Actor Rajinikanth: ತಲೈವಾಗೆ ತಲೈವಾನೇ ಸಾಟಿ; ʼಕೂಲಿʼ ಚಿತ್ರಕ್ಕೆ ದಾಖಲೆಯ ಸಂಭಾವನೆ ಪಡೆದ ರಜನಿಕಾಂತ್
ಜಗತ್ತಿನ ಸಿನಿಪ್ರಿಯರ ಬಹುದಿನಗಳ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಈ ವರ್ಷದ ಬಹುನಿರೀಕ್ಷಿತ ಚಿತ್ರ, ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ಆಗಸ್ಟ್ 14ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ರಜನಿಕಾಂತ್ ಕಾಂಬಿನೇಷನ್ನ ಸಿನಿಮಾ ಇದಾಗಿದ್ದು, ಸೆಟ್ಟೇರಿದಾಗಿನಿಂದಲೇ ಗಮನ ಸೆಳೆದಿದೆ. ವಿಶೇಷ ಎಂದರೆ ರಜನಿಕಾಂತ್ ಈ ಸಿನಿಮಾಕ್ಕಾಗಿ ದಾಖಲೆಯ ಸಂಭಾವಣೆ ಪಡೆದಿದ್ದಾರೆ. ಇನ್ನು ಅತಿತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಮೀರ್ ಖಾನ್ ಅವರಿಗೂ ಕೈತುಂಬ ಹಣ ಸಂದಾಯವಾಗಿದೆ. ಹಾಗಾದಾರೆ ಯೃು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಇತ್ತರ.



ರಜನಿಕಾಂತ್
ರಜನಿಕಾಂತ್ ಅಭಿನಯದ 171ನೇ ಚಿತ್ರ ʼಕೂಲಿʼ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್ ದೇವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದಕ್ಕಾಗಿ ಬರೋಬ್ಬರಿ 200 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಚಿತ್ರವೊಂದಕ್ಕೆ 150 ಕೋಟಿ ರೂ. ಸಂಭಾವನೆ ಪಡೆಯುವ ಅವರು ಈ ಸಿನಿಮಾಕ್ಕಾಗಿ 50 ಕೋಟಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಆಮೀರ್ ಖಾನ್
ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಮೊದಲ ಬಾರಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್ಸ್ಟರ್ ದಾಹಾನಾಗಿ ಅವರು ಅಬ್ಬರಿಸಿದ್ದು, ಇದಕ್ಕಾಗಿ ಬರೋಬ್ಬರಿ 20 ಕೋಟಿ ರೂ. ಜೇಬಿಗಿಳಿಸಿದ್ದಾರೆ.

ಉಪೇಂದ್ರ
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಕೂಡ ʼಕೂಲಿʼಯ ಪಾತ್ರವಾಗಿದ್ದು, ಇದೇ ಮೊದಲ ಬಾರಿಗೆ ರಜನಿಕಾಂತ್ ಜತೆ ತೆರೆ ಹಂಚಿಕೊಂಡಿದ್ದಾರೆ. ಇವರು 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸಿನಿಮಾ ಪ್ರಚಾರದ ವೇಳೆ ರಜನಿಕಾಂತ್ ಅವರು ಉಪೇಂದ್ರ ಅವರ ಪ್ರತಿಭೆಯನ್ನು ಹಾಡಿ ಹೊಗಳಿದ್ದರು. ಅವರ ಪಾತ್ರ ಚಿತ್ರದಲ್ಲಿ ಗಮನ ಸೆಳೆಯಲಿದೆ ಎಂದು ಮೂಲಗಳು ತಿಳಿಸಿವೆ.

ನಾಗಾರ್ಜುನ
ಇತ್ತೀಚೆಗೆ ರಿಲೀಸ್ ಆದ ʼಕುಬೇರʼ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಗಮನ ಸೆಳೆದಿದ್ದ ಟಾಲಿವುಡ್ನ ಹಿರಿಯ ನಟ, ಸೂಪರ್ ಸ್ಟಾರ್ ನಾಗಾರ್ಜುನ ಪಾತ್ರ ಕೂಡ ʼಕೂಲಿʼ ಚಿತ್ರದ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಈ ಸಿನಿಮಾಕ್ಕಾಗಿ ಅವರು 10 ಕೋಟಿ ರೂ. ಜೇಬಿಗಿಳಿಸಿದ್ದಾರೆ.

ಸತ್ಯರಾಜ್
ಪ್ಯಾನ್ ಇಂಡಿಯಾ ಚಿತ್ರ ʼಬಾಹುಬಲಿʼಯ ಕಟ್ಟಪ್ಪ ಪಾತ್ರದ ಮೂಲಕ ದೇಶಾದ್ಯಂತ ಗಮನ ಸೆಳೆದ ಕಾಲಿವುಡ್ ಹಿರಿಯ ನಟ ಸತ್ಯರಾಜ್ ʼಕೂಲಿʼಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕಾಗಿ ಅವರು 5 ಕೋಟಿ ರೂ. ಪಡೆದುಕೊಂಡಿದ್ದಾರೆ.

ಶ್ರುತಿ ಹಾಸನ್
ಒಂದು ಕಾಲದಲ್ಲಿ ತಮಿಳು ಚಿತ್ರರಂಗವನ್ನು ಆಳಿದ್ದ ಶ್ರುತಿ ಹಾಸನ್ ಕೂಡ ʼಕೂಲಿʼಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕಾಗಿ ಅವರು 4 ಕೋಟಿ ರೂ. ಪಡೆದುಕೊಂಡಿದ್ದಾರೆ. ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಇದೇ ಮೊದಲ ಬಾರಿಗೆ ಕಾಲಿವುಡ್ಗೆ ಕಾಲಿಟ್ಟಿದ್ದು, ಅವರ ಪಾತ್ರ ಯಾವ ರೀತಿ ಇರಲಿದೆ ಎನ್ನುವ ಗುಟ್ಟು ಹೊರಬಿದ್ದಿಲ್ಲ. ಅವರಿಗೂ ಒಳ್ಳೆ ಮೊತ್ತವೇ ಸಂದಾಯವಾಗಿದೆ ಎನ್ನಲಾಗಿದೆ.

ಲೋಕೇಶ್ ಕನಕರಾಜ್
ಕಲಾವಿದರ ಜತೆಗೆ ನಿರ್ದೇಶಕ ಲೋಕೇಶ್ ಕನಕರಾಜ್ ಕೂಡ ಉತ್ತಮ ಸಂಭಾವನೆ ಪಡೆದುಕೊಂಡಿದ್ದಾರೆ. ಅವರಿಗೆ ಬರೋಬ್ಬರಿ 50 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ. ಆ ಮೂಲಕ ಅತೀ ಹೆಚ್ಚು ಸಂಭಾವನೆ ಪಡೆದ ನಿರ್ದೇಶಕರ ಸಾಲಿನ ಇವರೂ ಸೇರಿಕೊಂಡಿದ್ದಾರೆ.