ರಾಯಚೂರು: ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ರಾಜ್ಯ ಬಿಜೆಪಿ ರಣಕಹಳೆ ಮೊಳಗಿಸಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ `ಬಳ್ಳಾರಿ ಚಲೋ' (Ballari Chalo padayatra) ಪಾದಯಾತ್ರೆಗೆ ಮಂಗಳವಾರ ಚಾಲನೆ ನೀಡಲಾಗಿದ್ದು, ಇಂದಿನಿಂದ ಇಂದಿನಿಂದ ಸೆಪ್ಟೆಂಬರ್ 10ರವರೆಗೆ ಪಾದಯಾತ್ರೆ (BJP Padayatra) ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್.ಅಶೋಕ್, ಶ್ರೀರಾಮುಲು ಹಾಗೂ ಛಲವಾದಿ ನಾರಾಯಣಸ್ವಾಮಿ ಕಹಳೆ ಊದುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ರೈತಗೀತೆಯೊಂದಿಗೆ ಪಾದಯಾತ್ರೆಯ ವೇದಿಕೆ ಕಾರ್ಯಕ್ರಮ ಆರಂಭವಾಯಿತು.
ರಾಜ್ಯದಲ್ಲಿ ದಲಿತ, ರೈತ ವಿರೋಧಿ ಸರ್ಕಾರ: ವಿಜಯೇಂದ್ರ
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಇವತ್ತು ಐತಿಹಾಸಿಕ ಬಿಜೆಪಿ ಪಾದಯಾತ್ರೆ ಲಿಂಗಸುಗೂರಿನಿಂದ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದ ದಿಕ್ಕನ್ನು ಬದಲಿಸುವ ಶಕ್ತಿ ನಮ್ಮ ಪಾದಯಾತ್ರೆಗಿದೆ. ಬಿ.ನಾಗೇಂದ್ರ ರಾಜೀನಾಮೆ ನೀಡಿದರೂ ಯಾಕೆ ಬಿಜೆಪಿಯರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ಡಿಕೆಶಿಯವರು ಪ್ರಶ್ನಿಸಿದ್ದರು. ಆದರೆ, ಈ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ದಲಿತ, ರೈತ, ಯುವಕರ ಹಾಗೂ ಮಹಿಳಾ ವಿರೋಧಿ ಸರ್ಕಾರವಾಗಿದೆ. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರ ಕಿತ್ತೊಗೆಯಲು ಹೋರಾಟ: ಯಡಿಯೂರಪ್ಪ

ಬಿಜೆಪಿ ಪಾದಯಾತ್ರೆಯು 6 ಕೋಟಿ ಕನ್ನಡಿಗರ ಆಶೋತ್ತರದ ಕಹಳೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ಲೇಷಿಸಿದರು. ಬಳ್ಳಾರಿ ಚಲೋ ಪಾದಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರದ ಮದದಲ್ಲಿ ಮೆರೆಯುವ ರೈತ ವಿರೋಧಿ, ಜನವಿರೋಧಿ, ಪ್ರಗತಿವಿರೋಧಿ, ಮಹಿಳಾ ವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಿದ ಈ ಸರಕಾರವನ್ನು ಕಿತ್ತೊಗೆಯುವ ವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಇದೆಯೇ?
ಇದು ಚುನಾವಣಾ ಪ್ರಚಾರದ ಸಭೆ ಅಲ್ಲ; ಭ್ರಷ್ಟ ಕಾಂಗ್ರೆಸ್ ಸರಕಾರ ಕಿತ್ತೊಗೆಯುವ ಸಂಕಲ್ಪದೊಂದಿಗೆ ಹೋರಾಟ ಪ್ರಾರಂಭವಾಗಿದೆ. ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಇದೆಯೇ? ಪ್ರತಿಯೊಂದಕ್ಕೂ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಕಾಲು ಹಿಡಿಯುವ ನೀವು ಮುಖ್ಯಮಂತ್ರಿಯೇ ಎಂದು ಪ್ರಶ್ನಿಸಿದರು. ಇದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುತ್ತದೆಯೇ ಎಂದು ಕೇಳಿದರು.

ಪಾದಯಾತ್ರೆಗೆ ಜನಬೆಂಬಲ ನೀಡಲು ಮನವಿ ಮಾಡಿದ ಅವರು, ಇದು ಹೋರಾಟದ ಮೊದಲ ಹೆಜ್ಜೆ. ಭ್ರಷ್ಟ ಸರಕಾರಕ್ಕೆ ಲೂಟಿ ವಿರುದ್ಧ ಮನವರಿಕೆ ಮಾಡೋಣ ಎಂದು ತಿಳಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಕಾರ್ಯಕ್ರಮ ನಿರೂಪಿಸಿದರು. ಬರ ಪ್ರದೇಶ ಘೋಷಣೆಯಲ್ಲಿ ರಾಜ್ಯ ಸರಕಾರ ಅನ್ಯಾಯ ಮಾಡಿದೆ. ಪರಿಹಾರ ನೀಡುವಲ್ಲಿ ಕ್ರಮ ಕೈಗೊಂಡಿಲ್ಲ; ಪಾದಯಾತ್ರೆಯ ಒಂದೊಂದು ಹೆಜ್ಜೆಯೂ ಬಿಜೆಪಿ ರೈತಪರವಾಗಿದೆ. ಬಿಜೆಪಿ ಹೆಜ್ಜೆಯಲ್ಲಿ ದಲಿತ ಧ್ವನಿಯಿದೆ ಎಂದು ಅವರು ತಿಳಿಸಿದರು.
ಈ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಸವರಾಜ ಎಸ್. ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ರಾಷ್ಟ್ರೀಯ ಉಪಾಧ್ಯಕ್ಷರಾದ ಎಂ. ನಾಗರಾಜ್, ರಾಜ್ಯ ಸಹ ಉಸ್ತುವಾರಿಗಳಾದ ಸುಧಾಕರ್ ರೆಡ್ಡಿ, ಸಂಸದರು, ಶಾಸಕರು ಮತ್ತು ಪ್ರಮುಖರು ಸೇರಿ ಸಾವಿರಾರು ಕಾರ್ಯಕರ್ತರು ಇದ್ದರು.