Amit Shah: ಆಡ್ವಾಣಿ ದಾಖಲೆ ಮುರಿದ ಅಮಿತ್ ಶಾ; ಗೃಹ ಸಚಿವರಾಗಿ ಸುದೀರ್ಘ ಸೇವೆ- ಚಾಣಕ್ಯನ ಆ 3 ಮಹತ್ವದ ನಿರ್ಧಾರಗಳು ಯಾವುವು?
India’s Longest-Serving Home Minister: ಕೇಂದ್ರ ಗೃಹ ಸಚಿವರಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅಮಿತ್ ಶಾ ಅವರು 2,258 ದಿನಗಳನ್ನು ಪೂರೈಸಿದ್ದಾರೆ. ಆ ಮೂಲಕ ಅವರು ಗೃಹ ಸಚಿವ ಹುದ್ದೆಯಲ್ಲಿ 2,256 ದಿನಗಳನ್ನು ಪೂರೈಸಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಹಿಂದಿಕ್ಕಿದ್ದಾರೆ.


ನವದೆಹಲಿ: ಇತ್ತೀಚೆಗಷ್ಟೇ ನರೇಂದ್ರ ಮೋದಿ ಅತೀ ಸುದೀರ್ಘವಾಗಿ ಪ್ರಧಾನಿಯಾಗಿ ಮುಂದುವರಿಯುವ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ರೆಕಾರ್ಡ್‌ಯನ್ನು ಮುರಿದಿದ್ದರು. ಇದೀಗ ಇದರ ಬೆನ್ನಲ್ಲೇ ಗೃಹಸಚಿವ ಅಮಿತ್ ಶಾ (Amit Shah)ಕೂಡ ಅತೀ ಹೆಚ್ಚು ವರ್ಷಗಳ ಕಾಲ ಗೃಹಸಚಿವರಾಗಿ ಮುಂದುವರಿಯುವ ಮೂಲಕ ದಾಖಲೆ ಬರೆದಿದ್ದಾರೆ. ಕೇಂದ್ರ ಗೃಹ ಸಚಿವರಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅಮಿತ್ ಶಾ ಅವರು 2,258 ದಿನಗಳನ್ನು ಪೂರೈಸಿದ್ದಾರೆ. ಆ ಮೂಲಕ ಅವರು ಗೃಹ ಸಚಿವ ಹುದ್ದೆಯಲ್ಲಿ 2,256 ದಿನಗಳನ್ನು ಪೂರೈಸಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಹಿಂದಿಕ್ಕಿದ್ದಾರೆ.
ಆರು ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿರುವ ಅಮಿತ್ ಶಾ ಅವರು 370 ನೇ ವಿಧಿಯನ್ನು ರದ್ದುಗೊಳಿಸುವುದರಿಂದ ಹಿಡಿದು ಕ್ರಿಮಿನಲ್ ಕಾನೂನುಗಳನ್ನು ಸಂಪೂರ್ಣವಾಗಿ ಪರಿಷ್ಕರಿಸುವವರೆಗೆ, ಶಾ ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ನಂತರ ಅಮಿತ್ ಶಾ ಅವರನ್ನೇ ಅತ್ಯಂತ ಪ್ರಭಾವಶಾಲಿ ರಾಜಕೀಯ ವ್ಯಕ್ತಿ ಕರೆಯಲಾಗುತ್ತದೆ. ಇನ್ನು ಮಂಗಳವಾರ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ, ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಗೃಹ ಸಚಿವರಾದ ಶಾ ಅವರನ್ನು ಅಭಿನಂದಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Sudha Ramakrishnan: ಬೆಳಗ್ಗೆ ವಾಕಿಂಗ್ ಸಮಯದಲ್ಲಿ ಕಾಂಗ್ರೆಸ್ ಸಂಸದೆಯ ಸರ ಎಗರಿಸಿದ ಕಳ್ಳ; ಅಮಿತ್ ಶಾಗೆ ಪತ್ರ
ಗೃಹ ಸಚಿವರಾಗಿ ಶಾ ತೆಗೆದುಕೊಂಡ 3 ಮಹತ್ವದ ನಿರ್ಧಾರಗಳು
ಅಮಿತ್ ಶಾ ಅವರು ಪ್ರಧಾನಿ ಮೋದಿ ಅವರ ಸರ್ಕಾರದ ಪ್ರಮುಖ ಶಕ್ತಿಯಾಗಿದ್ದು, ದೇಶಾದ್ಯಂತ ಆಂತರಿಕ ಭದ್ರತೆ ಮತ್ತು ಶಾಂತಿಯನ್ನು ಕಾಪಾಡುವಲ್ಲಿ ಗೃಹ ಸಚಿವಾಲಯಕ್ಕೆ ಹೊಸ ನಿರ್ದೇಶನಗಳನ್ನು ನೀಡಿದ್ದಾರೆ. ಅವರ ಅಧಿಕಾರಾವಧಿಯು ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಅವುಗಳು ಯಾವುವು ಎಂದು ನೋಡುವುದಾದರೆ.
ಆರ್ಟಿಕಲ್ 370ರದ್ದು: ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯ ರದ್ದತಿ ಶಾ ಅಧಿಕಾರಾವಧಿಯಲ್ಲಿ ತೆಗದುಕೊಂಡ ಮಹತ್ವದ ನಿರ್ಧಾರವಾಗಿತ್ತು.
ಹೊಸ ಕ್ರಿಮಿನಲ್ ಕೋಡ್: ವಸಾಹತುಶಾಹಿ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಕ್ರಮವಾಗಿ ಬದಲಾಯಿಸಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ - ಎಂಬ ಮೂರು ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತಂದವರು ಅಮಿತ್ ಶಾ. ಹೊಸ ಕಾನೂನುಗಳು ಜುಲೈ 1, 2024 ರಂದು ಜಾರಿಗೆ ಬಂದವು.
CAA ಕಾಯ್ದೆ: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಹಿಂದೂ, ಸಿಖ್, ಬೌದ್ಧ, ಜೈನ, ಕ್ರಿಶ್ಚಿಯನ್ ಮತ್ತು ಪಾರ್ಸಿ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶವನ್ನು ಹೊಂದಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (CAA)ಯನ್ನು ಶಾ ಅವರ ಅಧಿಕಾರಾವಧಿಯಲ್ಲಿ ಸಂಸತ್ ಜಾರಿಗೆ ತಂದಿತು.
ಇವುಗಳಲ್ಲದೆ, ಭಾರತದಲ್ಲಿ ನಕ್ಸಲಿಸಂನ ಪಿಡುಗನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಮಾರ್ಚ್ 31, 2026 ರ ಗಡುವನ್ನು ನಿಗದಿಪಡಿಸಿದ್ದಾರೆ. ಮಾತ್ರವಲ್ಲದೇ ದೇಶದ ಈಶಾನ್ಯ ಭಾಗದಲ್ಲಿ ವಿವಿಧ ಬಂಡುಕೋರ ಗುಂಪುಗಳೊಂದಿಗೆ 12 ಶಾಂತಿ ಒಪ್ಪಂದ ಶಾ ಅವರ ಕಾರ್ಯವೈಖರಿಗೆ ಉತ್ತಮ ಉದಾಹರಣೆ.