ಬೆಂಗಳೂರು, ಆ. 11: ಅಲೆಮಾರಿ ಮತ್ತು ಆದಿವಾಸಿ ಆಯೋಗ ರಚನೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಬಂದಿದ್ದು, ಒಂದು ತಿಂಗಳಲ್ಲಿ ರಚನೆ ಮಾಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಭರವಸೆ ನೀಡಿದರು. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.
ನಾವೆಲ್ಲರೂ ಮೂಲ ಆದಿವಾಸಿಗಳೇ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾಗರಿಕತೆ ಬಂದು ಸೂಟು ಬೂಟು ಹಾಕಿದ್ದೇವೆ. ಹುಟ್ಟಿದಾಗ ಬಟ್ಟೆ, ಹೆಸರು, ಕುರ್ಚಿ, ಅಧಿಕಾರ ಏನೂ ಇರಲಿಲ್ಲ. ನಂತರ ಹೆಸರು ಹಾಗೂ ಎಲ್ಲವೂ ಬಂದಿದೆ. ನೀವು ಪ್ರಕೃತಿ ಜತೆಗೆ ಬದುಕುತ್ತಿದ್ದೀರಿ. ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಕೊನೆಗೆ ನಾವು ಬದುಕಲು ಬಯಸುವುದು ಪ್ರಕೃತಿ ಜತೆಗೆ ಎಂದರು.
ನೀವು ಪ್ರಕೃತಿ ಮಕ್ಕಳು, ಭಾಗ್ಯವಂತರು. ನೀವು ಸಾಕಷ್ಟು ಸಮಸ್ಯೆಯಲ್ಲಿ ಬದುಕುತ್ತಿದ್ದೀರಿ. ಸರ್ಕಾರ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಶಿಕ್ಷಣ ಸೇರಿ ಅನೇಕ ಕಾರ್ಯಕ್ರಮ ನೀಡಿದೆ. ಯುಪಿಎ ಸರ್ಕಾರದಲ್ಲಿ ಅರಣ್ಯ ಹಕ್ಕು ಕಾಯ್ದೆ ನೀಡಿದೆವು. ನನ್ನ ಕ್ಷೇತ್ರದಲ್ಲಿ ನಿಮ್ಮ ಸಮುದಾಯದ ಜನರ ಭಾವನೆ, ಬದುಕು, ಶ್ರಮ ಏನು ಎಂದು ಅರಿತಿದ್ದೇನೆ ಎಂದು ತಿಳಿಸಿದರು.
ಬೆಂಗಳೂರು ಜಿಲ್ಲೆಯಲ್ಲೂ ನಿಮ್ಮ ಜನಾಂಗ ಪರಿಶ್ರಮದಲ್ಲಿ ಬದುಕುತ್ತಿದ್ದೀರಿ. ನೀವು ಶಿಕ್ಷಣಕ್ಕೆ ಆದ್ಯತೆ ನೀಡಿ, ವಿದ್ಯಾವಂತರು, ಪ್ರಜ್ಞಾವಂತರಾಗಿ. ಆದರೆ ನಿಮ್ಮ ಮೂಲ ಕಸುಬು ಬಿಡಬೇಡಿ. ಬೇರು ಗಟ್ಟಿಯಾಗಿದ್ದಾರೆ ಮಾತ್ರ ಹಣ್ಣು ಪಡೆಯಲು ಸಾಧ್ಯ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಿಮ್ಮ ಮೂಲ ತತ್ವ, ಬದುಕಿನ ಆದರ್ಶ ಮರೆಯಬೇಡಿ. ಸೂರ್ಯ ಚಂದ್ರರೆ ನಿಮಗೆ ಗಡಿಯಾರ ಎಂದು ಕಿವಿಮಾತು ಹೇಳಿದರು.
ನಿಮಗೆ ನೀಡಬೇಕಾದದ್ದನ್ನು ಸರ್ಕಾರ ನೀಡಲಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಿ, ಬೆಳೆಸಿ. ನಿಮ್ಮ ಪರವಾಗಿ ದ್ವಾರಕನಾಥ್ ಅವರು ಮನವಿ ಮಾಡಿದ್ದಾರೆ. ನಾವು ಕಂದಾಯ ಗ್ರಾಮ ಘೋಷಿಸಿ ಹಕ್ಕುಪತ್ರ, ಮನೆ ನೀಡಿದ್ದೇವೆ. ಅಲೆಮಾರಿ ಮತ್ತು ಆದಿವಾಸಿ ಆಯೋಗ ರಚನೆಗೆ ಮನವಿ ಮಾಡಿದ್ದು, ಒಂದು ತಿಂಗಳಲ್ಲಿ ಅದಕ್ಕೆ ತೀರ್ಮಾನ ಮಾಡಲಾಗುವುದು. ಇದು ನಮ್ಮ ಸರ್ಕಾರದ ಪ್ರಣಾಳಿಕೆ ಭಾಗವಾಗಿದೆ ಎಂದು ತಿಳಿಸಿದರು.
ನೊಂದು ಬೆಂದಿರುವ ಸಮಾಜಕ್ಕೆ ಶಕ್ತಿ ತುಂಬುವುದು ನಮ್ಮ ಕರ್ತವ್ಯ
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ನನ್ನ ಗುರುಗಳು ಮಾರ್ಗದರ್ಶನ ನೀಡಿದ್ದಾರೆ. ನೊಂದು ಬೆಂದಿರುವ ಸಮಾಜಕ್ಕೆ ಶಕ್ತಿ ತುಂಬುವುದು ನಮ್ಮ ಕರ್ತವ್ಯ. ನಗರದ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾಲ ಹಳ್ಳಿಗಳಲ್ಲಿ ವಾಸ ಇದ್ದು, ಅಲ್ಲಿನ ಜನರ ಬದುಕಿನ ಬಗ್ಗೆ ಪರಿಚಯಿಸಲು ತೀರ್ಮಾನಿಸಿದ್ದೇವೆ. ನೀವು ನಿಮ್ಮ ಮೂಲ ಹಾಗೂ ಆಸ್ತಿಯನ್ನು ಬಿಟ್ಟುಕೊಡಬೇಡಿ ಎಂದರು.
ಶಿಕ್ಷಣ, ವಸತಿ, ಭೂಮಿ, ಆಹಾರ, ಉದ್ಯೋಗ, ಗ್ಯಾರಂಟಿ ನೀಡಲು ಬದ್ಧ
ಈ ಹಿಂದೆ ನೆಹರೂ ಅವರು ಆದಿವಾಸಿಗಳಿಂದ ಅಣೆಕಟ್ಟು ಉದ್ಘಾಟನೆ ಮಾಡಿಸಿದ್ದರು. ನಿಮ್ಮ ನಮ್ಮ ಸಂಬಂಧ ಭಕ್ತ ಹಾಗೂ ಭಗವಂತನ ಸಂಬಂಧ. ನಿಮಗೆ ಶಿಕ್ಷಣ, ವಸತಿ, ಭೂಮಿ, ಆಹಾರ, ಉದ್ಯೋಗ, ಗ್ಯಾರಂಟಿ ನೀಡಲು ಬದ್ಧ. ನಾವು ನಿಮಗಾಗಿ ಐದು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಇಂತಹ ಒಂದು ಯೋಜನೆ ಬೇರೆ ಯಾವುದಾದರೂ ಸರ್ಕಾರ ನೀಡಿತ್ತಾ? ನಿಮಗೆ ನಾವು, ನಮಗೆ ನೀವು ಆಸರೆಯಾಗಿ ಇರಬೇಕು ಎಂದು ಕರೆ ನೀಡಿದರು.
ನಿಮ್ಮ ಶ್ರಮಕ್ಕೆ ಗೌರವ ನೀಡಲು ನಾವು ಬದ್ಧ. ನಿಮ್ಮಲ್ಲಿ ಕೀಳರಿಮೆ ಬೇಡ, ನಿಮ್ಮ ಮೂಲ ಬದುಕನ್ನು ಹೆಮ್ಮೆಯಿಂದ ಬದುಕಿ. ಎಸ್ಐಆರ್ ಪ್ರಕ್ರಿಯೆಯಲ್ಲಿ ನಿಮ್ಮ ಮತದಾನ ಹಕ್ಕು ಕಾಪಾಡಿಕೊಳ್ಳಿ. ನಿಮಗೆ ಜಾತಿ ಹಾಗೂ ವಾಸ ದೃಢೀಕರಣ ಪತ್ರ ನೀಡಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.