ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ambedkar Jayanti 2026: ಸಂವಿಧಾನವೇ ನಮ್ಮ ದೇಶದ ಭಗವದ್ಗೀತೆ, ಕುರಾನ್‌, ಬೈಬಲ್‌: ಡಿ.ಕೆ. ಶಿವಕುಮಾರ್‌

DK Shivakumar: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಕೊಟ್ಟಿರುವ ಸಂವಿಧಾನವೇ ನಮ್ಮ ಈ ಪ್ರಜಾಪ್ರಭುತ್ವ ದೇಶಕ್ಕೆ ನೀಡಿರುವ ಬೆಳಕು. ಅಂಬೇಡ್ಕರ್‌ ಅವರು ಅಸಮಾನತೆ ನಿವಾರಣೆಗೆ, ಭೇದ ಭಾವ ಹೋಗಲಾಡಿಸಲು ಶ್ರಮಪಟ್ಟವರು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಪುಷ್ಪಾರ್ಚನೆ.

ಬೆಂಗಳೂರು, ಏ.14: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಮುಂದಾಳತ್ವದಲ್ಲಿ ರಚನೆಯಾದ ಸಂವಿಧಾನವೇ ನಮ್ಮ ದೇಶದ ಭಗವದ್ಗೀತೆ, ಕುರಾನ್‌, ಬೈಬಲ್‌ ಎಂದು ನಾವು ಪೂಜಿಸಿ ಬದುಕುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದರು. ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ (Ambedkar Jayanti 2026) ಅವರು ಮಾತನಾಡಿದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಕೊಟ್ಟಿರುವ ಸಂವಿಧಾನವೇ ನಮ್ಮ ಈ ಪ್ರಜಾಪ್ರಭುತ್ವ ದೇಶಕ್ಕೆ ನೀಡಿರುವ ಬೆಳಕು. ಅಂಬೇಡ್ಕರ್‌ ಅವರು ಅಸಮಾನತೆ ನಿವಾರಣೆಗೆ, ಭೇದ ಭಾವ ಹೋಗಲಾಡಿಸಲು ಶ್ರಮಪಟ್ಟವರು ಎಂದರು. ಅಂಬೇಡ್ಕರ್‌ ಅವರು ತಮ್ಮದೇ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್‌ ಪಕ್ಷ ಭಿನ್ನ ರಾಜಕೀಯ ನಿಲುವುಗಳನ್ನು ಹೊಂದಿದ್ದರೂ ಅಂಬೇಡ್ಕರ್‌ ಅವರಿಗೆ ಮಹೋನ್ನತ ಜವಾಬ್ದಾರಿಗಳನ್ನು ನೀಡಿತ್ತು. ಈ ದೇಶವನ್ನು ಮುನ್ನಡೆಸಲು ವಿದ್ಯಾವಂತರು, ಬುದ್ಧಿವಂತರು ಇರಬೇಕು ಎಂದು ಜವಾಹರ್‌ ಲಾಲ್‌ ನೆಹರು ಅವರು ತಮ್ಮ ಸಂಪುಟದಲ್ಲಿ ಅಂಬೇಡ್ಕರ್‌ ಅವರಿಗೆ ಸ್ಥಾನ ನೀಡಿದರು ಎಂದು ಹೇಳಿದರು.

ಸಂಘಟಿತರಾಗಿ, ವಿದ್ಯಾವಂತರಾಗಿ, ಹೋರಾಟ ಮಾಡಿ ಎಂದು ಮಾತ್ರ ಅಂಬೇಡ್ಕರ್‌ ಅವರು ಹೇಳಲಿಲ್ಲ. ಪ್ರಜಾಪ್ರಭುತ್ವ ಎಂದರೆ ಸರ್ವ ಜನಾಂಗಗಳು ಒಗ್ಗೂಡಿ ಮುನ್ನಡೆಸುವ ಸಾಧನ ಎಂದಿದ್ದರು. ಎಲ್ಲಾ ಧರ್ಮ ಜಾತಿಗಳು ಸಂವಿಧಾನದ ಅಡಿಯಲ್ಲಿ ಬಂದು ಇಡೀ ದೇಶವೇ ಇದನ್ನು ಒಪ್ಪುವಂತೆ ಮಾಡಿದವರು ಎಂದರು.

