ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BY Vijayendra: ಬೆಲೆ ಏರಿಕೆ ಗ್ಯಾರಂಟಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ ಕಿಡಿ

BY Vijayendra: ಒಂದೆಡೆ ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ. ಇನ್ನೊಂದೆಡೆ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ನಾಡಿನ ಜನರ, ಕೃಷಿಕರ, ಬಡವರ ಕಣ್ಣೀರನ್ನು ಒರೆಸಬೇಕಿದ್ದ ಬಜೆಟ್, ಆ ನಿರೀಕ್ಷೆಗಳನ್ನು ಸಾಕಾರಗೊಳಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ.

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು (Congress Government) ಬೆಲೆ ಏರಿಕೆಯ ಗ್ಯಾರಂಟಿಯನ್ನು ಬಹಳ ಯಶಸ್ವಿಯಾಗಿ ಜಾರಿಗೊಳಿಸಿದೆ. ಈ ಸರ್ಕಾರವು ಬೆಲೆ ಏರಿಕೆಯನ್ನು ನಿರಂತರವಾಗಿ ಮಾಡುತ್ತಿದೆ. ವಿದ್ಯುತ್ ದರ, ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ನೀರಿನ ದರ ಎರಡನೇ ಬಾರಿಗೆ ಹೆಚ್ಚಿಸಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ. ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿರುವ ಅವರು, ಒಂದೆಡೆ ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ. ಇನ್ನೊಂದೆಡೆ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ನಾಡಿನ ಜನರ, ಕೃಷಿಕರ, ಬಡವರ ಕಣ್ಣೀರನ್ನು ಒರೆಸಬೇಕಿದ್ದ ಬಜೆಟ್, ಆ ನಿರೀಕ್ಷೆಗಳನ್ನು ಸಾಕಾರಗೊಳಿಸಿಲ್ಲ ಎಂದು ಟೀಕಿಸಿದ್ದಾರೆ.

ರಾಜ್ಯದ ಬಜೆಟ್ ಕುರಿತು ಅಧಿವೇಶನದಲ್ಲಿ ಚರ್ಚೆ ಆರಂಭವಾಗಿದೆ. ನಾನು ಕೂಡ ಬಜೆಟ್ ಬಗ್ಗೆ ಚರ್ಚೆ ಆರಂಭಿಸಿದಾಗ ಆಡಳಿತ ಪಕ್ಷದ ಸದಸ್ಯರು, ಅಧಿಕಾರಿಗಳು ಇರಲಿಲ್ಲ. ಹಾಗಾಗಿ ಮಾತು ಮೊಟಕುಗೊಳಿಸಿದೆ. ಸೋಮವಾರ ಅಥವಾ ಮಂಗಳವಾರ ಮಾತನಾಡಲಿದ್ದೇನೆ ಎಂದರು.

ತಮಿಳುನಾಡಿನ ರಾಜಕಾರಣವು ಕೇಂದ್ರ ವಿರೋಧಿ ನೀತಿ ಅನುಸರಿಸುತ್ತ ಬಂದಿದೆ. ಹಲವಾರು ದಶಕಗಳಿಂದ ಇದನ್ನು ನೋಡುತ್ತ ಬರುತ್ತಿದ್ದೇವೆ. ರೂಪಾಯಿಯನ್ನು ತಮಿಳು ಭಾಷೆಯಲ್ಲಿ ಬರೆಯುವ ಮೂಲಕ ಇದೊಂದು ಹೊಸ ಅಧ್ಯಾಯ ಪ್ರಾರಂಭಿಸಿದ್ದಾರೆ. ಈ ಬೆಳವಣಿಗೆ ದೇಶಕ್ಕೆ ಮಾರಕ. ರಾಷ್ಟ್ರೀಯ ಶಿಕ್ಷಣ ನೀತಿ ವಿಷಯದಲ್ಲೂ ಇದೇ ಧೋರಣೆಯನ್ನು ರಾಜ್ಯದ ಸರ್ಕಾರ, ತಮಿಳುನಾಡಿನ ಸರ್ಕಾರಗಳು ಅನುಸರಿಸುತ್ತಿವೆ. ಡಿ ಲಿಮಿಟೇಶನ್ ವಿಚಾರದಲ್ಲೂ ಕೇಂದ್ರದ ಗೃಹ ಸಚಿವರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ದೇಶದ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಒನ್ ನೇಶನ್ ಒನ್ ಎಲೆಕ್ಷನ್ ಬಗ್ಗೆ ಆಲೋಚಿಸಿದ್ದಾರೆ. ಡಿ ಲಿಮಿಟೇಶನ್ ವಿಚಾರ ಮುಂದಿಟ್ಟು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದು, ನಮ್ಮ ರಾಜ್ಯದ ಮುಖ್ಯಮಂತ್ರಿಗಳೂ ಅದಕ್ಕೆ ಧ್ವನಿಗೂಡಿಸುವುದು ವಿಪರ್ಯಾಸ ಎಂದು ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿಗಳಿಗೆ ನೈಜ ಕಳಕಳಿ ಇದ್ದರೆ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಅಲ್ಲಿನ ಮುಖ್ಯಮಂತ್ರಿಗಳ ಮನ ಒಲಿಸುವ ಪ್ರಯತ್ನವನ್ನು ಮಾಡಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ತಮಿಳುನಾಡಿನ ಸಚಿವರು ಬಂದಾಗ ಅವರಿಗೆ ರಾಜಾತಿಥ್ಯ ನೀಡಿದ್ದಾರೆ. ಆದರೆ, ನಮ್ಮ ಮುಖ್ಯಮಂತ್ರಿಗಳು ಮತ್ತು ಸರ್ಕಾರವು ಕಾವೇರಿ ಕೊಳ್ಳದಿಂದ ತಮಿಳುನಾಡಿಗೆ ನೀರು ಹರಿಸುವ ಕುರಿತು ಮಾತನಾಡಿಲ್ಲ ಎಂದು ಆರೋಪಿಸಿದರು.

