ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಯಾವುದೇ ಹಲ್ಲೆ ಮಾಡಿಲ್ಲ ಎಂದ ಚನ್ನರಾಜ ಹಟ್ಟಿಹೊಳಿ

MLC Channaraj Hattiholi: ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ತಾವು ಯಾವುದೇ ರೀತಿಯ ಹಲ್ಲೆ ಮಾಡಿಲ್ಲ. ತಮ್ಮ ಮೇಲಿನ ಆರೋಪ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ತಮ್ಮ ರಾಜಕೀಯ ಜೀವನದಲ್ಲಿ ಇದುವರೆಗೆ ಯಾವುದೇ ಅಧಿಕಾರಿ ಅಥವಾ ಸಾಮಾನ್ಯ ವ್ಯಕ್ತಿಗೆ ಬೈದಿಲ್ಲ. ಅಸಂವಿಧಾನಿಕ ಪದಗಳನ್ನು ಬಳಸಿಲ್ಲ ಎಂದು ಅವರು ಹೇಳಿದ್ದಾರೆ.

ಬೆಳಗಾವಿ, ಸೆ.25: ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ (Channaraj Hattiholi) ತಳ್ಳಿಹಾಕಿದ್ದು, ತಾವು ಯಾವುದೇ ರೀತಿಯ ಹಲ್ಲೆ ಮಾಡಿಲ್ಲ. ತಮ್ಮ ಮೇಲಿನ ಆರೋಪ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯ ಕುವೆಂಪು ನಗರದ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರೈತರು ಹಾಗೂ ಕ್ರಷರ್ ಮಾಲೀಕರು ತಮ್ಮನ್ನು ಭೇಟಿ ಮಾಡಿ ವಿದ್ಯುತ್ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದರು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಹಾಗೂ ಹಲವು ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗಿರುವ ಬಗ್ಗೆ ಸಮಸ್ಯೆಗಳನ್ನು ತಿಳಿಸಿದ್ದರು. ಕೆಲ ದಿನಗಳ ಹಿಂದೆ ಬಾಳೆಕುಂದರಗಿ ಬಳಿ ರೈತರು ವಿದ್ಯುತ್ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹಾಗೂ ಕ್ರಷರ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ವಿಚಾರದ ಬಗ್ಗೆ ಚರ್ಚಿಸಲು ಹೆಸ್ಕಾಂ ಸಿಬ್ಬಂದಿಯನ್ನು ಕರೆಸಲಾಗಿತ್ತು ಎಂದು ಅವರು ತಿಳಿಸಿದರು.

“ನೋಟಿಸ್ ನೀಡಿ, ನಿಯಮಾನುಸಾರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಹೆಸ್ಕಾಂ ಸಿಬ್ಬಂದಿಗೆ ಸೂಚಿಸಿದ್ದೇನೆ. ಸಿಬ್ಬಂದಿಗೆ ಬುದ್ಧಿವಾದ ಹೇಳಿದ್ದು ನಿಜ. ಆದರೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ” ಎಂದು ಚನ್ನರಾಜ ಹಟ್ಟಿಹೊಳಿ ಸ್ಪಷ್ಟಪಡಿಸಿದರು.

ತಮ್ಮ ರಾಜಕೀಯ ಜೀವನದಲ್ಲಿ ಇದುವರೆಗೆ ಯಾವುದೇ ಅಧಿಕಾರಿ ಅಥವಾ ಸಾಮಾನ್ಯ ವ್ಯಕ್ತಿಗೆ ಬೈದಿಲ್ಲ. ಅಸಂವಿಧಾನಿಕ ಪದಗಳನ್ನು ಬಳಸಿಲ್ಲ ಎಂದು ಅವರು ಹೇಳಿದರು.

“ಸುಮಾರು 50ರಿಂದ 60 ಜನರ ಸಮ್ಮುಖದಲ್ಲೇ ಮಾತುಕತೆ ನಡೆದಿದೆ. ಸಮಸ್ಯೆ ಕುರಿತು ಸಿಬ್ಬಂದಿಗೆ ಬುದ್ಧಿವಾದ ಹೇಳುವುದು ತಪ್ಪೇ? ನನ್ನ ಮಾತಿನಿಂದ ಸಿಬ್ಬಂದಿಯ ಮನಸ್ಸಿಗೆ ನೋವಾಗಿದ್ದರೆ, ನನ್ನೊಂದಿಗೆ ಮಾತನಾಡಬಹುದಿತ್ತು. ಆದರೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಮಾಡಿರುವುದು ಶುದ್ಧ ತಪ್ಪು” ಎಂದು ಅವರು ತಿಳಿಸಿದರು.

ತಮ್ಮನ್ನು ಭೇಟಿ ಮಾಡಲು ಬಂದವರ ಸಮಸ್ಯೆ ಕುರಿತು ಚರ್ಚಿಸುವ ಉದ್ದೇಶದಿಂದಲೇ ಹೆಸ್ಕಾಂ ಸಿಬ್ಬಂದಿಯನ್ನು ಕರೆಸಲಾಗಿತ್ತು. ಸುಮಾರು ಐದು ನಿಮಿಷ ಮಾತ್ರ ಅವರೊಂದಿಗೆ ಮಾತನಾಡಿದ್ದು, ಯಾವುದೇ ರೀತಿಯ ಹಲ್ಲೆ ನಡೆದಿಲ್ಲ ಎಂದು ಅವರು ಪುನರುಚ್ಚರಿಸಿದರು.‌

ಹೆಸ್ಕಾಂ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ರಾ ಎಂಎಲ್‌ಸಿ?; ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಗಂಭೀರ ಆರೋಪ

“ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸೂಕ್ತ ರೀತಿಯಲ್ಲಿ ನೋಟಿಸ್ ನೀಡಿ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಮಾತ್ರ ಸೂಚಿಸಿದ್ದೇನೆ” ಎಂದರು. ಈ ಕುರಿತು ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಕುಳಿತು ಮಾತನಾಡಲು ತಾವು ಸಿದ್ಧರಿರುವುದಾಗಿ ಚನ್ನರಾಜ ಹಟ್ಟಿಹೊಳಿ ತಿಳಿಸಿದರು. ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿ ವಾಸ್ತವಾಂಶ ತಿಳಿದುಕೊಳ್ಳುವುದಾಗಿ ಅವರು ಹೇಳಿದರು.