ಬೆಂಗಳೂರು, ಸೆ.23: ರಾಜ್ಯದ ಕಾಂಗ್ರೆಸ್ ಸರ್ಕಾರವು ಸಾಲದ ಸುಳಿಯಲ್ಲಿ ಸಿಲುಕಿ ದಿವಾಳಿಯ ಅಂಚಿಗೆ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ. ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರ 26 ಸಾವಿರ ಕೋಟಿ ರೂಪಾಯಿ ಎಂದರೆ ಸುಮಾರು ಎರಡು ಲಕ್ಷವರೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ರೈತರ ಕೃಷಿ ಸಾಲವನ್ನು ಮನ್ನಾ ಮಾಡಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಕೂಡ 5 ಲಕ್ಷ ರೂಪಾಯಿವರೆಗೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಪ್ರತಿ ಹೆಕ್ಟೇರಿಗೆ 50,000 ರೂಪಾಯಿ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಸಂಕಷ್ಟಕ್ಕೆ ಸ್ಪಂದಿಸಿ
ಏಳು ತಾಸುಗಳ ತ್ರಿಫೇಸ್ ವಿದ್ಯುತ್‌ನ್ನು ಕೊಡೋದಕ್ಕೆ ರಾಜ್ಯ ಸರ್ಕಾರದ ಕಡೆಯಿಂದ ಆಗುತ್ತಿಲ್ಲ. ಇದರಿಂದ ರೈತರು ಇಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹಿಂದೆ ಕಡಿಮೆ ದರಕ್ಕೆ ಸಿಗುತ್ತಿದ್ದ ವಿದ್ಯುತ್, ಇದೀಗ ಯೂನಿಟ್‌ಗೆ 14, 15 ರೂಪಾಯಿ ಕೊಟ್ಟು ಖರೀದಿ ಮಾಡುವ ಸ್ಥಿತಿ ಇದೆ ಎಂದ ಅವರು, ರಾಜ್ಯ ಸರ್ಕಾರವೇ ಇಂಥ ಸ್ಥಿತಿ ನಿರ್ಮಾಣ ಮಾಡಿಕೊಂಡಿದೆ ಎಂದು ಟೀಕಿಸಿದರು. ರಾಜ್ಯದ ರೈತರ ಸಂಕಷ್ಟವನ್ನ ಸದನದಲ್ಲಿ ಚರ್ಚೆ ಮಾಡಬೇಕು. ಕೇವಲ ಚರ್ಚೆ ಮಾಡುವಂತದ್ದು ಅಷ್ಟೇ ಅಲ್ಲ ಸಂಕಷ್ಟದಲ್ಲಿ ಇರುವಂತ ರೈತರಿಗೆ ಪರಿಹಾರವನ್ನು ಕೊಡಿಸಬೇಕು ಎಂದು ಆಗ್ರಹಿಸಿದರು.
ರೈತರ ಸಾಲ ಮನ್ನಾ ಇರಬಹುದು, ಪ್ರತಿ ಹೆಕ್ಟೇರಿಗೆ 50,000 ರೂಪಾಯಿ ಪರಿಹಾರ ಕೊಡುವಂತದ್ದು ಆಗಲಿ ನಿರಂತರವಾಗಿ ಮೂರು ತ್ರೀಫೇಸ್ ವಿದ್ಯುತ್ತನ್ನು ಏಳೆಂಟು ತಾಸುಗಳ ಕಾಲ ಕೊಡಬೇಕು. ರೈತರಿಗೆ ಹೈನುಗಾರಿಕೆ ಸಹಾಯಧನ ಕೊಡಬೇಕು. ಇಂದು 5 ರೂಪಾಯಿ ಕೊಡುತ್ತಿದ್ದು, ಹಳೆ ಬಾಬ್ತನ್ನೂ ರೈತರಿಗೆ ಕೊಡಬೇಕು. 5 ರೂಪಾಯಿ ಇರುವುದನ್ನು ಎಂಟು ರೂಪಾಯಿಗೆ ಏರಿಸಬೇಕು ಎಂದು ಒತ್ತಾಯಿಸಿದರು.
ಮೆಕ್ಕೆ ಜೋಳದ ಬಾಕಿ ಕೊಡಿ
ಉತ್ತರ ಕರ್ನಾಟಕದಲ್ಲಿ ಎಂ.ಎಸ್.ಪಿ ದರದಲ್ಲಿ ಮೆಕ್ಕೆಜೋಳ ಖರೀದಿ ಮಾಡಿದ ರಾಜ್ಯ ಸರ್ಕಾರ, ನೂರಾರು ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ. ರಾಯಚೂರು ಜಿಲ್ಲೆಯಲ್ಲಿಯೇ ಸುಮಾರು 100-150 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಅದನ್ನು ನೀಡುವಂತೆ ಒತ್ತಾಯಿಸಿದರು.
