ಬೆಂಗಳೂರು, ಆ.08: ಬಿಡದಿ ಟೌನ್‌ಶಿಪ್ (Bidadi Township-ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ) ಯೋಜನೆ ವಿಚಾರವಾಗಿ ವ್ಯಕ್ತವಾಗುತಿರುವ ವಿಭಿನ್ನ ಅಭಿಪ್ರಾಯಗಳನ್ನು ಪರಿಶೀಲಿಸಿ ವರದಿ ನೀಡಲು ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶಿಸಿದ್ದಾರೆ. ಈ ಸಮಿತಿಯಲ್ಲಿ ನಿವೃತ್ತ ಮುಖ್ಯಕಾರ್ಯದರ್ಶಿಗಳಾದ ಎಸ್.ವಿ. ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್, ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನಕುಮಾರ್ ಅವರು ಸದಸ್ಯರಾಗಿದ್ದಾರೆ. ಈ ಸಮಿತಿಯು 30 ದಿನಗಳಲ್ಲಿ ವರದಿ ಸಲ್ಲಿಸಲಿದೆ.
ಈ ಯೋಜನೆಗೆ ಯಾರಿಂದಲೂ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಮಿತಿಯು ಸದರಿ ಯೋಜನೆಯನ್ನು ಕಾನೂನಾತ್ಮಕ, ಮಾನವೀಯತೆ ಹಾಗೂ ಸಮಗ್ರ ಅಭಿವೃದ್ದಿಯ ಚೌಕಟ್ಟಿನಲ್ಲಿ ವಿಶ್ಲೇಷಣೆಗೊಳಪಡಿಸಿ ತನ್ನ ಶಿಫಾರಸ್ಸನ್ನು ನೀಡಲಿದೆ.
2006ನೇ ಸಾಲಿನಲ್ಲಿ ಬಿಡದಿ ಬಳಿ ಸಮಗ್ರ ಉಪ ನಗರವನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿತ್ತು. ಇತ್ತೀಚೆಗೆ ಬೆಂಗಳೂರಿನ ಸಮೀಪ ಬಂಡವಾಳ ಹೂಡಿಕೆಗೆ ಬೇಡಿಕೆ ಹೆಚ್ಚಾಗಿದ್ದು, ನನೆಗುದಿಗೆ ಬಿದ್ದಿದ್ದ ಬಿಡದಿ ಸಮಗ್ರ ಉಪನಗರ ಯೋಜನೆಯನ್ನು ಜನವಸತಿ ಪ್ರದೇಶಗಳ ಕನಿಷ್ಠ ಸ್ಥಳಾಂತರ ಮತ್ತು ಭೂಮಾಲೀಕರಿಗೆ ಉತ್ತಮ ಮೌಲ್ಯ ಒದಗಿಸುವ ಆಶಯದೊಂದಿಗೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ಮುಂದುವರೆಸಲು ಸರ್ಕಾರವು ತೀರ್ಮಾನಿಸಿದೆ.
ಯೋಜನೆಯನ್ನು ಜನಸ್ನೇಹಿಯಾಗಿ ಜಾರಿಗೊಳಿಸಲು ಸಾರ್ವಜನಿಕರ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಾಗಿ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಸಚಿವ ಸ್ಥಾನ ನಿರಾಕರಣೆಯ ಅಸಮಾಧಾನವನ್ನು ಅರ್ಥಪೂರ್ಣ ರಕ್ತದಾನ ಪ್ರತಿಭಟನೆಯಾಗಿ ಪರಿವರ್ತಿಸಿದ ಹಾನಗಲ್
ಜನರ ಆಶೋತ್ತರಗಳನ್ನು ಗೌರವಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಯನ್ನು ಮತ್ತಷ್ಟು ಉತ್ತಮವಾಗಿ ರೂಪಿಸುವುದು ಸರ್ಕಾರದ ಆಶಯವಾಗಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ರಚನೆಯನ್ನು ಮಾಡಿದೆ.