ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Indian Standard Time: ದೇಶಾದ್ಯಂತ ʼಭಾರತೀಯ ಪ್ರಮಾಣಿತ ಸಮಯʼ ಅನುಸರಣೆಗೆ ಸಿದ್ಧತೆ; ಕೇಂದ್ರದಿಂದ ಅಧಿಸೂಚನೆ

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಇದೇ ಆಗಸ್ಟ್ 27ರಂದು ʼಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು-2026ʼ ಅಧಿಸೂಚನೆ ಹೊರಡಿಸಿದ್ದು, ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ 180 ದಿನಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರುತ್ತವೆ ಎಂಬುದನ್ನು ಸ್ಪಷ್ಟಪಡಿಸಿದೆ.

ನವದೆಹಲಿ: ʼಭಾರತೀಯ ಪ್ರಮಾಣಿತ ಸಮಯʼ (IST) ಸ್ಥಾಪನೆಗೆ ರೆಡಿಯಾಗಿದೆ ಭಾರತ. ಇನ್ನಾರೇ ತಿಂಗಳಲ್ಲಿ ದೇಶಾದ್ಯಂತ ನಿಖರವಾದ ಏಕರೂಪದ ಸಮಯ ಅನುಷ್ಠಾನ-ಅನುಸರಣೆಗೆ ಸಿದ್ಧವಾಗಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳಿಗೂ ಸೂಕ್ತ ನಿರ್ದೇಶನ ನೀಡಿದೆ.

ಭಾರತ ಇನ್ನು ವಿದೇಶಿ ಉಪಗ್ರಹ ಆಧಾರಿತ ಸಮಯದ ಮೂಲಗಳ ಬದಲಾಗಿ ಸ್ವದೇಶಿ ಉಪಗ್ರಹ ಆಧಾರಿತವಾಗಿ ʼಭಾರತೀಯ ಪ್ರಮಾಣಿತ ಸಮಯʼವನ್ನು ಅನುಸರಿಸುವಲ್ಲಿ ಮುಂದಡಿ ಇಟ್ಟಿದ್ದು, 180 ದಿನಗಳಲ್ಲೇ ʼISTʼ ಸಂಬಂಧಿತ ಹೊಸ ನಿಯಮಗಳು ಜಾರಿಗೆ ಬರಲಿವೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಇದೇ ಆಗಸ್ಟ್ 27ರಂದು ʼಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು-2026ʼ ಅಧಿಸೂಚನೆ ಹೊರಡಿಸಿದ್ದು, ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ 180 ದಿನಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರುತ್ತವೆ ಎಂಬುದನ್ನು ಸ್ಪಷ್ಟಪಡಿಸಿದೆ.

ಭಾರತೀಯ ಸಂಸ್ಥೆಗಳು ಮತ್ತು ಕಾನೂನು ಮಾಪನಶಾಸ್ತ್ರ ಪ್ರಯೋಗಾಲಯಗಳ ಮೂಲಕ ದೇಶಾದ್ಯಂತ ನಿಖರವಾದ ಭಾರತೀಯ ಪ್ರಮಾಣಿತ ಸಮಯವನ್ನು ಪ್ರಸಾರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಇದಕ್ಕೆ ಪ್ರತೀಕವಾಗಿ ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಮಯ ಪ್ರಸರಣಕ್ಕಾಗಿ ಭಾರತದ ಉಪಗ್ರಹ ಸಂಚರಣೆ ವ್ಯವಸ್ಥೆ NavIC ಮತ್ತು ಇತರ ಅನುಮೋದಿತ ಭಾರತೀಯ ಸಮಯ ಮೂಲಗಳ ಬಳಕೆಗೆ ನಿಯಮ ರೂಪಿಸಲಾಗಿದೆ.