ತಾನು ಅಭಿವೃದ್ಧಿಯಾಗುವುದರ ಜತೆಗೆ ಇತರರನ್ನು ಬೆಳೆಸಬೇಕು ಎಂಬುದು ಅಂಬೇಡ್ಕರ್‌ ಅವರ ಆಶಯವಾಗಿತ್ತು. ಸಂವಿಧಾನದ ಕಾರಣಕ್ಕೆ ಅನೇಕ ಶೋಷಿತ ವರ್ಗಗಳು ಮೀಸಲಾತಿ ಪಡೆದಿವೆ. ಇದರಿಂದ ನಾಯಕರು ಬೆಳೆದಿದ್ದಾರೆ. ಅವರೂ ಸಹ ಮೀಸಲಾತಿ ಪಡೆದಿದ್ದಾರೆ. ಆದರೆ ಪಡೆದ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಸಮುದಾಯದ ನೊಂದ ಎಷ್ಟು ಜನರನ್ನು ಮೇಲಕ್ಕೆ ಎತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದರು. ನಮ್ಮನ್ನು ನಂಬಿದ ಸಮಾಜವನ್ನು ಎಷ್ಟು ಮುಂದುವರಿಯುವಂತೆ ಮಾಡಿದ್ದೇವೆ. ಎಷ್ಟು ಜನ ಸುಖಿಗಳಾಗಿದ್ದಾರೆ, ಶಾಂತಿಯಿಂದ ಬದುಕುತ್ತಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಅದಕ್ಕೆ ಇತಿಹಾಸವನ್ನು ಮರೆತವನು ಎಂದಿಗೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕೆಳಗೆ ಕುಳಿತಿರುವವನಿಗೆ, ಹೊರಗೆ, ಒಳಗೆ ಇರುವವನಿಗೂ ಒಂದಲ್ಲ ಒಂದು ದಿನ ಅವಕಾಶವಿದೆ

ವೇದಿಕೆಯಲ್ಲಿ ಕುಳಿತುಕೊಂಡವರೆಲ್ಲಾ ನಾಯಕರು ಎಂದು ಭಾವಿಸಬೇಡಿ. ವೇದಿಕೆ ಕೆಳಗೆ ಇರುವವರು ಇದ್ದರೆ ಮಾತ್ರ ವೇದಿಕೆ ಮೇಲಿರುವವರು ನಾಯಕರಾಗಲು ಸಾಧ್ಯ. ಜತೆಗೆ ನಾನು ನಾಯಕರು, ಕಾರ್ಯಕರ್ತರು ಎಂದು ವಿಭಾಗಿಸಿ ಯಾರನ್ನೂ ನೋಡುವುದಿಲ್ಲ. ನೀವು ಕಡಿಮೆ ಎಂದು ಯಾರೂ ಭಾವಿಸಬೇಡಿ. ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ, ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ. ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ ತಾಣ ನಿನಗಿಹುದಿಲ್ಲಿ ಮಂಕುತಿಮ್ಮ ಎಂದು ಡಿವಿಜಿ ಹೇಳಿದ್ದಾರೆ. ಎಂದರೆ ಹುಲ್ಲುಕಡ್ಡಿಗೂ ಮಹತ್ವವಿದೆ. ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ. ಕೆಳಗೆ ಕುಳಿತಿರುವವನಿಗೆ, ಹೊರಗೆ ಕಾಯುತ್ತಾ ಇರುವವನಿಗೂ, ಒಳಗೆ ಇರುವವನಿಗೂ ಒಂದಲ್ಲ ಒಂದು ದಿನ ಅವಕಾಶವಿದೆ. ಯಾವ ಕಾರ್ಯಕರ್ತರನ್ನೂ ಕೀಳಾಗಿ ಕಾಣುವುದಕ್ಕೆ ಆಸ್ಪದವಿಲ್ಲ. ಅದಕ್ಕೆ ಎಲ್ಲಾ ವರ್ಗದವರಿಗೂ ಮಾತನಾಡಲು ಅವಕಾಶ ನೀಡಲಾಯಿತು ಎಂದು ಅವರು ತಿಳಿಸಿದರು.

