Namma Metro Yellow Line: ಆ.10ರಂದು ಪ್ರಧಾನಿ ಮೋದಿಯಿಂದ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ: ಡಿಕೆಶಿ
DK Shivakumar: 7,610 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 19.15 ಕಿಲೋಮೀಟರ್ ಉದ್ದದ, 16 ನಿಲ್ದಾಣಗಳಿರುವ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಆ.10ರಂದು ಐಐಎಂಬಿಯಲ್ಲಿ ಇರುವ ಸಭಾಂಗಣದಲ್ಲಿ ಚಿಕ್ಕ, ಚೊಕ್ಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.


ಬೆಂಗಳೂರು, ಆ.05: "ಮೆಟ್ರೋ ಯೋಜನೆ ಕೇವಲ ಕೇಂದ್ರ ಸರ್ಕಾರದ ಯೋಜನೆಯಲ್ಲ. ಇದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲುದಾರಿಕೆ ಇದೆ. ಇದರಲ್ಲಿ ಜನರ ಸೇವೆ ಮುಖ್ಯವೇ ಹೊರತು, ಕ್ರೆಡಿಟ್ ರಾಜಕಾರಣವಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು, ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ಮಂಗಳವಾರ ಸಂಚರಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ನಿಗದಿ ಮಾಡಿದೆ ಎಂದು ಮಾಧ್ಯಮದವರು ಕೇಳಿದಾಗ, "ಇದು ನಮ್ಮ ಮೆಟ್ರೋ. ಮುಖ್ಯಮಂತ್ರಿಯವರು ಹಾಗೂ ನಾನು ಉದ್ಘಾಟನೆ ಮಾಡಿ ಎಂದು ಪ್ರಧಾನಿಗಳ ಬಳಿ ಮನವಿ ಮಾಡಿದ್ದೆವು. ಈಗ ಸಮಯ ನೀಡಿದ್ದಾರೆ. ಇದು ಕೇವಲ ಕೇಂದ್ರ ಸರ್ಕಾರದ ಯೋಜನೆಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಶೇ.50 ರಷ್ಟು ಪಾಲನ್ನು ಹೊಂದಿವೆ. ಅವರ ಕಡೆಯಿಂದ ಅಧ್ಯಕ್ಷರಿದ್ದರೆ ನಮ್ಮ ಕಡೆಯಿಂದ ವ್ಯವಸ್ಥಾಪಕ ನಿರ್ದೇಶಕರು ಇರುತ್ತಾರೆ. ಇಲ್ಲಿ ಯಾರಿಗೂ ಕಿವಿ ಮೇಲೆ ಹೂ ಇಲ್ಲ. ನಾವು ಜನರ ಸೇವೆ ಮಾಡುತ್ತಿದ್ದೇವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು, ನಮ್ಮ ಜವಾಬ್ದಾರಿ ನಿರ್ವಹಣೆ ಮಾಡಿದ್ದೇವೆ" ಎಂದು ಉತ್ತರಿಸಿದರು.

"7,610 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 19.15 ಕಿಲೋಮೀಟರ್ ಉದ್ದದ, 16 ನಿಲ್ದಾಣಗಳಿರುವ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಆ.10ರಂದು ಐಐಎಂಬಿಯಲ್ಲಿ ಇರುವ ಸಭಾಂಗಣದಲ್ಲಿ ಚಿಕ್ಕ, ಚೊಕ್ಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಮೆಟ್ರೋ ರೈಲಿನಲ್ಲಿ ಪ್ರಧಾನಿಯವರು, ಮುಖ್ಯಮಂತ್ರಿಗಳು, ಸ್ಥಳೀಯ ಶಾಸಕರು ಅಂದು ಪ್ರಯಾಣ ಮಾಡಲಿದ್ದಾರೆ. ಇದೇ ವೇಳೆ ಡಬಲ್ ಡೆಕ್ಕರ್ ಯೋಜನೆ ಭೂಸ್ವಾಧೀನಕ್ಕೆ ಒಂದಷ್ಟು ಅನುದಾನದ ಕೊರತೆಯಿದೆ. ಇದರ ಬಗ್ಗೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು" ಎಂದರು.
