ಧಾರವಾಡ, ಅ.06: ವಿಧಾನ ಪರಿಷತ್‍ನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಈ ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಲಿದ್ದಾರೆ. ದೊಡ್ಡ ಅಂತರದಲ್ಲಿ ಅವರು ಜಯಶೀಲರಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಂಕನೂರ ಅವರು ಎರಡು ಬಾರಿ ವಿಧಾನ ಪರಿಷತ್ ಸದ್ಯರಾಗಿ ಪದವೀಧರರ ಪರವಾಗಿ ಪರಿಷತ್‍ನಲ್ಲಿ ಬಹಳ ಸಮರ್ಥವಾಗಿ ಧ್ಚನಿ ಎತ್ತಿ ಕೆಲಸ ಮಾಡಿದ್ದಾರೆ. ಅವರು ಜನಾನುರಾಗಿ ಶಾಸಕರು. ಎಲ್ಲರ ವಿಶ್ವಾಸ ಗಳಿಸಿದ್ದಾರೆ. ಆದ್ದರಿಂದ ಮತ್ತೆ ಅವರು ಆರಿಸಿ ಬರಲಿದ್ದಾರೆ ಎಂದು ಹೇಳಿದರು.
ಸಂಕನೂರ ಅವರ ಗೆಲುವಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಮಹೇಶ್ ಟೆಂಗಿನಕಾಯಿ ಹಾಗೂ ಅರವಿಂದ ಬೆಲ್ಲದ ಸೇರಿದಂತೆ ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ ಭಾಗದ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ಹೇಳಿದರು.
ಸಿಎಂ ಕಪಟ ನಾಟಕ
ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ಇದ್ದರೂ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಅಸ್ಥಿರತೆ ಕಾಡುತ್ತಿದೆ. ಆರ್ಥಿಕ ಸಂಕಷ್ಟ ಸಹ ಅವರಿಗೆ ಭಯ ತಂದಿದೆ. ಈಗ ಇವರು ಎಸ್‍ಐಆರ್ ಇಟ್ಟುಕೊಂಡು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಫಾರಂ 7 ಬಗ್ಗೆ ಗೊಂದಲ ಮಾಡುತ್ತಿದ್ದಾರೆ. ಇವೆಲ್ಲ ಇಟ್ಟುಕೊಂಡು ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಧರಣಿ ಮಾಡುವ ಕಪಟ ನಾಟಕವನ್ನು ಸಿಎಂ ಮಾಡಿದರು ಎಂದು ದೂರಿದರು.
ಶಿಕ್ಷಕರಿಗೆ ಬೆದರಿಕೆ ಹಾಕಿ ಅಧಿಕಾರ ದುರುಪಯೋಗ: ಸಿಎಂ ಡಿಕೆಶಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ
ರಾಜ್ಯ ಸರ್ಕಾರವೇ ನೇಮಿಸಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಇದ್ದಾರೆ. ಅವರ ವಿರುದ್ಧವೇ ರಾಜ್ಯ ಸರ್ಕಾರ ಆರೋಪ ಮಾಡುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದರಿಂದ ಹತ್ತು ಸಾವಿರ ಅಹಿಂದ ಮತದಾರರನ್ನು ಕೈಬಿಡಲು ಬಿಜೆಪಿ ಕಾರ್ಯಕರ್ತರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಆಯುಕ್ತರ ಪ್ರಕಾರ 91 ಸಾವಿರ ಆಕ್ಷೇಪಣೆ ಸಲ್ಲಿಕೆಯಾಗಿದೆ. ಆಕ್ಷೇಪಣೆ ಸಲ್ಲಿಸುವುದು ಹಕ್ಕು. ಮತದಾರರ ಹೆಸರು ತೆಗೆಯಲು ಬಿಎಲ್‍ಎಗಳು ಅರ್ಜಿ ನೀಡಿದರೆ ಅದರ ಪರಿಶೀಲನೆ ಮಾಡುವುದು ಬಿಎಲ್‍ಒಗಳು. ಬಿಎಲ್‍ಒಗಳು ರಾಜ್ಯ ಸರ್ಕಾರದ ಅಧೀನದಲ್ಲಿದ್ದಾರೆ. ಹಾಗಾದರೆ ಮತ್ತ್ಯಾಕೆ ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ಆರೋಪ ಮಾಡಬೇಕು ಎಂದು ಕೇಳಿದರು.
