ಬೆಂಗಳೂರು: ಕಾಂಗ್ರೆಸ್ ಮುಖಂಡರು ತಮ್ಮ ಮಕ್ಕಳಿಗೆ ಸರಿಯಾದ ಪಾಠ ಹೇಳಿಕೊಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ (Govind Karjol) ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆಯವರು (Priyank Kharge) ಆರೆಸ್ಸೆಸ್ ಬಗ್ಗೆ (RSS) ಟೀಕೆ-ಟಿಪ್ಪಣಿ ಮಾಡಿದ್ದನ್ನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರಿಗೆ ತಿಳಿಸುವುದಾಗಿ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ರಾಜಕೀಯ ಪಕ್ಷವಲ್ಲ. ಆರೆಸ್ಸೆಸ್ಸಿನ ರಾಷ್ಟ್ರೀಯ ನೇತಾರ ಮೋಹನ್ ಭಾಗವತ್ ಅವರು, ರಾಜಕಾರಣಿಯಲ್ಲ. ನೀವು ಎದುರಿಸಬೇಕಾಗಿರುವುದು ಬಿಜೆಪಿಯನ್ನು; ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನಲ್ಲ ಎಂದು ತಿಳಿಸಿದರು. ನೀವು ಎದುರಿಸಬೇಕಾದುದು ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು. ಅದನ್ನು ಅರ್ಥ ಮಾಡಿಕೊಂಡು ನೀವು ಮಾತನಾಡಬೇಕೇ ಹೊರತು ಜನರಿಗೆ ತಪ್ಪು ತಿಳಿವಳಿಕೆ ಮಾಡುವ ಮತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಆರೆಸ್ಸೆಸ್ ಬಗ್ಗೆ ಟೀಕೆ- ಟಿಪ್ಪಣಿ ಮಾಡುವುದನ್ನು ದೇಶದ 140 ಕೋಟಿ ಜನರು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಇದನ್ನು ನಾನು ಸ್ಪಷ್ಟವಾಗಿ ಖರ್ಗೆಯವರಿಗೆ ಹೇಳಲು ಬಯಸುತ್ತೇನೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Karnataka Weather: ಯೆಲ್ಲೋ ಅಲರ್ಟ್ ಮುಂದುವರಿಕೆ; ರಾಜ್ಯದಲ್ಲಿ ಅ.16ರವರೆಗೆ ಧಾರಾಕಾರ ಮಳೆ ನಿರೀಕ್ಷೆ!
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಜಾತಿ, ಧರ್ಮ ಯಾವುದೇ ಭೇದಭಾವಗಳಿಲ್ಲ
ನೀವು ಯಾವ್ಯಾವುದೋ ಕಾರಣಕ್ಕಾಗಿ ಯಾರ‍್ಯಾರನ್ನೋ ಮೆಚ್ಚಿಸಲು ರಾಷ್ಟ್ರಪ್ರೇಮದಿಂದ 100 ವರ್ಷ ಪೂರೈಸಿದ ಆರೆಸ್ಸೆಸ್ ಮತ್ತು ಸ್ವಯಂಸೇವಕರನ್ನು ಟೀಕಿಸುವುದು ಸರಿಯಲ್ಲ ಎಂದು ಹೇಳಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಜಾತಿ, ಧರ್ಮ ಯಾವುದೇ ಭೇದಭಾವಗಳಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ತಿಳಿಸಿದರು.