ಯೋಗ ಪಟುಗಳಿಗೆ ಯೋಗ ಹೇಳಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ; ಕೋಲ್ಕತಾದಲ್ಲಿ ಮೊದಲ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
International Yoga Day: ಜೂನ್ 21 ಅನ್ನು ಭೂಮಿಯ ಮೇಲಿನ ಅತಿ ಉದ್ದದ ದಿನವನ್ನಾಗಿ ಗುರುತಿಸಲಾಗುತ್ತಿದೆ. ಆದರೆ ಈಗ ಯೋಗದಿಂದಾಗಿ ಇದು ಅತಿದೊಡ್ಡ ಸಮುದಾಯ ಆಚರಣೆಯ ದಿನವಾಗಿದೆ. ಯೋಗವು ಜನರನ್ನು ಒಟ್ಟುಗೂಡಿಸುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ ವಿಶ್ವವನ್ನು ಅಭಿನಂದಿಸಿದರು. ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಜನರನ್ನು ಒಟ್ಟುಗೂಡಿಸುತ್ತದೆ
ಯೋಗವು ವಿಶ್ವದ ಅತಿದೊಡ್ಡ ಸಮುದಾಯ ಆಚರಣೆಯಾಗಿ ಮಾರ್ಪಟ್ಟಿದೆ. ಇದು ದೇಶಗಳು ಮತ್ತು ಸಂಸ್ಕೃತಿಗಳಾದ್ಯಂತ ಜನರನ್ನು ಒಟ್ಟುಗೂಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭೂಮಿಯ ಮೇಲೆ ಅತಿ ಉದ್ದದ ದಿನವಾಗಿರುವ ಜೂನ್ 21 ಅನ್ನು ಈಗ ವಿಶ್ವಾದ್ಯಂತ ಯೋಗ ದಿನವೆಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಅಭಿನಂದನೆ
ಜೂನ್ 21 ಅನ್ನು ಭೂಮಿಯ ಮೇಲಿನ ಅತಿ ಉದ್ದದ ದಿನವನ್ನಾಗಿ ಗುರುತಿಸಲಾಗುತ್ತಿತ್ತು. ಆದರೆ ಈಗ ಯೋಗದಿಂದಾಗಿ ಇದು ಅತಿದೊಡ್ಡ ಸಮುದಾಯ ಆಚರಣೆಯ ದಿನವಾಗಿದೆ. ಯೋಗವು ಜನರನ್ನು ಒಟ್ಟುಗೂಡಿಸುತ್ತದೆ. ಈ ಸಂದರ್ಭದಲ್ಲಿ ನಾನು ಪ್ರಪಂಚದ ಜನರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು. ಇದೇ ವೇಳೆ 'ಸ್ವಚ್ಛತಾ ಸೆ ಸ್ವಾಗತ್' ಅಭಿಯಾನವನ್ನು ಸಮರ್ಪಣಾಭಾವದಿಂದ ಮುನ್ನಡೆಸುತ್ತಿರುವ ಕೋಲ್ಕತಾ ನಗರದ ಜನರಿಗೂ ಅಭಿನಂದನೆ ಸಲ್ಲಿಸಿದರು.
ಜೀವನದ ಗುಣಮಟ್ಟ ಸುಧಾರಣೆ
ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ʼಆರೋಗ್ಯಪೂರ್ಣ ವಯೋವೃದ್ಧತೆಗೆ ಯೋಗʼ ಎಂಬ ಧ್ಯೇಯವಾಕ್ಯವನ್ನು ಉಲ್ಲೇಖಿಸಿದ ಪ್ರಧಾನಿ, ಯೋಗವು ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಸಕ್ರಿಯ ವಯೋವೃದ್ಧತೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಿಂದ ಜೀವನದ ಗುಣಮಟ್ಟವೂ ಸುಧಾರಿಸುತ್ತದೆ ಎಂದು ಹೇಳಿದರು.
ಮಾನವ ಚೈತನ್ಯದ ಅಭಿವ್ಯಕ್ತಿ
ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ. ಇದು ಯಾವುದೇ ವಯೋಮಾನದವರಿಗೆ ಸೀಮಿತವಾಗಿಲ್ಲ. ಇದು ಮಾನವ ಚೈತನ್ಯದ ಅಭಿವ್ಯಕ್ತಿಯಾಗಿದೆ ಎಂದು ಅವರು ಹೇಳಿದರು. ಆರೋಗ್ಯಪೂರ್ಣ ವಯೋವೃದ್ಧತೆಯ ಮಹತ್ವವನ್ನು ಒತ್ತಿಹೇಳಿದ ಪ್ರಧಾನಿ, ವೃದ್ಧಾಪ್ಯದಲ್ಲಿ ಮಾನವನ ಸಾಮರ್ಥ್ಯ ಕುಗ್ಗದಂತೆ ನೋಡಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಉದ್ದೇಶ ಹೀಗಿರಲಿ
ನಾವು 20ನೇ ವಯಸ್ಸಿನಲ್ಲಿ ಇದ್ದುದಕ್ಕಿಂತ 40ನೇ ವಯಸ್ಸಿನಲ್ಲಿ ಹೆಚ್ಚು ಲವಲವಿಕೆಯಿಂದಿರುವುದು ನಮ್ಮ ಗುರಿಯಾಗಿರಬೇಕು. ಹಾಗೆಯೇ 30ನೇ ವಯಸ್ಸಿನಲ್ಲಿ ಇದ್ದುದಕ್ಕಿಂತ 50ನೇ ವಯಸ್ಸಿನಲ್ಲಿ ಹೆಚ್ಚು ಉತ್ಸಾಹಭರಿತರಾಗಿರುವುದು ನಮ್ಮ ಉದ್ದೇಶವಾಗಿರಲಿ ಎಂದು ಅವರು ತಿಳಿಸಿದರು.
ಅವಿಭಾಜ್ಯ ಅಂಗವಾಗಲಿ
ಯೋಗವನ್ನು ಕೇವಲ ಕೆಲವು ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಬದಲಾಗಿ, ಅದನ್ನು ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕು ಎಂದು ಪ್ರಧಾನಿ ಹೇಳಿದರು. ವಿಶೇಷ ಎಂದರೆ ಯೋಗಪಟುಗಳಿಗೆ ಸ್ವತಃ ಮೋದಿ ಯೋಗ ಹೇಳಿ ಕೊಟ್ಟರು.