ಡಿ ಲಿಮಿಟೇಶನ್ ವಿಚಾರದಲ್ಲಿ ತಮಿಳುನಾಡಿನ ಸರ್ಕಾರ ದೇಶವಿರೋಧಿ ನಡೆ ಅನುಸರಿಸುತ್ತಿದೆ. ಅದಕ್ಕೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವನಿಗೂಡಿಸುವುದು ನಿಜಕ್ಕೂ ದುರ್ದೈವ ಎಂದರು.

ಈ ಸುದ್ದಿಯನ್ನೂ ಓದಿ | Basavaraj Bommai: ಕರ್ನಾಟಕದ ರೈತರು ಬೆಳೆದ ಮೆಣಸಿನಕಾಯಿ ಖರೀದಿಸಲು ಕೇಂದ್ರ ಸಚಿವರಿಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ

ಸಿದ್ದರಾಮಯ್ಯ ಅವರು ಕೇಂದ್ರದ ಜತೆ ರಾಜಕೀಯ ಸಂಘರ್ಷಕ್ಕೆ ಇಳಿದಿದ್ದಾರೆ. ಇದರಿಂದ ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳಬಹುದು. ಆದರೆ, ಇದು ರಾಜ್ಯದ ಜನತೆಗೆ ಮಾರಕ ಎಂದರಲ್ಲದೆ, ಈಚೆಗೆ ಜಮ್ಮು- ಕಾಶ್ಮೀರದ ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಶ್ಲಾಘನೆ ಮಾಡಿದ್ದಾರೆ. ಇವತ್ತು ಪ್ರಧಾನಿ ಮತ್ತು ಹಣಕಾಸು ಸಚಿವೆ ಮಧ್ಯಸ್ಥಿಕೆಯಿಂದಾಗಿ ಜಮ್ಮು- ಕಾಶ್ಮೀರಕ್ಕೆ ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತಿದೆ ಎಂದಿದ್ದಾರೆ. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಯಾಕೆ ಈ ರೀತಿ ಕೇಂದ್ರ ಸರ್ಕಾರದ ಜತೆಗೆ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ? ಅದರಿಂದ ರಾಜ್ಯಕ್ಕೆ ಯಾವ ರೀತಿ ಒಳಿತಾಗಲು ಸಾಧ್ಯ ಎಂದ ಅವರು, ಇದನ್ನೂ ಸದನದಲ್ಲಿ ಮಾತನಾಡುವುದಾಗಿ ತಿಳಿಸಿದರು.

ಇದೇ ವೇಳೆ ನಾಡಿನ ಜನತೆಗೆ ಬಣ್ಣದ ಹಬ್ಬ ಹೋಳಿಯ ಶುಭಾಶಯಗಳನ್ನು ವಿಜಯೇಂದ್ರ ಕೋರಿದರು. ನಾಡಿನ ಬೆನ್ನೆಲುಬಾದ ರೈತರ ಬದುಕು ಹಸನಾಗಲಿ. ಎಲ್ಲ ಜನತೆಗೆ ಒಳಿತಾಗಲಿ ಎಂದು ಹಾರೈಸಿದರು.