ಕುಸಿದಿದೆ ಆರ್ಥಿಕ ಪರಿಸ್ಥಿತಿ
ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮುಖ್ಯಮಂತ್ರಿಗಳು ಮೊನ್ನೆ ದಕ್ಷಿಣ ಕನ್ನಡಕ್ಕೆ ಹೋಗಿ 32 ಸಾವಿರ ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದರು. ಆದರೆ ಎಲ್ಲಿಂದ ದುಡ್ಡು ತರಿಸುತ್ತೇವೆ ಅಂತ ಎಲ್ಲೂ ಕೂಡ ಮುಖ್ಯಮಂತ್ರಿಗಳು ಹೇಳಲಿಲ್ಲ ಎಂದು ಟೀಕಿಸಿದರು. ಸದ್ಯ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾಗಿದೆ. ಬಜೆಟ್‍ನಲ್ಲಿ ಸೇರಿಸಿದ ಮತ್ತು ಹಣವನ್ನು ಮೀಸಲಿಡದ ಸಾವಿರಾರು ಕೋಟಿ ರೂಪಾಯಿಗಳ ಬೇಡಿಕೆ ಇರುವ ಯೋಜನೆಯನ್ನು ಪ್ರಾರಂಭಿಸುವುದರಿಂದ ನಗದು ಹರಿವು ಮತ್ತು ವಿತ್ತೀಯ ನಿರ್ವಹಣೆಯಲ್ಲಿ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಹಣಕಾಸು ಇಲಾಖೆ ತಿಳಿಸಿದ್ದನ್ನು ಗಮನಕ್ಕೆ ತಂದರು.
ಸಾಲದ ಸಾಮರ್ಥ್ಯ ಸಂಪೂರ್ಣ ಬಳಕೆ
ಇವತ್ತು ಬಜೆಟ್ ಘೋಷಣೆಗಳನ್ನು ಪೂರೈಸಲು ಕರ್ನಾಟಕದ ರಾಜ್ಯವು ತನ್ನ ಸಾಲ ಮಾಡುವ ಸಾಮರ್ಥ್ಯವನ್ನು ಈಗಾಗಲೇ ಸಂಪೂರ್ಣವಾಗಿ ಬಳಸಿಕೊಂಡಿದೆ. ಆದ್ದರಿಂದ ಈ ಪ್ರಮಾಣದ ಹೊಸ ಯೋಜನೆಗಳಿಗೆ ಹಣಕಾಸು ಒದಗಿಸಲು ರಾಜ್ಯಕ್ಕೆ ಹೆಚ್ಚು ಸಾಲ ಮಾಡುವ ಅವಕಾಶವೇ ಇಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದ್ದಾಗಿ ವಿವರಿಸಿದರು.
ಕೇಂದ್ರಕ್ಕೆ ಪತ್ರ ಬರೆಯುವ ಷಡ್ಯಂತ್ರ
ಒಂದು ಕಡೆ ಭೀಕರ ಬರ ಇದೆ. ಭೀಕರ ಬರದ ಸಂದರ್ಭದಲ್ಲಿ ಪರಿಹಾರ ಕೊಡಬೇಕಿದೆ. ಆದರೆ, ಮುಖ್ಯಮಂತ್ರಿಗಳು ಕೇವಲ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೈ ತೊಳದುಕೊಳ್ಳತಕ್ಕಂತ ಷಡ್ಯಂತ್ರ ಕುತಂತ್ರ ಮಾಡುವಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
BJP Protest: ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಸಿಎಂಗೆ ಬಿ.ವೈ. ವಿಜಯೇಂದ್ರ ಆಗ್ರಹ
ರಸ್ತೆ ಅಭಿವೃದ್ಧಿಯೂ ಮರೀಚಿಕೆ
ಮುಖ್ಯಮಂತ್ರಿಗಳು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ ಪಡಿಸುತ್ತೇವೆ ಅಂತ ಹೇಳಿದ್ದರು. ಇದು ಕೂಡ ಆಗುವ ಭರವಸೆ ಇಲ್ಲ. ಮುಖ್ಯಮಂತ್ರಿಗಳೇ ನಿಮಗೆ ಯಾವುದೇ ಹೊಸ ಯೋಜನೆಗಳಿಗೆ ನಾವು ಹಣ ಕೊಡೋದಕ್ಕೆ ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಪದೇ ಪದೇ ಬಹಳ ಸ್ಪಷ್ಟವಾಗಿ ಹೇಳುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಮತ್ತು ಶಾಸಕ ಅರಗ ಜ್ಞಾನೇಂದ್ರ, ವಿಧಾನಸಭೆಯ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಎಚ್. ಪಾಟೀಲ್, ಶಾಸಕರಾದ ಬಿ. ಸುರೇಶ್ ಗೌಡ, ಡಾ. ವೈ. ಭರತ್ ಶೆಟ್ಟಿ, ಮಹೇಶ್ ಟೆಂಗಿನಕಾಯಿ ಇದ್ದರು.