ಒಳಮೀಸಲಾತಿ ವಿಚಾರದಲ್ಲಿ ಬಿಜೆಪಿ ದಾರಿ ತಪ್ಪಿಸುತ್ತಿದೆ

ಒಳಮೀಸಲಾತಿ ವಿಚಾರದಲ್ಲಿ ಯಾವ ಬಿಜೆಪಿ ಸರ್ಕಾರವೂ ಮಾಡದ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡಿದೆ. ಈ ವಿಚಾರವಾಗಿ ಬಿಜೆಪಿ ಬೇಕಂತಲೇ ದಾರಿ ತಪ್ಪಿಸುತ್ತಿದೆ. ಪಕ್ಷ ಅಧಿಕಾರಕ್ಕೆ ಬರುವ ಮುಂಚಿತವಾಗಿ ಘೋಷಣೆ ಮಾಡಿದಂತೆ 6-6-5 ಅನುಪಾತದ ಅಡಿ ಸೌಲಭ್ಯ ನೀಡಲಾಗಿದೆ. ಆದರೆ ನ್ಯಾಯಾಲಯ ಶೇ. 15 ರ ಒಳಗೆ ನೀಡಿ ಎಂದು ಹೇಳಿದೆ. ಎಡ, ಬಲ ಸಮುದಾಯಗಳು ಸೇರಿದಂತೆ ಎಲ್ಲಾ ಶೋಷಿತ ವರ್ಗಗಳು ಈ ಹಸ್ತದ ಒಳಗೆ ಬರುತ್ತೀರಿ. ಈ ಹಸ್ತವೇ ರಕ್ಷಣೆ ನೀಡೋಕೆ ಸಾಧ್ಯ ಎಂದರು.

ಮೀಸಲಾತಿ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ. ಆತ್ಮಗೌರವದಿಂದ ನೀವು ಬಾಳಬೇಕು ಎಂಬುದು ಕಾಂಗ್ರೆಸ್‌ ಪಕ್ಷದ ಆಶಯ. ಚುನಾವಣೆ ನಂತರ ಇದರ ಬಗ್ಗೆ ಪಕ್ಷದ ಒಳಗೆ ತೀರ್ಮಾನ ಮಾಡಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಪರಮೇಶ್ವರ್‌ ಅವರ ನೇತೃತ್ವದಲ್ಲಿ ಚಿತ್ರದುರ್ಗ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯದಂತೆ ತೀರ್ಮಾನ ಮಾಡಲಾಗುವುದು. ಪಕ್ಷದ ಅಧ್ಯಕ್ಷನಾದ ನನಗೆ ಎಲ್ಲರೂ ಒಂದೇ ಎಂದು ಹೇಳಿದರು.

ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ದಿಗೆ 80 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ಈ ಹಿಂದೆ ನೀಡುತ್ತಾ ಇತ್ತು. ಆಗ ಬೆಳಗಾವಿ ಅಧಿವೇಶನದಲ್ಲಿ ಅಂದು ಸಚಿವರಾಗಿದ್ದ ಆಂಜನೇಯ ಅವರು ಎಸ್‌ಇಎಸ್‌ಪಿ, ಟಿಎಸ್‌ಪಿ ಕಾಯ್ದೆಯ ಅಡಿ 29 ಸಾವಿರ ಕೋಟಿ ನೀಡಿದ್ದು ಕರ್ನಾಟಕ ಕಾಂಗ್ರೆಸ್‌ ಸರ್ಕಾರ. ಆದರೂ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಶೋಷಿತ ಜನಾಂಗಗಳ ಪರವಾಗಿ ಚಿಂತನೆ ಮಾಡುವ ಏಕೈಕ ಪಕ್ಷ ಕಾಂಗ್ರೆಸ್‌ ಎಂದರು.

Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ವಜಾ; ಡಿಸಿಎಂ ಡಿಕೆಶಿ ಹೇಳಿದ್ದೇನು?

ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿಯನ್ನು ನೀಡಿದ್ದು ಕಾಂಗ್ರೆಸ್‌ ಪಕ್ಷ. ಜಿಬಿಎನಲ್ಲಿ ಇದನ್ನು ಜಾರಿಮಾಡಲಾಗಿದೆ. ಸೋನಿಯಾ ಗಾಂಧಿ ಅವರು ಅಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಮಂಡಿಸಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿ ನಾಯಕರಾಗಿ ಹೊರಹೊಮ್ಮಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.