ಪಟನಾ: ಪ್ರತಿಭಟನಾ ಸರ್ವ ಸಮಾಜ ಪಕ್ಷದ (Protest Sarva Samaj Party) ಬ್ಯಾನರ್ ಅಡಿಯಲ್ಲಿ ಬೇಗುಸರೈನ (Begusarai) 72 ವರ್ಷದ ರೈತರೊಬ್ಬರು ಬಿಹಾರ ವಿಧಾನಸಭಾ ಚುನಾವಣಾ (Bihar Assembly election) ಕಣಕ್ಕೆ ಇಳಿದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ, ಕೈಗಾರಿಕೆ, ಗ್ರಾಮೀಣ ಸಮುದಾಯಗಳ ಸಬಲೀಕರಣ ಮೊದಲಾದ ಉದ್ದೇಶಗಳನ್ನು ಹೊಂದಿರುವ ಇವರು ಇದನ್ನೇ ತಮ್ಮ ಚುನಾವಣಾ ಪ್ರಚಾರದ ವಿಷಯವನ್ನಾಗಿ ಇರಿಸಿದ್ದಾರೆ. ಚೆರಿಯಾ ಬರಿಯಾರ್‌ಪುರ್ (Cheria Bariarpur) ಕ್ಷೇತ್ರದಿಂದ ಸ್ಪರ್ಧಿಸಲಿರುವ ಬಾರಾ ಖೋಡಾಬಂದ್‌ಪುರ ಗ್ರಾಮದ ನಿವಾಸಿ ರಾಮ್ ಸ್ವಾರ್ಥ್ ಪ್ರಸಾದ್ ಅವರು ಬಿಹಾರ ವಿಧಾನಸಭಾ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಮಂಜೌಲ್ ಉಪವಿಭಾಗದ ಕಚೇರಿಯಲ್ಲಿ ಶುಕ್ರವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದ 72 ವರ್ಷದ ರೈತ, ಬಾರಾ ಖೋಡಾಬಂದ್‌ಪುರ ಗ್ರಾಮದ ನಿವಾಸಿ ರಾಮ್ ಸ್ವಾರ್ಥ್ ಪ್ರಸಾದ್ ಅವರೊಂದಿಗೆ ಈ ಸಂದರ್ಭದಲ್ಲಿ ಬೆಂಬಲಿಗರ ಸಣ್ಣ ಗುಂಪು ಮತ್ತು ಪಕ್ಷದ ಕಾರ್ಯಕರ್ತರು ಇದ್ದರು. ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ ಸ್ವಾರ್ಥ್ ಪ್ರಸಾದ್, ತಾನು ಚುನಾವಣಾ ಕಣಕ್ಕೆ ಇಳಿಯುವಂತೆ ಮಾಡಿರುವ ಸದ್ಯದ ಪರಿಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: Viral News: ಹೆದ್ದಾರಿ ಸಮಸ್ಯೆ; ಪರಿಹಾರ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಧಾನಿಗೆ ಪ್ರತ ಬರೆದ ಗ್ರಾಮಸ್ಥರು
ಎಲ್ಲೆಡೆ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವುದು ನಮ್ಮ ಆದ್ಯತೆಯಾಗಿದೆ. ನಾವು ಗೆದ್ದರೆ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಘೋಷಿಸಿದರು. ಕೃಷಿಗೆ ಉದ್ಯಮ ಸ್ಥಾನಮಾನ ನೀಡುವುದು, ವಿದೇಶಿ ವಸ್ತುಗಳ ಆಮದನ್ನು ನಿಲ್ಲಿಸುವುದು ಮತ್ತು ಸ್ಥಳೀಯ ಉದ್ಯೋಗವನ್ನು ಹೆಚ್ಚಿಸಲು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆಯನ್ನು ನೀಡಿದರು.
ಈಗಿನ ಕಾಲದ ದೊಡ್ಡ ಸಮಸ್ಯೆ ಎಂದರೆ ನಾವು ಎಂದಿಗೂ ನಮ್ಮನ್ನು ಮನುಷ್ಯರೆಂದು ಪರಿಗಣಿಸಿಲ್ಲ. ಘನತೆ, ಜೀವನೋಪಾಯ ಮತ್ತು ಸ್ಥಳೀಯ ಸಬಲೀಕರಣದ ಅಗತ್ಯವನ್ನು ಒತ್ತಿ ಹೇಳಿದ ಅವರು, ನಾವು ಸಮಸ್ಯೆಗಳನ್ನು ನೋಡಿ ಬೇಸತ್ತಿದ್ದೇವೆ. ನಮಗೆ ಅದನ್ನು ಸಹಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಈಗ ಚುನಾವಣಾ ಕಣಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.
ರಾಮ್ ಸ್ವಾರ್ಥ್ ಪ್ರಸಾದ್ ಅವರು ಸಲ್ಲಿಸಿರುವ ಅಫಿಡವಿಟ್ ಮಾಹಿತಿ ಪ್ರಕಾರ ವೃತ್ತಿಯಲ್ಲಿ ರೈತರಾಗಿರುವ ಪ್ರಸಾದ್ ಮತ್ತು ಅವರ ಪತ್ನಿ ತಮ್ಮ ಸರಳ ಜೀವನಶೈಲಿಯ ಬಗ್ಗೆ ಘೋಷಿಸಿಕೊಂಡಿದ್ದಾರೆ. ತಮ್ಮ ಪ್ರಚಾರ ಕಾರ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ನಾವು ಚೆರಿಯಾ ಬರಿಯಾರ್‌ಪುರಕ್ಕಿಂತ ಹೆಚ್ಚಿನ ಮತಗಳಿಂದ ಚುನಾವಣೆಯಲ್ಲಿ ಗೆಲ್ಲುತ್ತೇವೆ. ನಾವು ಸ್ವತಂತ್ರರು. ನಮಗೆ ಯಾರೊಂದಿಗೂ ಯಾವುದೇ ಸ್ಪರ್ಧೆ ಇಲ್ಲ ಎಂದು ತಿಳಿಸಿದರು.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಬೇಗುಸರೈನ ಏಳು ಸ್ಥಾನಗಳಲ್ಲಿ ಚೆರಿಯಾ ಬರಿಯಾರ್‌ಪುರ ಕ್ಷೇತ್ರಕ್ಕೆ ನವೆಂಬರ್ 6 ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಅಕ್ಟೋಬರ್ 18 ಕೊನೆಯ ದಿನವಾಗಿದೆ.