ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಾಸಕರ ಖರೀದಿ, ಕುದುರೆ ವ್ಯಾಪಾರ ಮಾಡೋದು ಬಿಜೆಪಿ ಸಂಸ್ಕೃತಿ: ಡಿ.ಕೆ. ಶಿವಕುಮಾರ್ ತಿರುಗೇಟು

DK Shivakumar: ಕಾಂಗ್ರೆಸ್ ಶಾಸಕರನ್ನು ಕಾಂಗ್ರೆಸ್ ಪಕ್ಷದ ನಾಯಕರೇ ಖರೀದಿ ಮಾಡುವ ಪರಿಸ್ಥಿತಿ ಬಂದಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಲಾಗಿದೆ ಎಂದು ಅವರದೇ ಪಕ್ಷದ ನಾಯಕರು ಬಹಿರಂಗ ಹೇಳಿಕೆ ನೀಡಿದ್ದಾರೆ. ಶಾಸಕರ ಖರೀದಿ ಬಿಜೆಪಿಯವರ ಪ್ರವೃತ್ತಿ ಎಂದು ಕಿಡಿಕಾರಿದ್ದಾರೆ.

ಶಿಡ್ಲಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌.

ಶಿಡ್ಲಘಟ್ಟ, ನ.24: “ಶಾಸಕರ ಖರೀದಿ ಹಾಗೂ ಕುದುರೆ ವ್ಯಾಪಾರ ಬಿಜೆಪಿ ಸಂಸ್ಕೃತಿ” ಎಂದು ಕಮಲ ನಾಯಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿರುಗೇಟು ನೀಡಿದರು. ಕಾಂಗ್ರೆಸ್ ಶಾಸಕರನ್ನು ಕಾಂಗ್ರೆಸ್ ಪಕ್ಷದ ನಾಯಕರೇ ಖರೀದಿ ಮಾಡುವ ಪರಿಸ್ಥಿತಿ ಬಂದಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಶಿಡ್ಲಘಟ್ಟದಲ್ಲಿ ಡಿಸಿಎಂ ಸೋಮವಾರ ಪ್ರತಿಕ್ರಿಯೆ ನೀಡಿದರು.

ಈ ಹಿಂದೆ ಬಿಜೆಪಿ ಸರ್ಕಾರ ರಚನೆಯಾದಾಗ ಅವರು ಎಷ್ಟು ಸಾವಿರ ಕೋಟಿ ಖರ್ಚು ಮಾಡಿದ್ದರು. ಮುಖ್ಯಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಬೇಕಾಗಿತ್ತು, ಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಲಾಗಿದೆ ಎಂದು ಅವರದೇ ಪಕ್ಷದ ನಾಯಕರು ಬಹಿರಂಗ ಹೇಳಿಕೆ ನೀಡಿದ್ದಾರೆ. ಅವರು ಎಷ್ಟು ಹಣ ಆಮಿಷ ಒಡ್ಡಿದ್ದರು ಎಂದು ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದ್ದು, ದಾಖಲೆಗಳಲ್ಲಿ ಸೇರಿವೆ. ಈಗ ಬಿಜೆಪಿಯವರು ತಮ್ಮ ಪ್ರವೃತ್ತಿಯನ್ನು ನೆನೆಸಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.

ಹೈಕಮಾಂಡ್ ಹೇಳಿದ್ದನ್ನು ನಾನು, ಶಿವಕುಮಾರ್ ಸೇರಿದಂತೆ ಎಲ್ಲರೂ ಒಪ್ಪಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಹೇಳಿದ ಮೇಲೆ ಅದೇ ನಮಗೆ ವೇದವಾಕ್ಯ ಎಂದು ತಿಳಿಸಿದರು.

ಇದನ್ನೂ ಓದಿ: ಹೈಕಮಾಂಡ್ ಮಾತಿಗೆ ಸಿಎಂ ಮತ್ತು ನಾನು ಬದ್ಧ: ಡಿಕೆಶಿ

ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದ ಸಿಎಂ

CM Siddaramaiah

ಬಿಜೆಪಿಯವರು ನಮ್ಮ ಸರ್ಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. 2,000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೆಚ್ಚ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುತ್ತಿದ್ದೇವೆ. ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಬಿಟ್ಟರೆ ಬೇರೇನೂ ಹೇಳಲು ಬರುವುದಿಲ್ಲ. ಸುಳ್ಳೇ ಅವರ ಮನೆ ದೇವರು ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗಿದೆ. ನಾವು ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿದ್ದೆವು, ಅದರಂತೆ ನಡೆದಿದ್ದೇವೆ. ಸರ್ಕಾರದಲ್ಲಿ ಯಾವುದೇ ಬದಲಾವಣೆ ಮಾಡುವ ಸಂಬಂಧ ನಮ್ಮಲ್ಲಿ ಹೈಕಮಾಂಡ್‌ನವರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಹಾಗೂ ಡಿ.ಕೆ.ಶಿವಕುಮಾರ್ ಒಪ್ಪಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್‌ ಮನೆಗೆ ನಾಗಾ ಸಾಧುಗಳ ಭೇಟಿ

ಹೈಕಮಾಂಡ್ ಅನ್ನು ಐದು ತಿಂಗಳ ಹಿಂದೆ ಭೇಟಿಯಾದಾಗ ಸಚಿವ ಸಂಪುಟ ಪುನರ್ ರಚನೆ ಮಾಡಲು ಸೂಚನೆ ನೀಡಿದ್ದರು. ನಾನು ಎರಡೂವರೆ ವರ್ಷ ತುಂಬಿದ ನಂತರ ಮಾಡೋಣ ಎಂದು ತಿಳಿಸಿದ್ದೆ. ಈಗ ಏನು ಸೂಚನೆ ನೀಡುತ್ತಾರೋ ಅದರಂತೆ ನಡೆಯುತ್ತೇನೆ ಎಂದು ಹೇಳಿದರು.