ಗಲಾಟೆ ಮಾಡುವ ಸಂಸದರು ಅನುದಾನ ಕೊಡಿಸಲಿ
ಮೆಟ್ರೋ ಮಾರ್ಗ ವಿಸ್ತರಣೆ ಹಾಗೂ ಡಬಲ್ ಡೆಕ್ಕರ್ ಬಗ್ಗೆ ಕೇಳಿದಾಗ ಉತ್ತರಿಸಿದ ಅವರು, "ಈಗ ಗಲಾಟೆ ಮಾಡುತ್ತಿರುವ ಸಂಸದರುಗಳು ಒಂದಷ್ಟು ಅನುದಾನ ಕೊಡಿಸಿದರೆ ಬೆಂಗಳೂರಿಗೆ ಬಹಳ ಒಳ್ಳೆಯದು. ಒಬ್ಬರೂ ಸಹ ಅನುದಾನದ ಬಗ್ಗೆ ಮಾತನಾಡುವುದಿಲ್ಲ. ಬರೀ ತಪ್ಪು ಕಂಡುಹಿಡಿದು ಮಾತನಾಡುತ್ತಾರೆ. ನಗರದಲ್ಲಿ ಮುಂದಕ್ಕೆ ಎಲ್ಲೇ ಮೆಟ್ರೋ ಮಾರ್ಗ ನಿರ್ಮಾಣ ಮಾಡಿದರು ಡಬಲ್ ಡೆಕ್ಕರ್ ನಿರ್ಮಾಣ ಮಾಡಲಾಗುವುದು. ಇದಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದು. ಕಟ್ಟಡಗಳನ್ನು ಕೆಡವಿದರೆ ಹೆಚ್ಚು ಪರಹಾರ ನೀಡಬೇಕಾಗುತ್ತದೆ. ಇದನ್ನು ಬಿಬಿಎಂಪಿ ಹಾಗೂ ಬಿಎಂಆರ್ ಸಿಎಲ್ ಎರಡೂ ಸೇರಿ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದೆ" ಎಂದು ಬಿಜೆಪಿಯ ಸಂಸದರಿಗೆ ತಿವಿದರು.

ಸುರಕ್ಷತೆಗೆ ಆದ್ಯತೆ, ಹೀಗಾಗಿ ಅನನುಭವಿಗಳ ಮಾತಿಗೆ ತಲೆಕೆಡಿಸಿಕೊಳ್ಳಲ್ಲ
"ಕಮಿಷನರೇಟ್ ಮೆಟ್ರೋ ರೈಲ್ವೇ ಸೇಫ್ಟಿಯು, ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಬಹುದು ಎಂದು ಜುಲೈ 31 ರಂದು ಪ್ರಮಾಣ ಪತ್ರ ನೀಡಿದೆ. ತೇಜಸ್ವಿ ಸೂರ್ಯ ಆತುರದಲ್ಲಿರುವ ಹುಡುಗ, ಅನುಭವವಿಲ್ಲ. ಈ ಕೆಲಸಗಳನ್ನು ಆತುರದಲ್ಲಿ ಮಾಡಲು ಆಗುವುದಿಲ್ಲ" ಎಂದರು.
ಈಗ 25 ನಿಮಿಷಕ್ಕೊಂದು ಮೆಟ್ರೋ, ಹಂತ ಹಂತವಾಗಿ 10 ನಿಮಿಷಕ್ಕೆ ರೈಲು ಸಂಚಾರ
"ಹಳದಿ ಮಾರ್ಗಕ್ಕೆ ಈಗ ಮೂರು ರೈಲುಗಳು ಬಂದಿವೆ. ನಾಲ್ಕನೇ ರೈಲು ಆಗಸ್ಟ್ ತಿಂಗಳಲ್ಲಿಯೇ ಬರುತ್ತದೆ. ಇದರ ಕಾರ್ಯಾಚರಣೆ ನಡೆಸಲು ಒಂದು ವಾರಗಳ ಸಮಯ ಬೇಕಾಗುತ್ತದೆ. ಪ್ರಸ್ತುತ ಮೂರು ರೈಲುಗಳು ಕಾರ್ಯಚರಣೆ ಮಾಡುತ್ತವೆ. ಈಗ ಮೆಟ್ರೋ ರೈಲು ಕಡಿಮೆ ಇರುವ ಕಾರಣಕ್ಕೆ 25 ನಿಮಿಷಗಳಿಗೊಂದು ಕಾರ್ಯಾಚರಣೆ ಮಾಡುತ್ತವೆ. ನಂತರ 20 ನಿಮಿಷ ನಂತರ ಕಡಿಮೆ ಮಾಡಲಾಗುವುದು. ಮುಂದೆ ರೈಲುಗಳು ಹೆಚ್ಚು ಬಂದಂತೆ ಹಂತ ಹಂತವಾಗಿ 10 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು" ಎಂದು ಹೇಳಿದರು.
"ಈ ಮಾರ್ಗ ಮಹದೇವಪುರ ಸೇರಿದಂತೆ ಐಟಿ ವಲಯಕ್ಕೆ ಸಂಪರ್ಕ ಕೊಂಡಿಯಾಗಲಿದೆ. ನಗರದ ಯಾವ ಭಾಗದಿಂದ ಬೇಕಾದರು ಇಲ್ಲಿಗೆ ಸಂಚಾರ ದಟ್ಟಣೆ ಇಲ್ಲದೆ ಬರಬಹುದು" ಎಂದು ಹೇಳಿದರು.
ಆ.15ರ ಒಳಗೆ ಹೆಬ್ಬಾಳ ಮೇಲ್ಸೆತುವೆ ಉದ್ಘಾಟನೆ:
ಹೆಬ್ಬಾಳ ಜಂಕ್ಷನ್ ಉದ್ಘಾಟನೆ ಬಗ್ಗೆ ಕೇಳಿದಾಗ, "ಆಗಸ್ಟ್ 15 ರ ಒಳಗೆ ಮುಖ್ಯಮಂತ್ರಿಯವರ ದಿನಾಂಕ ಪಡೆದು ಉದ್ಘಾಟನೆ ಮಾಡಲಾಗುವುದು. ಈಗ ಕೆ.ಆರ್ ಪುರಂ ನಿಂದ ಮೇಖ್ರಿ ವೃತ್ತದ ಕಡೆ ಮಾತ್ರ ಲೋಕಾರ್ಪಣೆ ಮಾಡಲಾಗುವುದು. ಇನ್ನೊಂದು ಭಾಗದ ಮೇಲ್ಸೇತುವೆಯನ್ನು ಆನಂತರ ಮಾಡಲಾಗುವುದು. ಹೆಬ್ಬಾಳ ನಾಗಾವರ ಕಡೆ ಎಸ್ಟೀಮ್ ಮಾಲ್ ನಿಂದ ವಿಶ್ವವಿದ್ಯಾಲಯದ ತನಕ ಹೊಸ ಟನಲ್ ರಸ್ತೆ ಮಾಡಲಾಗುವುದು. ಇದನ್ನು ಸದ್ಯದಲ್ಲೇ ಸಂಚಿವ ಸಂಪುಟದ ಮುಂದೆ ಮಂಡಿಸಲಾಗುತ್ತದೆ. ಮುಖ್ಯ ಟನಲ್ ರಸ್ತೆ ಬೇರೆ, ಈ 1.5 ಕಿಮೀ ಉದ್ದದ ಟನಲ್ ರಸ್ತೆ ಬೇರೆ ಇರಲಿದೆ. ಇದನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು" ಎಂದರು.
ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ ಆದರೆ ಕೇವಲ ಮೂರೇ ಮೆಟ್ರೋ ರೈಲುಗಳಿವೆ ಎಂದು ಕೇಳಿದಾಗ, "ಕೆಲವು ಕಾರಣಾಂತರಗಳಿಂದ ರೈಲುಗಳು ಬಂದಿಲ್ಲ. ಚೀನಾದಿಂದ ಒಂದಷ್ಟು ರೈಲುಗಳನ್ನು ತೆಗೆದುಕೊಂಡಿದ್ದರು. ಆದರೆ ಅದರಲ್ಲಿ ಒಂದಷ್ಟು ತೊಡಕುಗಳಿವೆ. ಈಗ ಇಟಾನಗರ ಸೇರಿದಂತೆ ಇತರೆಡೆಯಿಂದ ರೈಲುಗಳು ಬರಬೇಕು. ಅಲ್ಲಿಂದ ಬಂದ ನಂತರ ರೈಲು ಕಾರ್ಯಾಚರಣೆ ಅವಧಿ ಹೆಚ್ಚಳ ಮಾಡಲಾಗುವುದು" ಎಂದರು.
