ಬಾಗಲಕೋಟೆ, ಏ.3: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಅಧಿಕಾರವನ್ನು ಸ್ವಂತಕ್ಕೋಸ್ಕರ, ಸ್ವಾರ್ಥಕ್ಕೋಸ್ಕರ ಮತ್ತು ರಾಜ್ಯದ ಜನರಿಗೆ ವಂಚನೆ ಮಾಡುವ ಕೆಲಸ ಮಾಡಿ, ಈ ರಾಜ್ಯವನ್ನು ಕತ್ತಲೆ ಕೋಣೆಯಲ್ಲಿಡುವ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರು ನಗರದ ಅಭಿವೃದ್ಧಿಯಲ್ಲಿ ನಮ್ಮದೇ ಆದ ಪಾಲುದಾರಿಕೆಯನ್ನು ಕೊಟ್ಟಿದ್ದೇವೆ ಎಂದು ತಿಳಿಸಿದರು.
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಿತಿಮೀರಿದೆ. ಅವ್ಯವಸ್ಥೆಯ ಆಗರವಾಗಿದೆ. ತಮ್ಮವರೇ ನಿಂದಿಸಿದರೂ ಎಚ್ಚೆತ್ತುಕೊಳ್ಳದ ನಿರ್ಲಿಪ್ತ ಸರ್ಕಾರ ಸಿದ್ದರಾಮಯ್ಯ ಅವರದು ಎಂದು ಟೀಕಿಸಿದ ಅವರು, ಮೂಲಭೂತ ಸೌಕರ್ಯದತ್ತ ಎಲ್ಲೂ ಗಮನ ಕೊಡದೇ ಇಡೀ ಸಚಿವ ಸಂಪುಟ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ ಎಂದು ದೂರಿದರು.
ವಿವಿಧ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿದರೂ ಅದಕ್ಕೆ ಸರಿಯಾಗಿ ಸ್ಪಂದಿಸದೇ ಇಡೀ ರಾಜ್ಯದಲ್ಲಿ ಮೂರು ವರ್ಷದಲ್ಲಿ 2809 ಜನ ರೈತರು ಸಾವನ್ನಪ್ಪಿದ್ದಾರೆ. ಸುಮಾರು 2.5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಇವೆ. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಇದೀಗ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಜನರನ್ನು ದಿಕ್ಕು ತಪ್ಪಿಸುವ ಕೆಲಸ
ಒಂದು ಸಮಾಜವನ್ನು ಇನ್ನೊಂದು ಸಮಾಜದ ಮೇಲೆ ಎತ್ತಿಕಟ್ಟುವ ಕ್ರಾಂತಿಕಾರಿ ಕಾರ್ಯ, ದೊಡ್ಡಸ್ಥಿಕೆಯನ್ನು ಈ ಸರ್ಕಾರ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದೆ ಎಂದು ಟೀಕಿಸಿದರು.
ಲೈಫ್‌ಟೈಮ್ ರಸ್ತೆ ತೆರಿಗೆ ವಿಧಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ
ಜೆಸಿಬಿ ಕೆಲಸ ಮಾಡಿ ಯಾವುದೋ ಹೆಸರಿನಲ್ಲಿ ಹಣ
ಅನವಶ್ಯಕವಾಗಿ ಟೀಕೆ ಮಾಡುವುದರಲ್ಲಿ ಇವರು ನಿಸ್ಸೀಮರು. ವಿಬಿ-ಜಿ ರಾಮ್ ಜಿ ವಿಚಾರಕ್ಕೆ ಬಂದರೆ 41 ಲಕ್ಷ ಬೋಗಸ್ ಕಾರ್ಡ್ ಇಟ್ಟುಕೊಂಡ ಜನ ನೀವು. ಜೆಸಿಬಿ ಕೆಲಸ ಮಾಡಿ ಯಾವುದೋ ಹೆಸರಿನಲ್ಲಿ ಹಣ ಪಡೆಯಲಾಗುತ್ತಿತ್ತು ಎಂದು ಆರೋಪಿಸಿದ ಅವರು, ಪ್ರಧಾನಿಯವರು ದೇಶದ ಸರ್ವಾಂಗೀಣ ಅಭಿವೃದ್ಧಿ ಮತ್ತು ಹಳ್ಳಿಗಾಡಿನ ಜನರ ಜೀವನಮಟ್ಟ ಸುಧಾರಣೆಗಾಗಿ 88 ಸಾವಿರ ಕೋಟಿ ಬದಲಾಗಿ 97 ಸಾವಿರ ಕೋಟಿಯನ್ನು ಅದಕ್ಕಾಗಿ ಮೀಸಲಿಟ್ಟಿದ್ದಾರೆ. ಜಿ ರಾಮ್ ಜಿ ಎಂದು ಮಾಡಿ, ವಿಕಸಿತ ಭಾರತದ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ ಎಂದು ಹೇಳಿದರು. ಇದೊಂದು ಕೆಟ್ಟ- ನಿರ್ಲಿಪ್ತ ಸರ್ಕಾರ. ರಾಜ್ಯದ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಆರೋಪಿಸಿದರು.