ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಗೇಟ್‌ಗಳ ಬದಲಾವಣೆ: ಡಿ.ಕೆ. ಶಿವಕುಮಾರ್

DK Shivakumar: ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಕ್ರಸ್ಟ್‌ಗೇಟ್‌ಗಳ ಬದಲಾವಣೆ ಕಾರ್ಯವನ್ನು ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದು, ಬರುವ ಮೇ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು, ಮಾ.12: ತುಂಗಭದ್ರಾ ಅಣೆಕಟ್ಟಿನ (TB Dam) ಎಲ್ಲಾ ಕ್ರಸ್ಟ್‌ಗೇಟ್‌ಗಳ ಬದಲಾವಣೆ ಕಾರ್ಯವನ್ನು ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದು, ಬರುವ ಮೇ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಭರವಸೆ ನೀಡಿದರು. ವಿಧಾನ ಪರಿಷತ್ತಿನಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಟಿ.ಎ. ಶರವಣ ಅವರು ಟಿಬಿ ಅಣೆಕಟ್ಟು ಕ್ರೇಸ್ಟ್ ಗೇಟ್ ಅಳವಡಿಕೆ ವಿಚಾರ ಪ್ರಸ್ತಾಪಿಸಿದಾಗ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಹೀಗೆ ಪ್ರತಿಕ್ರಿಯಿಸಿದರು.

ಟಿ.ಎ.ಶರವಣ ಅವರು ಬಹಳ ಬುದ್ಧಿವಂತರು ಎಂದು ಭಾವಿಸಿದ್ದೆ. ಅವರು ತುಂಗಭದ್ರಾ ಗೇಟ್ ಅಳವಡಿಕೆ ವಿಚಾರವನ್ನು ಪ್ರಸ್ತಾಪಿಸಿ, ಬೆಂಗಳೂರಿನಲ್ಲಿ ಮನೆ ಹಂಚಿಕೆ, ಕೇರಳದಲ್ಲಿ ಮನೆ ನಿರ್ಮಾಣ ಸೇರಿದಂತೆ ಅನೇಕ ಬೇರೆ ಬೇರೆ ವಿಚಾರಗಳನ್ನು ಎಳೆದು ತಂದಿದ್ದಾರೆ. ಟಿಬಿ ಅಣೆಕಟ್ಟಿನ ಗೇಟ್ ಅಳವಡಿಕೆ ವಿಚಾರ ಬಹಳ ಗಂಭೀರವಾದುದು.

ಶರವಣ ಹಾಗೂ ಇತರ ಸದಸ್ಯರನ್ನು ನಾನು ತುಂಗಭದ್ರಾ ಅಣೆಕಟ್ಟೆಗೆ ಕಳುಹಿಸಿ ಕೊಡುತ್ತೇನೆ, ಹೋಗಿ ನೋಡಲಿ. ಅಲ್ಲಿ ಕ್ರಸ್ಟ್ ಗೇಟ್ ತುಂಡರಿಸಿದಾಗ, ಅಣೆಕಟ್ಟು ಸಂಪೂರ್ಣ ಅಲ್ಲಾಡಿದಂತೆ ಭಾಸವಾಗಿತ್ತು. ನಾವು ಕೇವಲ 7 ದಿನಗಳಲ್ಲಿ ದುರಸ್ತಿ ಮಾಡಿದೆವು. ಆಗ ಜನಾರ್ದನ ರೆಡ್ಡಿ ಏನು ಹೇಳಿಕೆ ಕೊಟ್ಟಿದ್ದರು ಎಂಬುದು ಗೊತ್ತಿದೆ. ಆಗ ನಾನು 'ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ' ಎಂದು ಹೇಳಿದ್ದೆ. ನಂತರ ನಾವು ರಾಜ್ಯದ ಎಲ್ಲಾ ಅಣೆಕಟ್ಟುಗಳ ಅಧ್ಯಯನ ನಡೆಸಿ ಹಳೇ ಗೇಟ್‌ಗಳ ಬದಲಾವಣೆಗೆ ತೀರ್ಮಾನ ಮಾಡಿದೆವು. ಮೊದಲ ಹಂತದಲ್ಲಿ ಟಿಬಿ ಡ್ಯಾಂ ಗೇಟ್ ಬದಲಿಸುತ್ತಿದ್ದೇವೆ. ಪತ್ರಿಕೆಯಲ್ಲಿ ಮಾರ್ಚ್ 10 ರವರೆಗೆ 14 ಗೇಟ್ ಬದಲಿಸಲಾಗಿದ್ದು, ತಜ್ಞರ ಪ್ರಕಾರ ಒಂದು ಕ್ರಸ್ಟ್ ಗೇಟ್ ಅಳವಡಿಕೆಗೆ 7 ದಿನಗಳ ಕಾಲಾವಕಾಶ ಬೇಕು. ಹಲವು ಗೇಟ್‌ಗಳ ಅಳವಡಿಕೆ ಕಾರ್ಯ ನಡೆದರೆ ಈ ಪ್ರಕ್ರಿಯೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಅಧ್ಯಕ್ಷರೇ ನಾವು ಎಲ್ಲಾ ಗೇಟ್ ಬದಲಿಸುವ ತೀರ್ಮಾನ ಮಾಡಿದ್ದು, 19ನೇ ಸ್ಟಾಪ್ ಲಾಗ್ ಗೇಟ್ ತೆರವುಗೊಳಿಸಿ ಸ್ಪಿಲ್ ಗೇಟ್ ಅಳವಡಿಕೆಗೆ 2025 ಏಪ್ರಿಲ್ 24ರಂದು ಅಹಮದಾಬಾದಿನ ಹಾರ್ಡ್‌ವೇರ್ ಟೂಲ್ ಅಂಡ್ ಮಷಿನರಿ ಪ್ರಾಜೆಕ್ಟ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 34.48 ಕೋಟಿ ರೂ. ವೆಚ್ಚದಲ್ಲಿ ಉಳಿದ 32 ಸ್ಪಿಲ್ ವೇ ಗೇಟ್ ಅಳವಡಿಕೆಯನ್ನು 15 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಸಲು ಇದೇ ಸಂಸ್ಥೆಯೊಂದಿಗೆ ಜೂನ್ 10, 2025ರಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ. 25 ಗೇಟ್‌ಗಳ ಫ್ಯಾಬ್ರಿಕೇಶನ್ ಕೆಲಸ ಮುಗಿದಿದ್ದು, 2 ಗೇಟ್‌ಗಳ ಕೆಲಸ ನಡೆಯುತ್ತಿದೆ. 26 ಗೇಟ್‌ಗಳನ್ನು ತೆಗೆಯಲಾಗಿದ್ದು, 2 ಗೇಟ್‌ಗಳ ತೆರವು ಕಾರ್ಯ ನಡೆಯುತ್ತಿದೆ. ಇದರಲ್ಲಿ 14 ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 3 ಗೇಟ್‌ಗಳ ಕಾರ್ಯ ಪ್ರಕ್ರಿಯೆಯಲ್ಲಿದೆ. ಮೇ ತಿಂಗಳ ಒಳಗಾಗಿ ಎಲ್ಲಾ ಗೇಟ್ ಬದಲಾವಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ನವಲಿ: ಆಂಧ್ರ ಚರ್ಚೆಗೆ ಬರುತ್ತಿಲ್ಲ