"ಈ ಮಾರ್ಗ ಸಂಪೂರ್ಣಗೊಳ್ಳಲು ದುಡಿದ ಎಲ್ಲಾ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಮಿಕರನ್ನು ರಾಜ್ಯ ಸರ್ಕಾರದವತಿಯಿಂದ ಅಭಿನಂದಿನೆ ತಿಳಿಸುತ್ತೇನೆ. ಈ ಹಿಂದಿನ ಎಂಡಿಯವರಾದ ಮಹೇಶ್ವರ್ ರಾವ್ ಅವರು ಹಾಗೂ ಅನೇಕ ಸಿಬ್ಬಂದಿ ಇದಕ್ಕಾಗಿ ದುಡಿದಿದ್ದಾರೆ" ಎಂದರು.
ಟನಲ್ ರಸ್ತೆ ಟೆಂಡರ್ ಅಲ್ಲಿ ಅದಾನಿ ಕಂಪನಿ ಕೂಡ ಭಾಗವಹಿಸಲಿದೆ ಎಂದು ಕೇಳಿದಾಗ, "ನೀವು ಸಹ ಭಾಗವಹಿಸಿ" ಎಂದರು.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಬಗ್ಗೆ ಕೇಳಿದಾಗ, "ಇಡೀ ದೇಶದ ಎಲ್ಲಾ ಭಾಗದ ಜನ, ಗ್ರಾಮೀಣ ಭಾಗದ ಜನ ಎಲ್ಲರೂ ಇಲ್ಲಿಗೆ ಬರುತ್ತಿದ್ದಾರೆ. ಒಳ್ಳೆ ವಾತಾವರಣ, ಕಾವೇರಿ ನೀರು, ಉತ್ತಮ ಸಂಸ್ಥೆಗಳಿವೆ, ನೀವೇ ಬೆಂಗಳೂರು ಬಿಟ್ಟು ಹೋಗುತ್ತಿಲ್ಲ. ಮೆಟ್ರೋ ನಿಲ್ದಾಣ ಇರುವ ಕಡೆ ವಾಹನ ನಿಲ್ದಾಣಗಳಿಗೂ ಹೆಚ್ಚುವರಿ 3-4 ಎಕರೆ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಮೆಟ್ರೋ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದೇನೆ.ಕೆಳಗೆ ನಿಲ್ದಾಣ ಮಾಡಿ ಮೇಲೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಿ" ಎಂದರು.
ಈ ಸುದ್ದಿಯನ್ನೂ ಓದಿ | Metro Yellow Line: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಆ.10ರಂದು ಹಳದಿ ಮಾರ್ಗ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಬೆಂಗಳೂರಿನ ರಸ್ತೆಗಳನ್ನು ಹೊಸದಾಗಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಕೇಳಿದಾಗ, "ಮಾಡಲಾಗುತ್ತಿದೆ, ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಮಾಡಿದರು ಸಾಲದು. ಅಧಿವೇಶನದ ವೇಳೆ ಇದರ ಬಗ್ಗೆ ಮಾತನಾಡುವೆ. ಅಧಿಕಾರಿಗಳಿಗೆ ಒಂದಷ್ಟು ಡೆಡ್ ಲೈನ್ ನೀಡಿದ್ದೇವೆ" ಎಂದರು.
ಎರಡನೇ ಹಂತದ ನಗರಗಳಿಗೆ ಆದ್ಯತೆ ನೀಡುವ ಬಗ್ಗೆ ಕೇಳಿದಾಗ, "ಇದರ ಬಗ್ಗೆ ಹೊಸ ಆಲೋಚನೆ ಇದೆ, ಇದನ್ನು ಮುಂದೆ ತಿಳಿಸುತ್ತೇನೆ" ಎಂದರು.
ಮೆಡ್ರೋ ಫೀಡರ್ ಬಸ್‌ಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದಿರುವ ಬಗ್ಗೆ ಕೇಳಿದಾಗ, "ಇದರ ಬಗ್ಗೆ ಗಮನ ಹರಿಸುವೆ" ಎಂದರು.