Wedding Fashion 2025: ವಿಂಟರ್ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ ರಾಯಲ್ ಲುಕ್ ಡಿಸೈನರ್ ಬ್ಲೌಸ್‌ಗಳಿವು
Fashion News: ಮದುಮಗಳ ವೆಡ್ಡಿಂಗ್ ಫ್ಯಾಷನ್‌ನಲ್ಲಿ ರಾಯಲ್ ಲುಕ್ ನೀಡುವ ಡಿಸೈನರ್ ಬ್ಲೌಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಯಾವ್ಯಾವ ಬಗೆಯವು ಬೇಡಿಕೆ ಹೆಚ್ಚಿಸಿಕೊಂಡಿವೆ? ಕಾರಣವೇನು? ಎಂಬುದರ ಬಗ್ಗೆ ಇಲ್ಲಿ ಬ್ಲೌಸ್ ಡಿಸೈನರ್‌ಗಳು ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಮದುಮಗಳ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಇದೀಗ ಸೀರೆಗೆ ಧರಿಸುವ ರಾಯಲ್ ಲುಕ್ ನೀಡುವ ಡಿಸೈನರ್ ಬ್ಲೌಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಬ್ಯುಸಿಯಾದ ಬ್ಲೌಸ್ ಡಿಸೈನರ್ಸ್
ಕಮರ್ಷಿಯಲ್ ಸ್ಟ್ರೀಟ್‌ನ ಬ್ಲೌಸ್ ಶಾಪ್‌ವೊಂದರ ಬ್ಲೌಸ್ ಡಿಸೈನರ್ ಜಾವಿದ್ ಹೇಳುವಂತೆ, ಈ ಬಾರಿ ಮೊದಲಿಗಿಂತ ಡಿಸೈನರ್‌ಗಳು ಸಾಕಷ್ಟು ಬಿಝಿಯಾಗಿದ್ದಾರೆ. ಅದರಲ್ಲೂ ಅತಿ ಹೆಚ್ಚಾಗಿ ರೇಷ್ಮೆ ಸೀರೆಗಳಿಗೆ ರಾಯಲ್ ಲುಕ್ ನೀಡುವ ಡಿಸೈನರ್ ಬ್ಲೌಸ್‌ಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಮದುವೆಯಾಗುವ ಹೆಣ್ಣು ಮಗಳು ಮಾತ್ರವಲ್ಲ, ಮದುವೆ ಮನೆಯ ಇಡೀ ಕುಟುಂಬದ ಹೆಣ್ಣು ಮಕ್ಕಳು ಕೂಡ ತಂತಮ್ಮ ಸೀರೆಗಳ ಬ್ಲೌಸ್‌ಗಳನ್ನು ಗ್ರ್ಯಾಂಡ್ ಡಿಸೈನ್ ಮಾಡಿಸುತ್ತಿದ್ದಾರೆ ಎನ್ನುತ್ತಾರೆ.
ರಾಯಲ್ ಲುಕ್ ನೀಡುವ ಹ್ಯಾಂಡ್‌ವರ್ಕ್ ಬ್ಲೌಸ್‌ಗಳು
ಮಗ್ಗಂ,ಕಟದಾನ, ಗೋಲ್ಡನ್ ಬೀಡ್ಸ್ ಹ್ಯಾಂಡ್‌ವರ್ಕ್ ಸೇರಿದಂತೆ ನಾನಾ ಬಗೆಯ ಹ್ಯಾಂಡ್‌ವರ್ಕ್ ಡಿಸೈನ್‌ಗಳು ಬ್ಲೌಸ್‌ಗಳಿಗೆ ರಾಯಲ್ ಲುಕ್ ಕಲ್ಪಿಸುತ್ತವೆ. ಅಲ್ಲದೇ, ಇವನ್ನು ಡಿಸೈನ್ ಮಾಡಲು ಸಾಕಷ್ಟು ದಿನಗಳೇ ಬೇಕಾಗುತ್ತವೆ. ಬೆಲೆ ಕೂಡ ದುಬಾರಿ. ಆದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ತಾರೆಯರ ಬ್ಲೌಸ್ ಡಿಸೈನ್‌ಗೂ ಬೇಡಿಕೆ
ಇನ್ನು, ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ನಟಿಯರು ಧರಿಸುವ ಗ್ರ್ಯಾಂಡ್ ಬ್ಲೌಸ್ ಡಿಸೈನ್‌ಗಳು ಕೂಡ ಇದೀಗ ಬೇಡಿಕೆ ಹೆಚ್ಚಿಸಿಕೊಂಡಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಸಾಕಷ್ಟು ಮಹಿಳೆಯರು ತಮ್ಮ ಮೊಬೈಲ್ ಸ್ಕ್ರೀನ್‌ನಲ್ಲಿ, ತಮಗೆ ಬೇಕಾದ ನಟಿಯರ ಬ್ಲೌಸ್ ಡಿಸೈನ್ ಕ್ಲಿಕ್ಕಿಸಿದ ಫೋಟೋ ತೋರಿಸಿ ಡಿಸೈನ್ ಮಾಡಿಸಿಕೊಳ್ಳುತ್ತಾರೆ ಎನ್ನುತ್ತಾರೆ ಡಿಸೈನರ್ ಶಿಲ್ಪಾ.
ಡಿಸೈನರ್ ಬ್ಲೌಸ್ ಪ್ರಿಯರಿಗೆ ಸಿಂಪಲ್ ಟಿಪ್ಸ್
- ರಾಯಲ್ ಲುಕ್ ಇರುವಂತಹ ಹ್ಯಾಂಡ್‌ವರ್ಕ್ ಡಿಸೈನರ್ ಬ್ಲೌಸ್ ದುಬಾರಿಯಾಗಿರುವುದರಿಂದ ಮೊದಲೇ ಬೆಲೆ ತಿಳಿದುಕೊಂಡು ನಿರ್ಧರಿಸಿ.
- ಆಯಾ ಡಿಸೈನ್‌ಗೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ ಎಂಬುದು ಅರಿವಿರಲಿ.
- ರೇಷ್ಮೆ ಸೀರೆಯ ಫ್ಯಾಬ್ರಿಕ್ಗೆ ತಕ್ಕಂತೆ ಡಿಸೈನ್ ಮಾಡಿಸಿ.
- ಟ್ರೆಂಡಿಯಾಗಿರುವುದಕ್ಕಿಂತ ನಿಮಗೆ ಹೊಂದುವಂತಹ ಡಿಸೈನ್‌ಗೆ ಆದ್ಯತೆ ನೀಡಿ.