ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುವ ಭೀತಿಯಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ರಿಲೀಫ್ ನೀಡಿದೆ. ಪಡಿತರ ಚೀಟಿಗಳ ಪರಿಷ್ಕರಣಾ ಕಾರ್ಯವನ್ನು (Ration card verification) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ (Rizwan Arshad) ತಿಳಿಸಿದ್ದಾರೆ.
ಅನರ್ಹ ಪಡಿತರ ಚೀಟಿ, ನಕಲಿ ದಾಖಲೆ ನೀಡಿ ಪಡೆದಿರುವ ರೇಷನ್ ಕಾರ್ಡ್‌ಗಳನ್ನು ಗುರುತಿಸಿ ರದ್ದು ಮಾಡುವ ಪ್ರಕ್ರಿಯೆಯಿಂದಾಗಿ ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ ಜನರ ಹಿತರಕ್ಷಣೆ ಹಾಗೂ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಪರಿಶೀಲನಾ ಕಾರ್ಯಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಅರ್ಹ ಬಡ ಕುಟುಂಬಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಇನ್ನೂ ಸುಮಾರು 2.65 ಕೋಟಿ ಪಡಿತರ ಚೀಟಿಗಳ ಇ-ಕೆವೈಸಿ ಪರಿಶೀಲನೆ ಬಾಕಿ ಉಳಿದಿದೆ. ಈ ಪ್ರಕ್ರಿಯೆ ಸಂಪೂರ್ಣ ಮುಗಿದ ನಂತರವಷ್ಟೇ ಅನರ್ಹ ಕಾರ್ಡ್‌ಗಳ ನಿಖರ ಸಂಖ್ಯೆ ತಿಳಿದುಬರಲಿದೆ. ಆ ಬಳಿಕ ರದ್ದಾಗುವ ಅನರ್ಹ ಕಾರ್ಡ್‌ಗಳ ಸಂಖ್ಯೆಗೆ ಅನುಗುಣವಾಗಿ, ಹೊಸದಾಗಿ ಕಾಯುತ್ತಿರುವ ನೈಜ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ಮರುಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾನದಂಡ ಪರಿಷ್ಕರಣೆ ಬಗ್ಗೆ ಚರ್ಚೆ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಶೇಕಡಾ 65 ರಷ್ಟು ಜನಸಂಖ್ಯೆಗೆ ಬಿಪಿಎಲ್ ವ್ಯಾಪ್ತಿಗೆ ತರಲು ಅವಕಾಶವಿದೆ. ಪ್ರಸ್ತುತ ಹಣದುಬ್ಬರದ ಸಂದರ್ಭದಲ್ಲಿ ಹಳೆಯ ಮಾನದಂಡಗಳನ್ನು ಬದಲಾಯಿಸುವ ಅಗತ್ಯವಿದ್ದು, ರಾಜ್ಯದ ಇನ್ನೂ 50 ಲಕ್ಷ ಅರ್ಹ ಜನರಿಗೆ ಪಡಿತರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲು ಸಚಿವರು ಹೇಳಿದ್ದಾರೆ.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ಶಾಸಕ ಶ್ರೀನಿವಾಸ ಮಾನೆ ನೇಮಕ
ಇನ್ನು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಫುಡ್ ಕಿಟ್ ವಿತರಣೆಯ ಪ್ರಾಥಮಿಕ ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಫಲಾನುಭವಿಗಳಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ.