ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ರಾಜೀನಾಮೆ ನೀಡುತ್ತಿರುವುದಾಗಿ ಸಚಿವ ಬಿ.ನಾಗೇಂದ್ರ (B Nagendra Resignation) ಹೇಳಿದ್ದರು. ಇದೀಗ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಬಿ.ನಾಗೇಂದ್ರ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ದೆಹಲಿಯಿಂದ ಆಗಮಿಸಿದ ಬಳಿಕ ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ, ಯೋಜನೆ ಹಾಗೂ ಸಾಂಖ್ಯಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಘೋಷಿಸಿದ್ದರು. ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಿಎಂ ರವಾನಿಸಲಿದ್ದಾರೆ.
ಆರ್‌ಎಸ್‌ಎಸ್ ಮೆರವಣಿಗೆಯಲ್ಲಿ ಭಾಗವಹಿಸಿದ ಶಿಕ್ಷಕರ ಅಮಾನತು: ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ
ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಸದನದಲ್ಲಿ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸದನದ ಕಲಾಪಕ್ಕೂ ಅಡ್ಡಿಯುಂಟಾಗಿತ್ತು. ಅಷ್ಟೇ ಅಲ್ಲದೆ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ಮಾಡುವುದಾಗಿ ಬಿಜೆಪಿ ಘೋಷಿಸಿತ್ತು. ಸೆ.1ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈವಿಜಯೇಂದ್ರ ತಿಳಿಸಿದ್ದರು. ಈ ನಡುವೆ ಸಚಿವ ಸ್ಥಾನಕ್ಕೆ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ.
ಪಕ್ಷದ ವರಿಷ್ಠರಿಗೆ ಮುಜುಗರ ಆಗಬಾರದು ಎಂದು ರಾಜೀನಾಮೆ
ನವದೆಹಲಿಯಿಂದ ಬೆಂಗಳೂರಿಗೆ ಶುಕ್ರವಾರ ಸಂಜೆ ಬಂದ ಬಳಿಕ ವಿಧಾನಸೌಧದಲ್ಲಿ ಅವರು ರಾಜೀನಾಮೆ ಘೋಷಿಸಿದರು. ನಮ್ಮ ಪಕ್ಷದ ವರಿಷ್ಠರಿಗೆ ಮುಜುಗರ ಆಗಬಾರದು ಎಂದು ನನ್ನ ಸ್ವ ಇಚ್ಛೆಯಿಂದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಶಾಸಕ ಬಿ.ನಾಗೇಂದ್ರ ಹೇಳಿದರು.
ರಾಜೀನಾಮೆ ಘೋಷಿಸಿದ ವೇಳೆ ಭಾವುಕರಾಗಿ ಕಣ್ಣೀರಿಟ್ಟ ಬಿ.ನಾಗೇಂದ್ರ ಅವರು, ಇದೇ ವೇಳೆ ವಿಪಕ್ಷಗಳ ವಿರುದ್ಧ ಹರಿಹಾಯ್ದಿರು. ನನಗೆ ನೈತಿಕವಾಗಿ ಬೆಂಬಲಿಸಿದವರಿಗೆ ಧನ್ಯವಾದ ಹೇಳುವೆ. ವಿಪಕ್ಷದವರು ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಆಧಾರ ಇಲ್ಲದ ವಿಷಯ ಇಟ್ಟುಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ವಿರೋಧ ಪಕ್ಷದವರು ಈಗಲೂ ಮನುಸ್ಮೃತಿಯನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಪುರಾಣ ಅಥವಾ ವೇದಕಾಲವಲ್ಲ, ಇದು ಸಂವಿಧಾನ ಯುಗ, ಅಂಬೇಡ್ಕರ್ ಕಾಲ. ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು ಸ್ವತಂತ್ರವಾಗಿ ಬದುಕಬಾರದು ಎಂಬುವುದು ಬಿಜೆಪಿಯವರ ಉದ್ದೇಶ. ಆದರೆ, ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತೆ ಎಂಬ ನಂಬಿಕೆ ಇದೆ.
ನಮ್ಮ ರಾಜ್ಯ ಪೊಲೀಸರು ಸರಿಯಾಗಿ ತನಿಖೆ ಮಾಡಿದ್ದಾರೆ. ಆದರೆ, ಸಿಬಿಐಗೆ ಪ್ರಕರಣ ನೀಡಿ ನನ್ನನ್ನು ಜೈಲಿಗೆ ಹಾಕಿಸಿದ್ದರು. ಎರಡನೇ ಚಾರ್ಜ್‌ಶೀಟ್‌ನಲ್ಲಿ ತರಾತುರಿಯಲ್ಲಿ ನನ್ನ ಹೆಸರು ಸೇರಿಸಲಾಗಿದೆ. ನ್ಯಾಯಾಲಯ ಹಾಗೂ ಸಂವಿಧಾನದ ಬಗ್ಗೆ ಗೌರವವಿದೆ. ಪಕ್ಷಕ್ಕೆ ಮುಜುಗರ ಆಗಬಾರದು ಎಂದು ಈ ಹಿಂದೆ ರಾಜೀನಾಮೆ ನೀಡಿದ್ದೆ. ಈ ಮನುವಾದಿಗಳ ಕುತಂತ್ರಕ್ಕೆ ನಾನು ಬಗ್ಗುವುದಿಲ್ಲ ಎಂದು ಹೇಳಿದರು.
ಒಬ್ಬ ನಿರಪರಾಧಿ ಬಗ್ಗೆ ಒಂದು ಸುಳ್ಳನ್ನು ಹೇಳಿ ಹೇಳಿ ನಿಜ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ನಾನು ತಪ್ಪು ಮಾಡಿಲ್ಲ ಸಿಎಂ ಕೂಡ ಹೇಳಿದ್ದಾರೆ, ಆದರೆ ನಮ್ಮ ವರಿಷ್ಠರಿಗೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಡುತ್ತೇನೆ.
ಜಾತಿ ಆಧಾರಿತ ಮೀಸಲಾತಿ ಪರಿಶೀಲನೆ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ
ಈ ಕೋಮುವಾದಿ ಪಕ್ಷವನ್ನು ನಾನು ಎದುರಿಸುವೆ, ನಾನು ಪುರಾಣ ಕಾಲದ ಶಂಬೂಕ ಅಲ್ಲ, ಲೋಕ ಕಲ್ಯಾಣಕ್ಕೆ ತಪಸ್ಸು ಮಾಡಿದ ಶಂಬೂಕನನ್ನು ಕೊಲ್ಲಲಾಯಿತು. ನಾನು ಶಂಭೂಕನಾಗಲು ಬಯಸಲ್ಲ. ಸಚಿವ ಸ್ಥಾನಕ್ಕೆ ಮಾತ್ರವಲ್ಲ, ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವೆ, ಬನ್ನಿ ಸ್ವಾಮಿ ನಿಮಗೆ ತಾಕತ್ ಇದ್ದರೆ, ಜನತಾ ನ್ಯಾಯಾಲಯಕ್ಕೆ ಹೋಗೋಣ. ನನ್ನ ತಪ್ಪಿದ್ದರೆ ಜನರು ಸೋಲಿಸುತ್ತಾರೆ, ಇಲ್ಲದಿದ್ದರೆ ಗೆಲ್ಲಿಸುತ್ತಾರೆ ಎಂದು ಬಳ್ಳಾರಿ ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸವಾಲು ಹಾಕಿದರು.