ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಂಗ್ರೆಸ್ ಸರ್ಕಾರದ ಕಳ್ಳಾಟ ತೆರೆದಿಟ್ಟ ಸಿಎಜಿ ವರದಿ: ಪ್ರಲ್ಹಾದ್‌ ಜೋಶಿ

Pralhad Joshi: ಗೃಹಲಕ್ಷ್ಮಿ ಯೋಜನೆಯಲ್ಲಿ 19,020 ಫಲಾನುಭವಿಗಳಿಗೆ ಕೇವಲ ಒಂದೇ ಒಂದು ಬ್ಯಾಂಕ್ ಖಾತೆ ಜೋಡಿಸಿ, ಜಂಟಿಯಾಗಿ ಕೋಟಿ ಕೋಟಿ ಹಣ ವರ್ಗಾವಣೆ ಮಾಡಿರುವುದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಮಾವಧಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ)

ನವದೆಹಲಿ, ಜೂ.23: ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಕಳ್ಳಾಟವನ್ನು ಸಿಎಜಿ ವರದಿಯೇ ಬಿಚ್ಚಿಟ್ಟಿದೆ. ಜನರ ಹಣವನ್ನು ಹೇಗೆ ರಾಜಾರೋಷವಾಗಿ ಲೂಟಿ ಮಾಡುತ್ತಿದೆ ಎಂಬುದಕ್ಕಿದು ಸ್ಪಷ್ಟ ನಿದರ್ಶನ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆರೋಪಿಸಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಆ ಯೋಜನೆಗಳನ್ನು ಜನಹಿತಕ್ಕಿಂತ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದೆ. ಅಲ್ಲದೆ, ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆಯನ್ನೇ ಹಾಳುಗೆಡವಿದೆ ಎಂದು ದೂರಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ 19,020 ಫಲಾನುಭವಿಗಳಿಗೆ ಕೇವಲ ಒಂದೇ ಒಂದು ಬ್ಯಾಂಕ್ ಖಾತೆ ಜೋಡಿಸಿ, ಜಂಟಿಯಾಗಿ ಕೋಟಿ ಕೋಟಿ ಹಣ ವರ್ಗಾವಣೆ ಮಾಡಿರುವುದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಮಾವಧಿ ಎಂದು ಖಂಡಿಸಿದ್ದಾರೆ.

ಬ್ಯಾಂಕ್ ಖಾತೆಯ ಕನಿಷ್ಠ ವಿವರಗಳೇ ಇಲ್ಲದ 23,262 ಖಾತೆಗಳಿಗೆ ಬರೋಬ್ಬರಿ ₹46.52 ಕೋಟಿ ಪಾವತಿಸಿರುವುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಸಮರ್ಪಕ ಪರಿಶೀಲನೆ ನಡೆಸದೆ, ಕಟ್ಟುನಿಟ್ಟಿನ ನಿಯಮಗಳನ್ನೂ ಪಾಲಿಸದೆ ಹಣ ಜಮೆ ಮಾಡಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ದೂರಿದ್ದಾರೆ.

ಘನತ್ಯಾಜ್ಯದಿಂದ ʼಹಸಿರು ಇದ್ದಿಲುʼ ಉತ್ಪಾದನಾ ಘಟಕ ಹುಬ್ಬಳ್ಳಿಯಲ್ಲಿ ಶೀಘ್ರ ಆರಂಭ: ಜೋಶಿ

ಯಾವುದೇ ನೀತಿ- ನಿಯಮಗಳನ್ನು ರಚಿಸಿಕೊಳ್ಳದೇ ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಗ್ಯಾರಂಟಿಗಳನ್ನು ತಂದು ಇದೀಗ ಇಡೀ ರಾಜ್ಯವನ್ನೇ ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ. ಇತ್ತ ಜನರಿಗೂ ಸರಿಯಾಗಿ ಹಣ ಜಮಾ ಮಾಡದೆ ಮಹಾ ವಂಚನೆ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದಿದ್ದಾರೆ.