ನವದೆಹಲಿ, ಫೆ.14: ಕೇಂದ್ರ ಸರ್ಕಾರ (Central Government), ಕರ್ನಾಟಕಕ್ಕೆ ಮೇಲಿಂದ ಮೇಲೆ ರೈಲ್ವೆ ಯೋಜನೆ ಬಂಪರ್ ಕೊಡುಗೆಗಳನ್ನು ಕೊಡಮಾಡುತ್ತಿದೆ. ಮೂರು ಕಾರಿಡಾರ್‌ಗಳ ಘೋಷಣೆ ಬೆನ್ನಲ್ಲೇ ಇದೀಗ ಮತ್ತೊಂದು ರೈಲ್ವೆ ಯೋಜನೆಯ ಭಾಗ್ಯ ಕಲ್ಪಿಸಿದೆ. ಬಳ್ಳಾರಿ-ಹೊಸಪೇಟೆ 3 ಮತ್ತು 4ನೇ ರೈಲು ಮಾರ್ಗ ಯೋಜನೆಗೆ ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡುವ ಮೂಲಕ ರಾಜ್ಯ ಪ್ರವಾಸೋದ್ಯಮಕ್ಕೆ ಮಹತ್ತರ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಶನಿವಾರ, ಈ ಯೋಜನೆಗೆ ಅಸ್ತು ಎಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮಾಹಿತಿ ನೀಡಿದ್ದಾರೆ.
ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಐತಿಹಾಸಿಕ ಕ್ಷೇತ್ರ ಹಂಪಿ ಮತ್ತು ತುಂಗಭದ್ರಾ ಅಣೆಕಟ್ಟು ಸೇರಿದಂತೆ ಪ್ರಮುಖ ಪ್ರವಾಸಿ ಸ್ಥಳಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ರೈಲ್ವೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ಪಂದಿಸಿದ್ದು, ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ ಎಂದಿದ್ದಾರೆ.
ಈ ರೈಲು ಮಾರ್ಗದಿಂದ ರಾಜ್ಯದ ಪ್ರವಾಸಿ ತಾಣಗಳಿಗೆ ಹೆಚ್ಚುವರಿ ರೈಲು ಸಂಪರ್ಕ ಸಾಧ್ಯವಾಗಲಿದೆ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣ, ಹಂಪಿ, ತುಂಗಭದ್ರ ಅಣೆಕಟ್ಟು ಸೇರಿದಂತೆ ಪ್ರಸಿದ್ಧ ತಾಣಗಳಿಗೆ ಪ್ರವಾಸಿಗರ ಸಂಚಾರವನ್ನು ಸುಗಮಗೊಳಿಸಲಿದೆ.
₹ 2,372 ಕೋಟಿ ಅಂದಾಜು ವೆಚ್ಚ
ಬಳ್ಳಾರಿ-ಹೊಸಪೇಟೆ 3ನೇ ಮತ್ತು 4ನೇ ರೈಲು ಮಾರ್ಗ ಯೋಜನೆ ಅಂದಾಜು ವೆಚ್ಚ ₹ 2,372 ಕೋಟಿಯಾಗಿದ್ದು, 65 ಕಿಮೀ ಉದ್ದದ ಮಾರ್ಗ ಇದಾಗಿದೆ.
ಪಿಎಂ ಸೂರ್ಯಘರ್ ಯೋಜನೆಯಡಿ 16,000 ಕೋಟಿ ಸಬ್ಸಿಡಿ ಸಕ್ರಿಯ: ಪ್ರಲ್ಹಾದ್ ಜೋಶಿ
14 ಕೋಟಿ ಕೆಜಿ CO2 ಉಳಿಕೆ
ಈ ಎರಡೂ ಮಾರ್ಗಗಳಲ್ಲಿ ಒಟ್ಟು 34 ಪ್ರಮುಖ ಸೇತುವೆಗಳು, 220 ಸಣ್ಣ ಸೇತುವೆಗಳು ಇರಲಿವೆ. ಈ ರೈಲು ಮಾರ್ಗಗಳಲ್ಲಿ ರೈಲು ಸಂಚಾರ ಆರಂಭದಲ್ಲಿ ವಾರ್ಷಿಕವಾಗಿ 14 ಕೋಟಿ ಕೆಜಿ CO2 ಉಳಿಕೆ ಮಾತ್ರವಲ್ಲದೆ, ಸರಿಸುಮಾರು 58 ಲಕ್ಷ ಮರಗಳನ್ನು ನೆಡುವುದಕ್ಕೆ ಸಮವಾಗಿದೆ.