ಎಷ್ಟು ಕೊಲೆ ಆಗಿವೆ ಉತ್ತರ ಕೊಡಲಿ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯನ್ನು ರಿಪಬ್ಲಿಕ್ ಆಫ್ ಕಲಬುರಗಿ ಆಗಿ ಮಾಡಿಕೊಂಡಿದ್ದಾರೆ. ಇಡೀ ಜಿಲ್ಲೆ ಖರ್ಗೆ ಕುಟುಂಬದ ಕಪಿಮುಷ್ಟಿಯಲ್ಲಿ ಇದೆ. ಇವರು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಕೊಲೆಗಳಾಗಿವೆ ಎಂಬುದನ್ನು ಬಹಿರಂಗ ಮಾಡಲಿ. ಗುತ್ತಿಗೆದಾರರು, ಅಧಿಕಾರಿಗಳು ಕೊಲೆ ಆದರೆ ಖರ್ಗೆ ಕಡೆಯ ಪುಡಾರಿಗಳು ಕೊಲೆಯಾದವರ ಕುಟುಂಬವನ್ನು ರಾತ್ರಿ ಎರಡು ಗಂಟೆಗೆ ಸಂಪರ್ಕ ಮಾಡಿ ಒಂದಷ್ಟು ಹಣ ನೀಡಿ ಬಾಯಿ ಮುಚ್ಚಿಸುತ್ತಾರೆ ಎಂದು ಆರೋಪಿಸಿದರು.
ಇಂತಹ ಸುಪಾರಿ ಕಿಲ್ಲರ್‌ಗಳನ್ನು ಯಾರು ಬೆಳೆಸುತ್ತಿದ್ದಾರೆ ಎಂಬುದಕ್ಕೆ ಪ್ರಿಯಾಂಕ್ ಖರ್ಗೆ ಅವರೇ ಉತ್ತರ ನೀಡಬೇಕು. ಹಣ ನೀಡಿ ಬಡವರ ಬಾಯಿ ಮುಚ್ಚಿಸುವ ಕೆಲಸವನ್ನು ಖರ್ಗೆ ಮಾಡುವುದು ಬಿಡಲಿ. ಇವರು ಕಾನೂನಿನ ಬಗ್ಗೆ ನಮಗೆ ಹೇಳಿಕೊಡುವ ಅವಶ್ಯಕತೆ ಇಲ್ಲ ಎಂದರು.
ಫಾರಂ 7 ಕೊಟ್ಟಿದ್ದು ಸರಿ ಇಲ್ಲ ಎಂದಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ರಾಜ್ಯ ಸರ್ಕಾರ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡಿದರೆ ಹೆದರುವುದಿಲ್ಲ ಎಂದರು.
ಬೆಲೆ ಏರಿಕೆಯೇ ಪ್ರಮುಖ ಸಾಧನೆ
ರಾಜ್ಯದ ಕಾಂಗ್ರೆಸ್ ಸರ್ಕಾರ ಮೂರು ವರ್ಷದಲ್ಲಿ ಬೆಲೆ ಏರಿಕೆ ಮಾಡಿದ್ದು ಬಿಟ್ಟರೆ ಬೇರೆ ಏನೂ ಸಾಧನೆ ಮಾಡಿಲ್ಲ. ಈಗ ಮತ್ತೆ ಬಸ್ ಟಿಕೆಟ್ ದರ ಏರಿಸಲು ಮುಂದಾಗಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಹೀನಾಯ ಮಟ್ಟಕ್ಕೆ ಬಂದಿದೆ. ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಕೊಚ್ಚಿಕೊಂಡರು. ಸಾರಿಗೆ ನಿಗಮಗಳಿಗೆ ಸರ್ಕಾರ ಹಣ ನೀಡಿಲ್ಲ. ಸಾವಿರಾರು ಕೋಟಿ ಬಾಕಿ ಇದೆ ಎಂದು ನಿಗಮದ ಎಂಡಿ, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸಾರಿಗೆ ನೌಕರರಿಗೆ ಸಂಬಳ ಕೊಡಲೂ ಸರ್ಕಾರಕ್ಕೆ ಹಣ ಇಲ್ಲ. ಗ್ರಾಮೀಣ ಭಾಗದಲ್ಲಿ ಶಾಲಾ ಮಕ್ಕಳಿಗೆ ಬಸ್ ಸೌಲಭ್ಯ ಇಲ್ಲ ಎಂದು ಟೀಕಿಸಿದರು.
ದಿನಸಿ ಅಂಗಡಿಯಲ್ಲೂ ಮದ್ಯ
ಗ್ಯಾರಂಟಿಗಳಿಗೆ ಹಣ ಸಂಪಾದಿಸಲು ಸಾಧ್ಯವಾಗದೇ ಅಬಕಾರಿ ಇಲಾಖೆಗೆ ಸರ್ಕಾರ ಗುರಿ ನೀಡಿದೆ. ದಿನಸಿ ಅಂಗಡಿಯಲ್ಲೂ ಮದ್ಯ ಸಿಗುತ್ತಿದೆ. ಕುಡುಕರ ರಾಜ್ಯ ಮಾಡಿದ್ದೇ ಸಾಧನೆ. ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಎರಡೂವರೆ ಲಕ್ಷ ಹುದ್ದೆ ಖಾಲಿ ಇದೆ. ಈಗ ಭಾರತ್ ಜೋಡೊ ಸಂಘ ಮಾಡಲು ಮುಂದಾಗಿದ್ದಾರೆ ಎಂದರು.
