ಚಿತ್ರದುರ್ಗ, ಜು.08: ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಯೋಗ್ಯ ವ್ಯಕ್ತಿ ವಿಧಾನ ಪರಿಷತ್‌ಗೆ ಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ವಿಧಾನಸೌಧವು ಪ್ರಜಾಪ್ರಭುತ್ವದ ದೇಗುಲ ಎಂದು ನಂಬಿದ್ದೇವೆ. ನಾಡಿನ ಆಗುಹೋಗು, ಜ್ವಲಂತ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚೆ ಆಗಲು ಯೋಗ್ಯ ವ್ಯಕ್ತಿಗಳು ಆಯ್ಕೆಯಾಗಿ ಬರಬೇಕು ಎಂಬ ಅಪೇಕ್ಷೆ ಜನಸಾಮಾನ್ಯರದು ಎಂದು ತಿಳಿಸಿದರು.
ಈ ಕ್ಷೇತ್ರವನ್ನು ಬಿಜೆಪಿ 8 ಬಾರಿ ನಿರಂತರವಾಗಿ ಪ್ರತಿನಿಧಿಸಿದೆ
ಈಚಿನ ದಿನಗಳಲ್ಲಿ ತಮ್ಮ ರಾಜಕೀಯ ಚಪಲ, ರಾಜಕೀಯ ಚಟಕ್ಕಾಗಿ ವಿಧಾನಪರಿಷತ್ತಿಗೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಣದ ಅಹಂನಿಂದ ಚುನಾವಣೆ ಗೆಲ್ಲುತ್ತೇವೆಂಬ ಭ್ರಮೆಯಿಂದ ಸ್ಪರ್ಧಿಸುವುದನ್ನು ನೋಡುತ್ತಿದ್ದೇವೆ ಎಂದು ತಿಳಿಸಿದರು. ಆಗ್ನೇಯ ಪದವೀಧರ ಕ್ಷೇತ್ರವನ್ನು ಬಿಜೆಪಿ 8 ಬಾರಿ ನಿರಂತರವಾಗಿ ಪ್ರತಿನಿಧಿಸಿದೆ. ಪದವೀಧರ ಕ್ಷೇತ್ರ, ಶಿಕ್ಷಣ ಕ್ಷೇತ್ರವು ಅತ್ಯಂತ ಪ್ರಮುಖವಾದುದು. ವಿಧಾನಪರಿಷತ್ತಿನಲ್ಲಿ ಸೂಕ್ತ ವ್ಯಕ್ತಿ ಈ ಕ್ಷೇತ್ರಗಳನ್ನು ಪ್ರತಿನಿಧಿಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಾಮಾಣಿಕ ಕಾರ್ಯಕರ್ತ ಸುರೇಶ್‌ರನ್ನು ಬೆಂಬಲಿಸಿ
ಬಿಜೆಪಿ ಒಬ್ಬ ಪ್ರಾಮಾಣಿಕ ಕಾರ್ಯಕರ್ತ, ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ದಶಕಗಳಿಂದ ಸೇವೆ ಮಾಡುತ್ತಿರುವ ಸಮಾಜಮುಖಿಯಾಗಿ ಕೆಲಸ ಮಾಡುವ ಪ್ರಾಮಾಣಿಕ ವ್ಯಕ್ತಿ ಕೆ.ಎಂ. ಸುರೇಶರನ್ನು ಎನ್‍ಡಿಎ ಅಭ್ಯರ್ಥಿಯಾಗಿ ಘೋಷಿಸಿದೆ. ಚುನಾವಣೆಗೆ ಹೆಚ್ಚು ದಿನಗಳು ಉಳಿದಿಲ್ಲ. ಮತದಾರರ ಸಂಖ್ಯೆ 50 ಸಾವಿರ ದಾಟುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕೆ.ಎಂ.ಸುರೇಶ ಅವರು 5 ಜಿಲ್ಲೆಗಳಲ್ಲಿ ಪ್ರವಾಸ ಮಾಡಬೇಕಿದೆ. 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಈ ಕ್ಷೇತ್ರವನ್ನು ಸುತ್ತಬೇಕಿದೆ. ಚಿತ್ರದುರ್ಗ ಜಿಲ್ಲೆಯ ಮುಖಂಡರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದ್ದಾಗಲೂ ಶಿಕ್ಷಣ- ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತ ಬಂದಿದೆ. ಪರಿಸ್ಥಿತಿ ಬದಲಾಗುತ್ತಿದೆ. ಆಡಳಿತ ಪಕ್ಷವು ಹಲವು ತಿಂಗಳಿನಿಂದ ಮತದಾರರನ್ನು ನೋಂದಣಿ ಮಾಡಿಸುತ್ತ ಬಂದಿದೆ. ಇನ್ನು ಕೆಲವು ತಿಂಗಳು ಬಾಕಿ ಇದ್ದು ನಾವು ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ಜನರಲ್ಲಿ ಅಸಮಾಧಾನ
ಚಂದ್ರಣ್ಣ ಅವರು ನನ್ನನ್ನು ಭವಿಷ್ಯದ ಮುಖ್ಯಮಂತ್ರಿ ಎಂಬ ಮಾತನ್ನು ಪ್ರೀತಿಯಿಂದ ವಿಶ್ವಾಸವಿಟ್ಟು ಹೇಳಿದ್ದಾರೆ. ಅದುವೇ ನಮಗೆ ಸಮಸ್ಯೆ ಆಗಿದೆ. ನಾನು ಒಬ್ಬ ರಾಜ್ಯ ಅಧ್ಯಕ್ಷನಾಗಿ ಕಿವಿಮಾತು ಹೇಳಲು ಬಯಸುತ್ತೇನೆ. ಯಾರು ಮುಖ್ಯಮಂತ್ರಿ ಆಗಬೇಕೆಂಬುದು ಮುಖ್ಯವಲ್ಲ; ರಾಜ್ಯದ ಮತದಾರರು ಈ ಭ್ರಷ್ಟ- ಜನವಿರೋಧಿ, ಹಿಂದೂ ವಿರೋಧಿ ಸರ್ಕಾರದ ವಿರುದ್ಧ, ಪರಿಶಿಷ್ಟ ಜಾತಿ, ವರ್ಗದ ದುಡ್ಡನ್ನು ಕೊಳ್ಳೆ ಹೊಡೆಯುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಹಾಗಾಗಿ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು.
SIR ತಾತ್ಕಾಲಿಕ ತಡೆಗೆ ಎನ್‌ಡಿಎ ಪಟ್ಟು; ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ಬಸವರಾಜ್, ಶಾಸಕ ಚಂದ್ರಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ಶಿವಯೋಗಿ ಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಕೇಶವಪ್ರಸಾದ್, ನವೀನ್, ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ, ಎನ್‍ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್, ಕಾಡುಗೊಲ್ಲರ ಸಮಾಜದ ರಾಜ್ಯ ಅಧ್ಯಕ್ಷ ರಾಜಣ್ಣ, ಮುಖಂಡರಾದ ಕುಮಾರಸ್ವಾಮಿ, ರಘುಚಂದನ್, ಸಿದ್ಧಾರ್ಥ, ಮಂಡಲ ಅಧ್ಯಕ್ಷ ನಾಗರಾಜ್, ನಗರ ಮಂಡಲ ಅಧ್ಯಕ್ಷ ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ರವೀಂದ್ರನಾಥ್, ಲಕ್ಷ್ಮೀಕಾಂತ್, ಮಧುಗಿರಿ ಗಿರೀಶ್, ಪಕ್ಷದ ಪ್ರಮುಖರು ಇದ್ದರು.