ತಾಂತ್ರಿಕ ಬದಲಾವಣೆಗೆ ಅಣಿಯಾಗಿ:

ನಿಯಮ ಜಾರಿಗೆ 180 ದಿನಗಳ ಕಾಲಾವಧಿಯಿದ್ದು, ಅಷ್ಟರೊಳಗೆ ಎಲ್ಲಾ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಸದ್ಯ ಅಸ್ತಿತ್ವದಲ್ಲಿ ಇರುವ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯ ತಾಂತ್ರಿಕ ಬದಲಾವಣೆಗಳನ್ನು ಕೈಗೊಳ್ಳಲು ಮತ್ತು ನಿಖರ ʼISTʼ ಅನುಷ್ಠಾನಕ್ಕೆ ಅಣಿಯಾಗಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚನೆ ನೀಡಿದೆ.

ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು-2026 ನಿಯಮಗಳು ಜಾರಿಗೆ ಬರುವ ಮೊದಲು ಸರ್ಕಾರಿ ಇಲಾಖೆಗಳು, ವ್ಯವಹಾರಗಳು, ಸಂಸ್ಥೆಗಳು ಮತ್ತಿತರ ಸಂಸ್ಥೆಗಳ ವ್ಯವಸ್ಥೆಗಳಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಲು 180 ದಿನಗಳ ಕಾಲಾವಕಾಶ ಮಾಡಿಕೊಡುತ್ತದೆ.

ಡಿಜಿಟಲ್ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳ ಹೆಚ್ಚಿನ ಬಳಕೆಯಿಂದ ಸಾಮಾನ್ಯ ಸಮಯ ಉಲ್ಲೇಖದ ಅಗತ್ಯವೂ ಹೆಚ್ಚಾಗಿದೆ. ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ, ದೂರಸಂಪರ್ಕ, ರೈಲ್ವೆ, ವಿದ್ಯುತ್ ವ್ಯವಸ್ಥೆ, ಕಂಪ್ಯೂಟರ್ ನೆಟ್‌ವರ್ಕ್‌ ಮತ್ತು ಸರ್ಕಾರಿ ದಾಖಲೆಗಳು ನಿಖರ ಸಮಯ ಮತ್ತು ಸಮಯದ ಮುದ್ರೆಗಳನ್ನು ಅವಲಂಬಿಸಿವೆ.

ಭಾರತೀಯ ಪ್ರಮಾಣಿತ ಸಮಯ (IST)ವು ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ವಹಿವಾಟುಗಳ ನಿಖರವಾದ ಸಮಯ ಮುದ್ರೆ, ರೈಲ್ವೆ, ವಿಮಾನ ನಿಲ್ದಾಣ, ಮತ್ತಿತರ ಸಾರಿಗೆ ವ್ಯವಸ್ಥೆಗಳ ಸಮನ್ವಯ, ದೂರಸಂಪರ್ಕ ಮತ್ತು ಇಂಟರ್ನೆಟ್ ಜಾಲಗಳ ವಿಶ್ವಾಸಾರ್ಹ ಕಾರ್ಯಾಚರಣೆ, ವಿದ್ಯುತ್ ವ್ಯವಸ್ಥೆಗಳಲ್ಲಿ ನಿಖರವಾದ ಸಮಯ ಪಾಲನೆ, ಸರ್ಕಾರಿ ಮತ್ತು ಕಾನೂನು ದಾಖಲೆಗಳ ನಿರ್ವಹಣೆ, ತುರ್ತು ಮತ್ತು ಇತರ ಸಮಯ-ಸೂಕ್ಷ್ಮ ಸೇವೆಗಳ ಸಮನ್ವಯಕ್ಕೆ ನಿಖರವಾಗಿರಲಿದೆ.

ಪ್ರಸ್ತುತ, ಹಲವಾರು ವ್ಯವಸ್ಥೆಗಳು ವಿದೇಶಿ ಉಪಗ್ರಹ ಆಧಾರಿತ ಸಮಯದ ಮೂಲಗಳನ್ನು ಬಳಸುತ್ತಿದ್ದು, ಭಾರತೀಯ ಪ್ರಮಾಣಿತ ಸಮಯ ಪ್ರಸರಣದಿಂದಾಗಿ ಇನ್ನು ಮುಂದೆ ಬಾಹ್ಯ ಸಮಯ ಮೂಲಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ.

ಬೆಂಗಳೂರು ಪ್ರಯೋಗಾಲಯದಲ್ಲಿ ಪ್ರಸರಣ:

ʼಒನ್‌ ನೇಷನ್‌ ಒನ್‌ ಟೈಮ್‌ʼ ಉಪಕ್ರಮದ ಭಾಗವಾಗಿ ಜುಲೈ 2026ರಲ್ಲಿ ಬೆಂಗಳೂರಿನ ಪ್ರಾದೇಶಿಕ ಉಲ್ಲೇಖ ಪ್ರಮಾಣಿತ ಪ್ರಯೋಗಾಲಯದಲ್ಲಿ (RRSL) ಬಿಳಿ ಮೊಲ ತಂತ್ರಜ್ಞಾನ ಆಧಾರಿತ ಭಾರತೀಯ ಪ್ರಮಾಣಿತ ಸಮಯ ಪ್ರಸರಣ ಪ್ರದರ್ಶನ ಜಾಲವನ್ನು ನಿಯೋಜಿಸಲಾಗಿತ್ತು. ಈ ವ್ಯವಸ್ಥೆ ಬ್ಯಾಂಕಿಂಗ್, ದೂರಸಂಪರ್ಕ, ವಿದ್ಯುತ್, ಸಾರಿಗೆ ಮತ್ತು ಡಿಜಿಟಲ್ ಆಡಳಿತ ಸೇರಿದಂತೆ ವಲಯಗಳಿಗೆ ಭಾರತೀಯ ಪ್ರಮಾಣಿತ ಸಮಯದ ಪ್ರಸರಣವನ್ನು ಪ್ರದರ್ಶಿಸಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ CSIR-NPL, ISRO, SEBI, NSE, BSNL ಮತ್ತಿತರ ಪಾಲುದಾರರ ಸಹಯೋಗದೊಂದಿಗೆ RRSL ಬೆಂಗಳೂರು ಮತ್ತು NSE ಚೆನ್ನೈ ನಡುವೆ IST ಯ ಸುರಕ್ಷಿತ ಪ್ರಸರಣವನ್ನು ಸಹ ಪ್ರದರ್ಶಿಸಿದೆ.

ಸಚಿವ ಪ್ರಲ್ಹಾದ್‌ ಜೋಶಿ ನಿರ್ದೇಶನ:

IST ಅನುಸರಣೆಗೆ ಸಿದ್ಧರಾಗಲು ಜೋಶಿ ನಿರ್ದೇಶನ:* ʼಒನ್‌ ನೇಷನ್‌ ಒನ್‌ ಟೈಮ್‌ʼ ಉಪಕ್ರಮದ ಭಾಗವಾಗಿ ʼಭಾರತೀಯ ಪ್ರಮಾಣಿತ ಸಮಯʼ IST ಅನುಸರಣೆಗೆ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಈ 180 ದಿನಗಳ ಅವಧಿಯಲ್ಲಿ ನಮ್ಮೆಲ್ಲಾ ಪಾಲುದಾರರು ಅಗತ್ಯ ತಾಂತ್ರಿಕ ಬದಲಾವಣೆ ಕೈಗೊಳ್ಳಲು ಮತ್ತು ಸ್ವದೇಶಿ ಉಪಗ್ರಹ ಆಧಾರಿತವಾದಂತಹ ನಿಖರವಾದ IST ಅನುಷ್ಠಾನಕ್ಕೆ ಸಿದ್ಧರಾಗಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ನಿರ್ದೇಶನ ನೀಡಿದ್ದಾರೆ.