ಕೇರಳದಲ್ಲಿ ಎಸ್‍ಐಆರ್ ಆಗಿದ್ದರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಸಂಸದ ಶಶಿ ತರೂರ್ ಮತ್ತು ಸಚಿವ ವಯಲಾರ್ ರವಿ ಹೇಳಿದ್ದಾರೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಲು ಕೇಂದ್ರ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಎಫ್‍ಐಆರ್ ಮಾಡಿ ನಮ್ಮ ಕಾರ್ಯಕರ್ತರನ್ನು ಬೆದರಿಸಲು ಸರ್ಕಾರ ಹೊರಟಿದೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಆರೋಪಿಸಿದರು.
ಕನಿಷ್ಠ ವೇತನಕ್ಕೆ ಆಗ್ರಹಿಸಿ ರಾಜ್ಯದಲ್ಲಿ ಪ್ರತಿಭಟನೆ ಆರಂಭವಾಗಿದೆ. ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರ ಮರೆತಿದೆ. ಕೇವಲ ಕಾಲಹರಣ ಮಾಡಿಕೊಂಡು ಸಿಎಂ ಭ್ರಮೆಯಲ್ಲಿದ್ದಾರೆ. ರಿಯಲ್ ಎಸ್ಟೇಟ್‍ನಲ್ಲೇ ಅವರು ಮುಳುಗಿದ್ದಾರೆ. ಬಿಡದಿ ಟೌನ್ ಶಿಪ್ ಅವರ ಆದ್ಯತೆ. ಕನಕಪುರಕ್ಕೆ ವಿಮಾನ ನಿಲ್ದಾಣವೇ ಅವರಿಗೆ ಮುಖ್ಯವಾಗಿದೆ. ರಾಜ್ಯದ ಅಭಿವೃದ್ಧಿ ಚಿಂತನೆ ಮಾಡ್ತಾ ಇಲ್ಲ. ಬರಗಾಲದಲ್ಲೂ ನಿರ್ಲಕ್ಷ್ಯ ಮಾಡಿದ್ದರು. ದೆಹಲಿಗೆ ಹೋಗೋದು, ಬರಕ್ಕೆ ಕೇಂದ್ರಕ್ಕೆ ಪತ್ರ ಬರೆಯೋದೇ ಆವರಿಗೆ ಕೆಲಸ ಆಗಿದೆ. ರೈತರ ಬಗ್ಗೆ ಕಾಳಜಿ ಸಹ ಇಲ್ಲ ಎಂದು ಟೀಕಿಸಿದರು.
ವಿಧಾನ ಪರಿಷತ್‌ನ 4 ಕ್ಷೇತ್ರಗಳಲ್ಲೂ ಎನ್‍ಡಿಎ ಗೆಲುವು: ಬಿ.ವೈ. ವಿಜಯೇಂದ್ರ ವಿಶ್ವಾಸ
ಮಹಾರಾಷ್ಟ್ರದಂತೆ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿದ್ದೇವೆ. ರೈತರಿಗೆ ಸರಿಯಾಗಿ ವಿದ್ಯುತ್ ಸಹ ನೀಡುತ್ತಿಲ್ಲ. ಬರಗಾಲ ಎದುರಿಸಲು ಯೋಜನೆ ಇಲ್ಲ. ಕಚೇರಿಯಲ್ಲಿ ಕುಳಿತರೆ ಬರ ನಿರ್ವಹಣೆ ಆಗಲ್ಲ. ಮಠಾಧೀಶರನ್ನೂ ಸಿಎಂ ಬೆದರಿಸುತ್ತಿದ್ದಾರೆ. ಜಾತಿಗಳ ನಡುವೆ ವಿಷಬೀಜ ಬಿತ್ತಿ ರಾಜಕೀಯ ಬೆಳೆ ಬೇಯಿಸಿಕೊಳ್ಳುವ ಭ್ರಮೆಯಲ್ಲಿ ಸಿಎಂ ಇದ್ದಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಎಸ್.ವಿ.ಸಂಕನೂರ, ಶಾಸಕರಾದ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ್, ಮಾಜಿ ಶಾಸಕಿ ರೂಪಾಲಿ ನಾಯಕ್ ಹಾಗೂ ಪ್ರಮುಖರು ಇದ್ದರು.