ಬೆಂಗಳೂರು: ಹಾಲು, ಮೊಸರು, ವಿದ್ಯುತ್ ದರಗಳನ್ನು ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿರುವ ಈ ಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೂ ತೃಪ್ತಿಯಾದಂತಿಲ್ಲ! ಈಗ ಬಸ್ ದರದ (bus fare hike) ಸರದಿ. ಒಂದೆಡೆ ಗ್ಯಾರಂಟಿಗಳನ್ನು ಕೊಟ್ಟಂತೆ ಮಾಡಿ, ಮತ್ತೊಂದೆಡೆ ಬೆಲೆ ಏರಿಕೆಯ ಮೂಲಕ ಎರಡೂ ಕೈಗಳಿಂದ ಜನರ ಜೇಬು ದೋಚುವುದೇ ಈ ಕಾಂಗ್ರೆಸ್ ಸರ್ಕಾರದ ಆಡಳಿತ ಮಂತ್ರವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬೆಂಗಳೂರಿನಲ್ಲಿ ಕನಿಷ್ಠ ಟಿಕೆಟ್ 6 ರೂ. ನಿಂದ 10 ರೂ. ಅಂದರೆ ಸುಮಾರು ಶೇ. 67ರಷ್ಟು ಏರಿಕೆಯಾಗಿದೆ. KSRTC ಯಲ್ಲಿ ಗರಿಷ್ಠ 9 ರೂ. ಏರಿಕೆ, ಒಟ್ಟಾರೆ 4 ರಿಂದ 20 ರೂ.ರವರೆಗೆ ಜನರ ಮೇಲೆ ಹೊರೆ ಹೊರಸಿರುವ ಈ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಸರಿಪಡಿಸಿಕೊಳ್ಳುವುದಿರಲಿ, ಕನಿಷ್ಠ ಮಾನವೀಯತೆಯನ್ನೂ ಕೂಡ ಉಳಿಸಿಕೊಂಡಿಲ್ಲ. ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ ಎಂದು ಸಾರಿಗೆ ಸಚಿವರು ಹೇಳಿರುವುದಾಗಿ ಟೀಕಿಸಿದ್ದಾರೆ.
ದುಡಿಯಲು ಹೊರಡುವ ಕಾರ್ಮಿಕ, ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಆಸ್ಪತ್ರೆಗೆ ಹೊರಡುವ ಬಡ ರೋಗಿಗಳು, ಸಾಮಾನ್ಯ ಜನರು ನಿಮ್ಮ ಕಾಂಗ್ರೆಸ್ ಸರ್ಕಾರದ ಕೆಟ್ಟ ಆರ್ಥಿಕ ನಿರ್ವಹಣೆಗೆ ಬೆಲೆ ತೆರಬೇಕೇ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ?, ಒಂದೆಡೆ ಗ್ಯಾರಂಟಿಗಳನ್ನು ಕೊಟ್ಟಂತೆ ಮಾಡಿ, ಮತ್ತೊಂದೆಡೆ ಬೆಲೆ ಏರಿಕೆಯ ಮೂಲಕ ಎರಡೂ ಕೈಗಳಿಂದ ಜನರ ಜೇಬು ದೋಚುವುದೇ ಈ ಕಾಂಗ್ರೆಸ್ ಸರ್ಕಾರದ ಆಡಳಿತ ಮಂತ್ರವಾಗಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣವನ್ನೂ ದುಬಾರಿಯಾಗಿಸಿರುವ ಸರ್ಕಾರ, ಜನಸಾಮಾನ್ಯರ ದಿನನಿತ್ಯದ ಬದುಕನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ.
ಈ ರೀತಿ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಸುತ್ತಾ ಜನರ ಜೀವನವನ್ನೇ ದುಸ್ತರ ಮಾಡಿರುವ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ಜನಾಕ್ರೋಶವನ್ನು ಎದುರಿಸುವ ದಿನ ದೂರವಿಲ್ಲ! ಮೊದಲು ಸಾರಿಗೆ ನಿಗಮಗಳ ನಷ್ಟದ ಪೂರ್ಣ ಲೆಕ್ಕವನ್ನು ಜನರ ಮುಂದಿಡಿ, ಈ ದರ ಏರಿಕೆಯನ್ನು ತಕ್ಷಣ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಬೃಹತ್ ಪಾದಯಾತ್ರೆ
ಚಿತ್ರದುರ್ಗ: ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ದೇಶವಿರೋಧಿ ನಿಲುವು ಮತ್ತು ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ, ಇಂದು ಐತಿಹಾಸಿಕ ಕೋಟೆ ನಗರಿ ಚಿತ್ರದುರ್ಗದಲ್ಲಿ ಪಕ್ಷದ ವತಿಯಿಂದ 'ಪ್ರಜಾತಂತ್ರ ಉಳಿಸಿ - ಅರಾಜಕತೆ ಅಳಿಸಿ' ಬೃಹತ್ ಪಾದಯಾತ್ರೆ ಆಯೋಜಿಸಲಾಗಿತ್ತು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳಾದ ಹರೀಶ್ ದ್ವಿವೇದಿ ರವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿದ್ದ ನಮ್ಮ ಕಾರ್ಯಕರ್ತರ ಜೊತೆಗೆ ಹರಿದುಬಂದ ಜನಸಾಗರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧದ ಜನಾಕ್ರೋಶ ಮತ್ತು ದೇಶದಲ್ಲಿ ಅರಾಜಕತೆಗೆ ಅಂತ್ಯ ಹಾಡಲು ಜನತೆ ಸಜ್ಜಾಗಿರುವುದಕ್ಕೆ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಹೇಳಿದ್ದಾರೆ.
ಈ ಬೃಹತ್ ಪಾದಯಾತ್ರೆಯಲ್ಲಿ ಮಾಜಿ ಉಪಮುಖ್ಯಮಂತ್ರಿಗಳು, ಸಂಸದರಾದ ಶ್ರೀ ಗೋವಿಂದ ಕಾರಜೋಳ, ಮಾಜಿ ಶಾಸಕರು, ಹಿರಿಯರಾದ ಶ್ರೀ ಜಿ. ಹೆಚ್. ತಿಪ್ಪಾರೆಡ್ಡಿ, ಶಾಸಕರುಗಳಾದ ಶ್ರೀ ಚಂದ್ರಪ್ಪ, ಶ್ರೀ ಸುರೇಶ್ ಗೌಡ, ಶ್ರೀ ಜ್ಯೋತಿ ಗಣೇಶ್, ಮಾಜಿ ಸಚಿವರುಗಳಾದ ಶ್ರೀ ಬಿ.ಶ್ರೀರಾಮುಲು, ಶ್ರೀ ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಎನ್. ರವಿಕುಮಾರ್, ಶ್ರೀ ಕೆ.ಎಸ್.ನವೀನ್, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಶ್ರೀ ಕೆ.ಟಿ.ಕುಮಾರಸ್ವಾಮಿ, ದಾವಣಗೆರೆ ಜಿಲ್ಲಾಧ್ಯಕ್ಷರಾದ ಶ್ರೀ ನಾಗರಾಜ್ ಮೆಲ್ಲಕಟ್ಟೆ, ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀ ರವಿ ಹೆಬ್ಬಾಕ ಸೇರಿದಂತೆ ಹಲವಾರು ಪ್ರಮುಖರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.