ನವದೆಹಲಿ, ಜು.16: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆಯ ಕಾರಣ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರ (Central Government) ರೈತರಿಗೆ ಬೆಳೆ ವಿಮೆ ನೋಂದಣಿ ಅವಧಿಯನ್ನು 15 ದಿನಗಳ ಕಾಲ ವಿಸ್ತರಿಸಿ ನೆರವಾಗಿದೆ. ರಾಜ್ಯದ ಧಾರವಾಡ, ಗದಗ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ ಅನ್ವಯಿಸಲಿದೆ. ಜುಲೈ 15ರವರೆಗೆ ಇದ್ದ ಕಾಲಮಿತಿಯನ್ನು ಜುಲೈ 31ರವರೆಗೆ ವಿಸ್ತರಿಸುವ ಮೂಲಕ ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗದ ಈ ನಾಲ್ಕು ಜಿಲ್ಲೆಗಳ ರೈತರ ನೆರವಿಗೆ ಧಾವಿಸಿದೆ.
ಈ ಜಿಲ್ಲೆಗಳಲ್ಲಿ ರೈತರು ಮಳೆ ಕೊರತೆಯಿಂದಾಗಿ ಭಿನ್ನ-ವಿಭಿನ್ನ ಬೆಳೆ ಬಿತ್ತನೆ ಮಾಡಿದ್ದು, ಇದರಿಂದಾಗಿ ಬೆಳೆ ವಿಮೆ ಪಾವತಿಸುವಲ್ಲಿ ತಾಂತ್ರಿಕ ತೊಂದರೆ ಎದುರಿಸುತ್ತಿದ್ದರು. ಇದನ್ನು ಮನಗಂಡು ಸಚಿವ ಪ್ರಲ್ಹಾದ್ ಜೋಶಿ ಅವರು ಈ ಭಾಗದ ರೈತರ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಅವರೊಂದಿಗೆ ಚರ್ಚಿಸಿ ಮನವಿ ಮಾಡಿದ್ದರು.
ಈ ಜಿಲ್ಲೆಗಳಲ್ಲಿ ಮಳೆ ಅಭಾವ ಬೆಳೆ ವಿಮೆ ನೋಂದಣಿಗೆ ರೈತರಿಗಾಗುತ್ತಿರುವ ತೊಂದರೆ-ತೊಡಕು ಬಗ್ಗೆ ಶಾಸಕರಾದ ಸಿ.ಸಿ. ಪಾಟೀಲ್, ಎಂ.ಆರ್. ಪಾಟೀಲ್ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ರೈತರೂ ಸಹ ಜೋಶಿ ಅವರ ಗಮನ ಸೆಳೆದಿದ್ದರು. ಈ ಹಿನ್ನಲೆಯಲ್ಲಿ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದರು.
ಅಂತೆಯೇ ಜು.15ರಂದು ರಾಜ್ಯ ಸರ್ಕಾರದ ಕೃಷಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ತಕ್ಷಣವೇ ಸ್ಪಂದಿಸಿದ್ದಾರೆ. ವಿಮೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ರೈತರ ಹಿತದೃಷ್ಟಿಯಿಂದ ಬೆಳೆ ವಿಮೆ ನೋಂದಣಿ ದಿನಾಂಕವನ್ನು ಜುಲೈ 31ರವರೆಗೆ ವಿಸ್ತರಿಸಿದ್ದಾರೆ. ಪ್ರಸ್ತಾವನೆ ಸಲ್ಲಿಸಿದ ಕೇವಲ 24 ಗಂಟೆಯೊಳಗೆ ಕೇಂದ್ರ ಸರ್ಕಾರ ಈ ವಿಶೇಷ ಅನುಮೋದನೆ ನೀಡಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಮಳೆ ಕೊರತೆ ಹಾಗೂ ತಾಂತ್ರಿಕ ತೊಂದರೆಗಳಿಂದ ಬೆಳೆ ವಿಮೆ ಮಾಡಿಸಲಾಗದ ರೈತರ ಹಿತರಕ್ಷಣೆಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಜಿಲ್ಲೆಗಳ ಅರ್ಹ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೋರಿದ್ದಾರೆ.