು. ಕೃತಕವಾಗಿ ಮಾಗಿದ ಮಾವಿನಹಣ್ಣುಗಳು ಹೆಚ್ಚಾಗಿ ಮುಚ್ಚಿದ ಪ್ಲಾಸ್ಟಿಕ್ ಚೀಲಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಏಕರೂಪವಾಗಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ.