ಬೆಂಗಳೂರು: ಎಸ್ಐಆರ್ (SIR) ವಿರೋಧಿಸಿ ಹಾಗೂ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟ ವತಿಯಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ‘ಮತ ಉಳಿಸಿ, ದೇಶ ಉಳಿಸಿ’ ಪ್ರತಿಭಟನಾ ಸಮಾವೇಶ (INDIA bloc protest) ಗುರುವಾರ ನಡೆಯಿತು. ಸಮಾವೇಶದಲ್ಲಿ 5 ನಿರ್ಣಯ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಕೆಪಿಸಿಸಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಇಂಡಿಯಾ ಬ್ಲಾಕ್ ಮೈತ್ರಿಪಕ್ಷಗಳ ನಾಯಕರು ಭಾಗಿಯಾಗಿದ್ದರು. ಎಸ್ಐಆರ್ ಹೊಸ ಮತಪಟ್ಟಿಯನ್ನು ರದ್ದು ಮಾಡಿ, ಹಳೆಯ ಮತಪಟ್ಟಿ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು
- ಅಕ್ರಮ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಸ್ಐಆರ್ ರದ್ದು ಮಾಡಬೇಕು.
- ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು.
- ಚುನಾವಣಾ ಆಯುಕ್ತರ ನೇಮಕಾತಿ ಕಾನೂನು ರದ್ದು ಮಾಡಬೇಕು
- ರಾಜ್ಯ ಸರ್ಕಾರ ಕರ್ನಾಟಕದ ಎಸ್ಐಆರ್ ಅಂತಿಮ ಪಟ್ಟಿ ತಿರಸ್ಕರಿಸಬೇಕು
- ಹಳೇ ಮತಪಟ್ಟಿ ಆಧರಿಸಿ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಬೇಕು.
‘ಎಲೆಕ್ಷನ್ ಕಮಿಷನ್’ ‘ಸೆಲೆಕ್ಷನ್ ಕಮಿಷನ್’ ಆಗಿ ಮಾರ್ಪಟ್ಟಿದೆ: ಬಿ.ಕೆ.ಹರಿಪ್ರಸಾದ್
ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಚುನಾವಣಾ ಆಯೋಗ ಇಂದು ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು ‘ಎಲೆಕ್ಷನ್ ಕಮಿಷನ್’ ಬದಲಾಗಿ ‘ಸೆಲೆಕ್ಷನ್ ಕಮಿಷನ್’ ಆಗಿ ಮಾರ್ಪಟ್ಟಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಬೆಳವಣಿಗೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದ ಆರ್ಎಸ್ಎಸ್ ಹಾಗೂ ಅದರ ಸಿದ್ಧಾಂತವನ್ನು ಅನುಸರಿಸುತ್ತಿರುವ ಬಿಜೆಪಿ ಇಂದು ಸಂವಿಧಾನದ ಆಶಯಗಳನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬುಡಮೇಲು ಮಾಡಲು ಹೊರಟಿವೆ. ಎಸ್ಐಆರ್ ಹೆಸರಿನಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಮೂಲಕ ಜನರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ.
ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಟ್ಟು, ಕೇಂದ್ರ ಸಚಿವರನ್ನು ಸೇರಿಸಿಕೊಂಡಿರುವುದು ತಮಗೆ ಬೇಕಾದ ಅಂಪೈರ್ ಅನ್ನು ತಾವೇ ಆಯ್ಕೆ ಮಾಡಿಕೊಂಡಂತಾಗಿದೆ. ಇದು ಚುನಾವಣಾ ವ್ಯವಸ್ಥೆಯ ಸ್ವಾಯತ್ತತೆಯ ಮೇಲಿನ ನೇರ ದಾಳಿ. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿಲ್ಲದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಇಂಡಿಯಾ ಮೈತ್ರಿಕೂಟದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಅವರ ರಾಜಕೀಯ ಹತಾಶೆಗೆ ಸಾಕ್ಷಿಯಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು. ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಅರ್ಹ ಮತದಾರರ ಹಕ್ಕುಗಳನ್ನು ಮರುಸ್ಥಾಪಿಸಬೇಕು. ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಖಾತ್ರಿಪಡಿಸಬೇಕು ಎಂಬುದು ನಮ್ಮ ಸ್ಪಷ್ಟ ಆಗ್ರಹವಾಗಿದೆ ಎಂದು ಹೇಳಿದರು.
ಕೆಪಿಎಸ್ಸಿ ಅಕ್ರಮಗಳ ದಾಖಲೆ ಜನರ ಮುಂದೆ ಇಟ್ಟಿದ್ದು ಈ ಹಳ್ಳಿ ಗುಗ್ಗುನೇ: ಪ್ರಿಯಾಂಕ್ ಖರ್ಗೆಗೆ ಎಚ್ಡಿಕೆ ತಿರುಗೇಟು
ಸಮಾವೇಶದಲ್ಲಿ ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಸಚಿವ ಯತೀಂದ್ರ ಸಿದ್ದರಾಮಯ್ಯ, ನಟ ಪ್ರಕಾಶ್ ರಾಜ್, ಸಿಪಿಎಂ ಕಾರ್ಯದರ್ಶಿ ಕೆ ಪ್ರಕಾಶ್, ಸಾಥಿ ಸುಂದರೇಶ್, ಮಹಾಂತೇಶ್, ಫಾರ್ವಡ್ ಬ್ಲಾಕ್ ನ ಶಿವಶಂಕರ್, ಅಲಿ, ಸಿಪಿಐಎಂಎಲ್ ಪಕ್ಷದ ಕ್ಲಿಪ್ಟನ್ ಡಿ ರೊಜಾರಿಯೋ ಮತ್ತಿತರರು ಉಪಸ್ಥಿತರಿದ್ದರು.