ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ಕೂಟಿಯಲ್ಲಿ ಸವಾರಿ ಮಾಡುತ್ತಿದ್ದ ವೇಳೆ ಡಿಕ್ಕಿ ಹೊಡೆದ ಕಾಡು ಹಂದಿಗಳ ಗುಂಪು; ಮಹಿಳೆ ಗಂಭೀರ, ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ

Accident: ರಸ್ತೆ ದಾಟುತ್ತಿದ್ದಾಗ ಕಾಡುಹಂದಿಗಳ ಹಿಂಡು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಗಸ್ಟ್ 8 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡಲೇ ಮಹಿಳೆಯನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.

ಸ್ಕೂಟಿಯಲ್ಲಿ ಸವಾರಿ ಮಾಡುತ್ತಿದ್ದ ವೇಳೆ ಡಿಕ್ಕಿ ಹೊಡೆದ ಕಾಡು ಹಂದಿಗಳ ಗುಂಪು

Priyanka P Priyanka P Aug 12, 2025 6:24 PM

ತಿರುವನಂತಪುರ: ರಸ್ತೆ ದಾಟುತ್ತಿದ್ದಾಗ ಕಾಡುಹಂದಿಗಳ ಹಿಂಡು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಗಸ್ಟ್ 8ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ (Viral Video). ಗಾಯಗೊಂಡ ಮಹಿಳೆಯನ್ನು ಕೇರಳದ ತಿರುವನಂತಪುರದ ಪೆರಿಂಗಮ್ಮಳದ ನಿಸಾ ಎಂದು ಗುರುತಿಸಲಾಗಿದೆ. ಕೂಡಲೇ ಮಹಿಳೆಯನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.

ನಿಸಾ ಕೇರಳದ ತಿರುವನಂತಪುರದಲ್ಲಿ ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಹಲವಾರು ಕಾಡುಹಂದಿಗಳು ಕಾಣಿಸಿಕೊಂಡವು. ಒಂದು ದೊಡ್ಡ ಹಂದಿ ನೇರವಾಗಿ ಆಕೆಯ ಬೈಕ್‌ಗೆ ಡಿಕ್ಕಿ ಹೊಡೆಯಿತು. ಪರಿಣಾಮ ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ, ಅವರು ರಸ್ತೆಯಲ್ಲಿ ಮೇಲೆ ಬಿದ್ದು ಬಿಟ್ಟರು. ಪರಿಣಾಮ ಗಂಭೀರ ಗಾಯಗೊಂಡರು.

ಸಹಾಯಕ್ಕೆ ಧಾವಿಸಿದ ಸ್ಥಳೀಯರು

ಮಹಿಳೆ ಹೆಲ್ಮೆಟ್ ಧರಿಸಿದ್ದರೂ, ಅದನ್ನು ಸರಿಯಾಗಿ ಹಾಕಿಲ್ಲವಾದ ಕಾರಣ ಅದು ಅಪಘಾತದ ರಭಸಕ್ಕೆ ಹಾರಿ ಹೋಗಿದೆ. ರಸ್ತೆಯಲ್ಲಿ ಬಿದ್ದ ಆಕೆ ಪ್ರಜ್ಞಾಹೀನಸ್ಥಿತಿಯಲ್ಲಿ ಬಿದ್ದಿರುವುದನ್ನು ಸಿಸಿಟಿವಿ ದೃಶ್ಯಗಳಲ್ಲಿ ಕಾಣಬಹುದು. ಒಬ್ಬ ವ್ಯಕ್ತಿ ಶೀಘ್ರದಲ್ಲೇ ಆಕೆಯ ಸಹಾಯಕ್ಕೆ ಧಾವಿಸಿದ್ದಾನೆ. ಬಳಿಕ ಹೆಚ್ಚಿನ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಆಟೋ ಚಾಲಕನೊಬ್ಬ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ್ದಾನೆ.

ವಿಡಿಯೊ ವೀಕ್ಷಿಸಿ:



ಇನ್ನು ಮಹಿಳೆಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಕಾಡುಹಂದಿಗಳ ಇರುವಿಕೆ ಬಗ್ಗೆ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿವೆ.

ಇತರ ಘಟನೆಗಳು

ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಆಗಸ್ಟ್ 1ರಂದು, ತಮಿಳುನಾಡಿನ ಕೋಟಗಿರಿ ಬಳಿಯ ಜಕ್ಕನರೈನ 70 ವರ್ಷದ ಕೆ. ಚೆಲ್ಲಮ್ಮಾಳ್ ಎಂಬ ಮಹಿಳೆ ಕಾಡುಹಂದಿಯ ದಾಳಿಯಿಂದ ಮೃತಪಟ್ಟಿದ್ದರು. ಅವರು ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಡುಹಂದಿ ಅವರ ಮೇಲೆ ದಾಳಿ ಮಾಡಿತು. ಪರಿಣಾಮವಾಗಿ ಅವರ ತೊಡೆಗೆ ತೀವ್ರವಾಗಿ ಗಾಯವಾಯಿತು. ಅವರನ್ನು ಕೋಟಗಿರಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಅವರು ಮರುದಿನ ಮೃತಪಟ್ಟರು.

ಮತ್ತೊಂದು ವಿಚಿತ್ರ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೀದಿ ನಾಯಿಯೊಂದು ಹಸುವಿನ ಕಾಲನ್ನು ಕಚ್ಚಿ ಓಡಿಹೋಗಿದೆ. ಕೆಲವು ಕ್ಷಣಗಳ ನಂತರ, ವ್ಯಕ್ತಿಯೊಬ್ಬ ನಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಇಂತಹ ಘಟನೆಗಳು ದೇಶದಲ್ಲಿ ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷಗಳ ಬಗ್ಗೆ ನಡೆಯುತ್ತಿರುವ ಕಳವಳಗಳನ್ನು ಎತ್ತಿ ತೋರಿಸುತ್ತವೆ.