ಇನ್ನು ನವಲಿ ಸಮತೋಲಿತ ಜಲಾಶಯ ನಿರ್ಮಾಣ ವಿಚಾರದಲ್ಲಿ ಆಂಧ್ರ ಪ್ರದೇಶದವರು ಮಾತುಕತೆಗೆ ಬರುತ್ತಿಲ್ಲ. ಕೆಲವರು ಪರ್ಯಾಯ ಮಾರ್ಗಗಳ ಸಲಹೆ ನೀಡಿದ್ದು, ಆಂಧ್ರ ಸಿಎಂ ಈ ವಿಚಾರವಾಗಿ ಚರ್ಚೆ ಮಾಡಲು ಸಮಯ ನೀಡುತ್ತಿಲ್ಲ. ಈ ಅಣೆಕಟ್ಟು ನಮ್ಮ ಆಸ್ತಿ. ಈ ವಿಚಾರದಲ್ಲಿ ಕೇವಲ ಕರ್ನಾಟಕ ಏಕಾಂಗಿಯಾಗಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಮೂರು ರಾಜ್ಯದವರು ಸೇರಿ ತೀರ್ಮಾನ ಮಾಡಬೇಕು. ನೀರು ಹರಿದು ಸಮುದ್ರಕ್ಕೆ ಹೋಗುತ್ತಿದೆ. ಇದನ್ನು ಉಳಿಸಿ ಜನರಿಗೆ ನೀಡಲು ನಿಮ್ಮೆಲ್ಲರ ರಾಜಕೀಯ ಬದ್ಧತೆ, ಶಕ್ತಿ ನೀಡಿದರೆ ನಾವು ವ್ಯವಸ್ಥೆ ಮಾಡಬಹುದು. ಗೇಟ್ ಬದಲಾವಣೆ ವಿಚಾರವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.‌

ಎಲ್‌ಪಿಜಿ ಕೊರತೆ ಬಗ್ಗೆ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತಿ ಜನರಿಗೆ ನ್ಯಾಯ ಒದಗಿಸಲಿ: ಡಿ.ಕೆ. ಶಿವಕುಮಾರ್ ಆಗ್ರಹ

ಶೂನ್ಯ ವೇಳೆಯಲ್ಲಿ ಬಿ.ಜಿ. ಪಾಟೀಲ್ ಅವರು ಹಿನ್ನೀರ ಭೂ ಸಂತ್ರಸ್ತರಿಗೆ ಪರಿಹಾರ ಮರೀಚಿಕೆ ವಿಚಾರವಾಗಿ ಪತ್ರಿಕೆಯಲ್ಲಿ ಬಂದಿರುವ ವರದಿ ಬಗ್ಗೆ ಕೇಳಿದಾಗ, ʼಸದಸ್ಯರು ಪ್ರಸ್ತಾಪಿಸಿರುವಂತೆ ರೈತರಿಗೆ ಭೂ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳಿಂದ ಕಡತ ತರಿಸಿಕೊಂಡು ಕೂಡಲೇ ಪರಿಹಾರ ಸಿಗುವಂತೆ ಮಾಡಲಾಗುವುದುʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.