ಚಿತ್ರದುರ್ಗ: ಐವತ್ತು ವರ್ಷಗಳ ಕಾಲ ನನ್ನನ್ನು ಪ್ರೀತಿಯಿಂದ ಸಲಹಿದ್ದೀರಿ, ಅಭಿಮಾನದಿಂದ ಬೆಳೆಸಿದ್ದೀರಿ, ನನ್ನ ಹೋರಾಟಕ್ಕೆ ಶಕ್ತಿ ನೀಡಿದ್ದೀರಿ, ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಬೆಳಕು ತೋರಿದ್ದೀರಿ. ಹೀಗಾಗಿ ನಾಡಿನ ಜನರ ಋಣ ಎಂದಿಗೂ ತೀರಸಲಾಗದು. ನನ್ನ ಕೊನೆಯ ಉಸಿರಿರುವತನಕ ವಿರಮಿಸುವ ಪ್ರಶ್ನೆಯೇ ಇಲ್ಲ. ನನಗೆ ದೇವರು ಶಕ್ತಿ ಕೊಟ್ಟಿರುವತನಕ ಸಂಘಟನೆ, ಹೋರಾಟವನ್ನು ನಾಡಿಗಾಗಿ, ದೇಶಕ್ಕಾಗಿ, ಪಕ್ಷಕ್ಕಾಗಿ ಮಾಡುವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂಪ್ಪ ಭಾವುಕರಾದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ʼಬಿಎಸ್‌ವೈ ಅಭಿಮಾನೋತ್ಸವದಲ್ಲಿ ಸನ್ಮಾನ ಸ್ವೀಕರಿಸಿದ ಅವರು ಮಾತನಾಡಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುವೆ. ಹಾಗೆಯೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿರುವ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಿಸುವೆ. ಇಂದಿನ ಅಭಿಮಾನೋತ್ಸವ ಕೇವಲ ನನ್ನ ಅಭಿಮಾನೋತ್ಸವ ಅಲ್ಲ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಪಂಚ ರಾಜ್ಯಗಳ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಮಾಡುತ್ತಿರುವ ಸಂಭ್ರಮಾಗಿದೆ ಎಂದು ತಿಳಿಸಿದರು.
ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವ ನಾಡಿನ ಎಲ್ಲ ಸಾಧು ಸಂತರು, ಮಠಾಧೀಶರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ನಮನ ಸಲ್ಲಿಸುವೆ. ತುರ್ತು ಪರಿಸ್ಥಿತಿಯ ಸೆರೆಮನೆಯಿಂದ ಹಿಡಿದು ಸಂಘಟನೆ, ಪ್ರವಾಸ, ಜನರ ನಡುವೆ ಜನರಿಗಾಗಿ ನಡೆಸಿಕೊಂಡುಬಂದ ನಿರಂತರ ಹೋರಾಟಗಳ ಬದುಕೇ ನನಗೆ ಶಕ್ತಿ ನೀಡಿದೆ.
ನಿಮ್ಮ ಯಡಿಯೂರಪ್ಪ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಸಾರ್ವಜನಿಕ ಬದುಕಿಗೆ ಬಂದವನಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಾಗಿ, ಅನಿರೀಕ್ಷಿತ ತಿರುವುಗಳಾಗಿ ನಾನು ನಾಡಿನ ಜನರ ಸೇವೆಗೆ ಸಮರ್ಪಣೆಗೊಂಡವನು. ಬೂಕನಕೆರೆಯಲ್ಲಿ ಜನ್ಮ ತಾಳಿ ಶಿಕಾರಿಪುರವನ್ನು ಕರ್ಮಭೂಮಿಯಾಗಿ ಮಾಡಿಕೊಂಡು, ಸಂಕಷ್ಟದಲ್ಲಿರುವ ರೈತರು, ನೊಂದ ಬಡವರು, ನನ್ನ ತಾಯಂದಿರು, ಸಹೋದರಿಯರ ಕಣ್ಣೀರು ಒರೆಸುವ ಯೋಜನೆಗಳನ್ನು ರೂಪಿಸಿದ್ದೇನೆ. ಲಿಂಗ ಸಮಾನತೆ ಎತ್ತಿ ಹಿಡಿಯಲು, ಹೆಣ್ಣು ಶಿಶುಗಳನ್ನು ರಕ್ಷಿಸಲು ಭಾಗ್ಯಲಕ್ಷ್ಮೀ ಯೋಜನೆ ತಂದಿದ್ದು ನನಗೆ ಸಾರ್ಥಕ ಭಾವ ಮೂಡಿಸಿದೆ. ನನ್ನಿಂದ ಸಾಧ್ಯವಾದಷ್ಟು ಅನ್ನದಾತರ ಕಣ್ಣೀರು ಒರೆಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಸಾರ್ಥಕ ಕ್ಷಣವನ್ನು ಮರೆಯಲಾರೆ. ರೈತರಿಗೆ ಬಡ್ಡಿರಹಿತ ಸಾಲ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ.
ಆರ್‌ಆರ್‌ಎಸ್ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಹೆಮ್ಮಪಡುವೆ
ನನ್ನದು ಹೋರಾಟದ ಜೀವನ. ಹೋರಾಟ ಮತ್ತು ಸಂಘಟನೆಯನ್ನು ತಪಸ್ಸು ಎಂದು ಸ್ವೀಕರಿಸಿದವನು. ಇದಕ್ಕೆ ಮಾರ್ಗದರ್ಶನ ತೋರಿದ್ದು, ನನಗೆ ಸಂಸ್ಕಾರ ನೀಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಹೀಗಾಗಿ ನಾನೊಬ್ಬ ಆರ್‌ಆರ್‌ಎಸ್ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಹೆಮ್ಮಪಡುತ್ತೇನೆ. ಅಧಿಕಾರದ ಬೆನ್ನತ್ತಿ ಹೋರಾಟಕ್ಕಿಳಿಯಲಿಲ್ಲ, ಮುಖ್ಯಮಂತ್ರಿಯಾಗುವ ಕನಸು ಎಂದೂ ಕಂಡಿರಲಿಲ್ಲ. ಆದರೆ, ಪುರಸಭೆಯಿಂದ ವಿಧಾನಸಭೆವರೆಗೆ; ವಿರೋಧಪಕ್ಷದ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನದವರೆಗೆ ತಲುಪಲು ನಾಡಿನ ಜನ ನನ್ನನ್ನು ಬೆಳೆಸಿದರು, ಹರಸಿದರು ಎಂದು ಬಿಎಸ್‌ವೈ ತಿಳಿಸಿದರು.
ಯಡಿಯೂರಪ್ಪ ಇವ ನಮ್ಮವ ಇವ ನಮ್ಮವ ಎಂದು ಜನರು ಪ್ರೀತಿಯಿಂದ ಅಪ್ಪಿ ಆಶೀರ್ವದಿಸಿದ ಪರಿಣಾಮ 50 ವರ್ಷಗಳ ನನ್ನ ರಾಜಕೀಯ ಪಯಣ ಸಾರ್ಥಕವಾಗಿ ಪೂರ್ಣಗೊಳ್ಳಲು ಕಾರಣವಾಗಿದೆ. ಜನರ ಈ ಋಣ ತೀರಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಭಾವುಕರಾದರು.