ಬೆಂಗಳೂರು, ಅ.1: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಹಾಗೂ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದ (Election Commission) ಮೇಲೆ ರಾಜಕೀಯ ಒತ್ತಡ ಹೇರುವುದು ಕಾನೂನುಬಾಹಿರ. ಫಾರ್ಮ್ 7 ಬಗ್ಗೆ ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ (R Ashok) ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಯಾವ ಅಧಿಕಾರವಿದೆ? ನೆಹರು, ಇಂದಿರಾಗಾಂಧಿ ಕಾಲದಲ್ಲಿ ಮಾಡಿದಂತೆ ಈಗ ಚುನಾವಣಾಧಿಕಾರಿಯ ಮೇಲೆ ನಿಯಂತ್ರಣ ತರಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರು ಚುನಾವಣಾಧಿಕಾರಿಗಳ ಮೇಲೆ ರಾಜಕೀಯ ಒತ್ತಡ ತಂದಿದ್ದಾರೆ. ಸಮಸ್ಯೆ ಇದ್ದರೆ ಕೋರ್ಟ್ ಮೊರೆ ಹೋದರೆ, ದಾಖಲೆಗಳು ಸರಿ ಇದ್ದರೆ ಚುನಾವಣಾ ಆಯೋಗಕ್ಕೆ ಕೋರ್ಟ್ ಚೀಮಾರಿ ಹಾಕುತ್ತದೆ. ಮತದಾನದ ಹಕ್ಕು ರಕ್ಷಿಸುವ ಜತೆಗೆ ಬಾಂಗ್ಲಾ, ಪಾಕ್ ಪ್ರಜೆಗಳನ್ನು ವಾಪಸ್ ಕಳುಹಿಸಬೇಕು. ಈ ಬಗ್ಗೆಯೂ ಕಾಂಗ್ರೆಸ್ ಆಲೋಚಿಸಬೇಕು. ಯಾವುದೇ ಧರ್ಮಕ್ಕೆ ಸೇರಿದ್ದರೂ ಅರ್ಹ ಮತದಾರರ ಹೆಸರು ಪಟ್ಟಿಯಿಂದ ರದ್ದಾಗಬಾರದೆಂದು ಬಿಜೆಪಿ ಕೂಡ ಒತ್ತಾಯಿಸುತ್ತದೆ. ನಾಲ್ಕೈದು ಕಡೆ ಮತದಾನ ಮಾಡುವವರ ರಕ್ಷಣೆಗೆ ಕಾಂಗ್ರೆಸ್ ನಿಂತಿದೆ. ಇದು ಸರಿಯಲ್ಲ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಜ್ಜಯ್ಯನವರ ಮೇಲೆ ಪ್ರಮಾಣ ತೆಗೆದುಕೊಂಡು ಮುಖ್ಯಮಂತ್ರಿಯಾದ ನಂತರ ಕೇವಲ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಬಾರದು. ಸರ್ಕಾರದ ಕೆಲಸ ಮಾಡುವುದು ಬಿಟ್ಟು ಪ್ರತಿಭಟನೆಗೆ ಕೂತಿದ್ದಾರೆ. ಬಿಜೆಪಿಯಿಂದ 15 ಲಕ್ಷ ಜನರ ಮತದಾನದ ಹಕ್ಕು ರದ್ದು ಮಾಡಿಸಲಾಗಿದೆ ಎಂದು ಸುಳ್ಳು ಆರೋಪ ಮಾಡಲಾಗಿದೆ. ಫಾರ್ಮ್ 7 ನಡಿ 25,000 ಅರ್ಜಿಗಳು ಸಲ್ಲಿಕೆಯಾಗಿದೆ ಎಂದ ಮೇಲೆ 15 ಲಕ್ಷ ಹೆಸರು ರದ್ದಾಗಲು ಹೇಗೆ ಸಾಧ್ಯ? ದೇಶದಲ್ಲಿ 2 ಕೋಟಿ ಬಾಂಗ್ಲಾ ನಿವಾಸಿಗಳಿದ್ದಾರೆ. ಅವರಿಗೆ ಮತದಾನದ ಹಕ್ಕು ಕೊಡಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆದಾಗ ಮರಳಿ ಬಾಂಗ್ಲಾ ನಿವಾಸಿಗಳು ಅವರ ದೇಶಕ್ಕೆ ಹೋಗಿದ್ದರು. ಮರಳಿ ಬರುತ್ತೇವೆ ಎಂದು ಕೂಡ ಅವರು ಹೇಳಿದ ವೀಡಿಯೋಗಳಿವೆ. ಇಂತಹವರ ಪರವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಇತರರು ಧರಣಿ ಮಾಡುತ್ತಿರುವುದೇ ಅಕ್ರಮ. ಪೊಲೀಸರು ಅವರನ್ನು ಮೊದಲು ಬಂಧಿಸಬೇಕು. ನಾವು ಧರಣಿ ಮಾಡಿದ ಕೂಡಲೇ ಬಂಧನ ಮಾಡುತ್ತಾರೆ. ಕಾನೂನನ್ನು ಕೈಗೆ ತೆಗೆದುಕೊಂಡ ಈ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಫಾರ್ಮ್ 7 ಪಡೆದ ಚುನಾವಣಾ ಆಯೋಗ ಅದನ್ನು ಪರಿಶೀಲಿಸುತ್ತಿದೆ. ನನ್ನ ಮಾಹಿತಿ ಪ್ರಕಾರ ಆ ಅರ್ಜಿಯಲ್ಲಿದ್ದಂತೆ ಯಾರ ಹೆಸರನ್ನೂ ರದ್ದು ಮಾಡಿಲ್ಲ. ಬೆಳಗಾವಿಯ ವೀರಭದ್ರನಗರದಲ್ಲಿ ಸಲ್ಲಿಸಿದ ಫಾರ್ಮ್ 7 ಸಾಮೂಹಿಕವಾಗಿ ಸಲ್ಲಿಸಲಾಗಿದೆ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿದೆ. ಈಗ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹಾಗೂ ರೇಷನ್ ಕಾರ್ಡ್‌ಗಳ ಮರು ಪರಿಶೀಲನೆ ಮಾಡುತ್ತಿದೆ. ವಿಶೇಷಚೇತನರ ಪಿಂಚಣಿಯನ್ನೂ ಪರಿಶೀಲಿಸಲಾಗುತ್ತಿದೆ. ಎಲ್ಲ ವಿವರಗಳನ್ನು ಪಡೆಯಲಾಗುತ್ತಿದೆ. ಆದರೆ ಚುನಾವಣಾ ಆಯೋಗ ಮಾತ್ರ ಸ್ವತಂತ್ರವಾಗಿ ಕೆಲಸ ಮಾಡಬಾರದು. ಯಾವ ಮುಖ ಇಟ್ಟುಕೊಂಡು ಧರಣಿ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಪೊಲೀಸರು ಎಲ್ಲಿದ್ದಾರೆ?
ಗಣೇಶ ಮೆರವಣಿಗೆ ವೇಳೆ ಗ್ರಹಚಾರ ಬಿಡಿಸುತ್ತೇನೆಂದ ಪೊಲೀಸರು ಈಗ ಎಲ್ಲಿದ್ದಾರೆ? ಕಾಂಗ್ರೆಸ್ ನಾಯಕರೇನು ಬೀಡಾಡಿ ದನಗಳಾ? ಇಷ್ಟ ಬಂದಂತೆ ಪ್ರತಿಭಟನೆ ಮಾಡಿದರೂ ಪೊಲೀಸರು ಅವರ ವಿರುದ್ಧ ಕ್ರಮ ವಹಿಸುತ್ತಿಲ್ಲ. ಬರಗಾಲ ಬಂದು ರೈತರು ದಂಗೆ ಏಳುವ ಸ್ಥಿತಿ ಇದೆ. ವಿಷಯಾಂತರ ಮಾಡಲು ಈ ಕಪಟ ನಾಟಕ ಮಾಡುತ್ತಿದ್ದಾರೆ. ಹೀಗಾದರೆ ಮುಂದೆ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಮಾಡುವವರನ್ನು ತಡೆಯುವ ಅಧಿಕಾರ ಕೂಡ ಪೊಲೀಸರಿಗೆ ಇರುವುದಿಲ್ಲ ಎಂದರು.
ಫಾರ್ಮ್ 7 ಮುದ್ರಿಸುವುದು ತಪ್ಪಾದರೆ ಅದರ ವಿರುದ್ಧ ಕಾಂಗ್ರೆಸ್ ಕೋರ್ಟ್ ಮೊರೆ ಹೋಗಬೇಕು. ಅದನ್ನು ಬಿಟ್ಟು ಈ ರೀತಿ ಬಿಜೆಪಿ ವಿರುದ್ಧ ಆರೋಪ ಮಾಡಬಾರದು. ದೂರು ನೀಡದಿದ್ದರೂ ಚುನಾವಣಾ ಆಯೋಗ ಏಕೆ ಉತ್ತರ ನೀಡಬೇಕು? ಪಾರದರ್ಶಕತೆ ಬೇಕೆಂದರೆ ಅದಕ್ಕೂ ಎಸ್‌ಐಟಿ ರಚಿಸಲಿ. ಎಫ್‌ಐಆರ್ ಮಾಡಲಿ ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಲು ಇವರು ಯಾರು? ಚುನಾವಣಾ ಆಯೋಗ ಏನು ಮಾಡಬೇಕೆಂದು ಅಧಿಕಾರಿಗಳೇ ತೀರ್ಮಾನ ಮಾಡುತ್ತಾರೆ. ಸಿಎಂ ಡಿ.ಕೆ. ಶಿವಕುಮಾರ್ ಏಕೆ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಪಕ್ಷದಿಂದ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವುದಿಲ್ಲ
ಬಿಜೆಪಿ ಒಂದು ರಾಜಕೀಯ ಪಕ್ಷ. ಈ ಪಕ್ಷದಿಂದ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವುದಿಲ್ಲ. ಒಂದು ಕಾಲದಲ್ಲಿ ಇಂದಿರಾಗಾಂಧಿ ಚುನಾವಣಾ ಅಕ್ರಮ ಮಾಡಿದ್ದರು. ಇಂತಹ ಕಾಂಗ್ರೆಸ್‌ನಿಂದ ನಾವು ಪಾಠ ಕಲಿಯಬೇಕಿಲ್ಲ. ಫಾರ್ಮ್ 7 ಅನ್ನು ಬಿಎಲ್‌ಒ 2 ಮಾತ್ರ ಕೊಡಬೇಕೆಂಬ ನಿಯಮವಿಲ್ಲ. ಕ್ಷೇತ್ರದ ಮತದಾರರು ಕೂಡ ಕೊಡಬಹುದು. ಒಂದು ಕೋಟಿ ಮತ ರದ್ದಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ನಮಗೆ ಮತ ಬೇಡ ಎಂದು ಎಷ್ಟು ಜನರು ಆಂಧ್ರ, ತಮಿಳುನಾಡಿಗೆ ಹೋಗಿದ್ದಾರೆ ಎಂದು ಇವರು ತಿಳಿಸಲಿ. ನನ್ನದೇ ಕ್ಷೇತ್ರದಲ್ಲಿ ಒಂದು ಕಡೆ 2,000 ಮತದಾರರಿದ್ದು, ಅದರಲ್ಲಿ 800 ಮತದಾರರು ಮಾತ್ರ ಉಳಿದುಕೊಂಡಿದ್ದಾರೆ. ಉಳಿದವರು ತಮ್ಮ ಊರಿಗೆ ಹೋಗಿದ್ದಾರೆ. ಇಂತಹ ಬದಲಾವಣೆಗಳ ಬಗ್ಗೆ ಆರೋಪ ಮಾಡಬಾರದು. ಮತಪಟ್ಟಿಯಿಂದ ಹೆಸರು ರದ್ದುಗೊಂಡರೆ ಅದಕ್ಕೆ ಸೂಕ್ತ ದಾಖಲೆ ನೀಡಿ ಮರು ಸೇರ್ಪಡೆ ಮಾಡಬಹುದು ಎಂದರು.
ಫಾರ್ಮ್ 7 ನೀಡಿ, ಅದರಲ್ಲಿ ಮತದಾರರ ಗುರುತಿನ ಚೀಟಿ ಎರಡು ಮೂರು ರಾಜ್ಯಗಳಲ್ಲಿದ್ದರೆ ಅದರ ವಿರುದ್ಧ ಚುನಾವಣಾ ಆಯೋಗ ಕ್ರಮ ವಹಿಸಬಹುದು. ಒಂದೇ ಕಡೆ ಮತದಾನದ ಹಕ್ಕು ಇರುವಂತೆ ಮಾಡಬಹುದು ಎಂದರು.
ಸಕ್ಕರೆ ದಾಸ್ತಾನು 1,000 ಕ್ವಿಂಟಲ್ ಮೀರುವಂತಿಲ್ಲ; ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರ ಕ್ರಮ
ಈ ಸರ್ಕಾರ ಸಂಪೂರ್ಣ ಮಾನ ಕಳೆದುಕೊಂಡಿದೆ
ರೈತರು ಸಾಮಾಜಿಕ ಜಾಲತಾಣದಲ್ಲಿ 2,500 ರೂ. ಗೆ 100 ರೂ. ಸೇರಿಸಿ ಚೆಕ್ ಚಿತ್ರ ಪೋಸ್ಟ್ ಮಾಡುತ್ತಿದ್ದಾರೆ. ಈ ಸರ್ಕಾರ ಸಂಪೂರ್ಣ ಮಾನ ಕಳೆದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಕಿಡಿಕಾರಿದರು.