ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ 'ಮಹಿಳಾ ಮೀಸಲಾತಿ ಪರ' ಇದ್ದೇವೆಂದು ಬೊಗಳೆ ಬಿಡುತ್ತಿದೆ. ಆದರೆ, ಯಾವತ್ತೂ ಅದರ ವಿರೋಧಿಯಾಗೇ ವರ್ತಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸದನದಲ್ಲಿ 'ಮಹಿಳಾ ಮೀಸಲಾತಿ' ಧಿಕ್ಕರಿಸಿ ತಾನೆಂದೂ "ಮಹಿಳಾ ವಿರೋಧಿ" ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಆರೋಪಿಸಿದರು.
ದೇವೇಗೌಡರು ಪ್ರಧಾನಿ ಆಗಿದ್ದ ಕಾಲದಿಂದಲೂ ಕಾಂಗ್ರೆಸ್ ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಲೇ ಬಂದಿದೆ. ದೇವೆಗೌಡರು ಮಹಿಳಾ ಮೀಸಲಾತಿ ಜಾರಿಗೆ ಪ್ರಯತ್ನಿಸಿದರೆ ಕಾಂಗ್ರೆಸ್ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಬಿಜೆಪಿ ಮಾತ್ರ ಸಂಪೂರ್ಣ ಬೆಂಬಲ ನೀಡಿತ್ತು ಎಂದರು.
1998ರಲ್ಲಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಸಹ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಪ್ರಯತ್ನಿಸಿದ್ದರು. ಎನ್ಡಿಎ ಮಿತ್ರ ಪಕ್ಷಗಳೆಲ್ಲ ಸಹಕಾರ ನೀಡಿದ್ದವು. ಆದರೆ, ಕಾಂಗ್ರೆಸ್ ಮಾತ್ರ ಮತ್ತೆ ಹಳೇ ಚಾಳಿಯನ್ನೇ ಮುಂದುವರೆಸಿ, ವಿರೋಧಿಸುತೆಂದು ಹೇಳಿದರು.
2003ರಲ್ಲಿ ವಾಜಪೇಯಿ ಅವರು ಮತ್ತೊಮ್ಮೆ ಈ ಕಾಯ್ದೆ ಜಾರಿಗೆ ಮುಂದಾದರು. ಆದರೆ, ಕಾಂಗ್ರೆಸ್ ಮಿತ್ರ ಪಕ್ಷಗಳ ಸಂಸದರು ಆ ಬಿಲ್ ಅನ್ನೇ ಹರಿದು ಬೀಸಾಡಿದ್ದರು ಎಂದು ಜೋಶಿ ನೆನಪಿಸಿದರು. ಯುಪಿಎ ಸರ್ಕಾರ ಈ ಕಾಯ್ದೆ ಮಂಡಿಸಿ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಿತು. ಬಿಜೆಪಿ ಸಹ ಇದಕ್ಕೆ ಸಂರ್ಪೂಣ ಸಹಕಾರ ನೀಡಿತು. ಆದರೆ, ಲೋಕಸಭೆಯಲ್ಲಿ ಮಂಡನೆ ಆಗಲೇ ಇಲ್ಲ. ಹಿಂದಿನಿಂದಲೂ ಮಹಿಳಾ ಮೀಸಲಾತಿ ಪರವಾಗಿದ್ದೇವೆ ಎಂದು ಎಂಬ ಕಾಂಗ್ರೆಸ್ ಹೇಳಿಕೆ ಬರೀ ಬೊಗಳೆಯಷ್ಟೇ ಎಂದು ಕಿಡಿ ಕಾರಿದರು.
ಜವಾಹರಲಾಲ್ ನೆಹರು ಎಸ್ಸಿ, ಎಸ್ಟಿ ಮೀಸಲಾತಿ, ರಾಜೀವ ಗಾಂಧಿ ಒಬಿಸಿ ಮೀಸಲಾತಿ ವಿರೋಧಿಸಿದ್ದರೆ, ಇದೀಗ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಹಿಳಾ ಮೀಸಲಾತಿಯನ್ನು ಧಿಕ್ಕರಿಸಿದರೆಂದು ಆರೋಪಿಸಿದರು.
ಜನಜಾಗೃತಿ:
ಮಹಿಳಾ ಮೀಸಲಾತಿ ಹಾಗೂ ಲೋಕಸಭೆ ಕ್ಷೇತ್ರ ಪುನರ್ವಿಂಗಡಣೆಗೆ ನಾವು ಬದ್ಧರಾಗಿದ್ದೇವೆ. ಈ ಕುರಿತು ದೇಶಾದ್ಯಂತ ಜನಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಮೊಂಡು ವಾದ:
ಜನಗಣತಿ ಆಧಾರಿತವಾಗಿ ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿದರೆ ದಕ್ಷಿಣ ರಾಜ್ಯಗಳಿಗೆ ಹಾಗೂ ಸಣ್ಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಮೊಂಡು ವಾದ ಪ್ರದರ್ಶಿಸುತ್ತ ಕಾಂಗ್ರೆಸ್ ಪಕ್ಷ ಜನರಲ್ಲಿ ತಪ್ಪು ಮಾಹಿತಿ ಹರಡುತ್ತಿದೆ ಜೋಶಿ ಕಿಡಿ ಕಾರಿದರು.
ದಕ್ಷಿಣ ಭಾರತ, ಉತ್ತರ ಭಾರತ ಎಂದೆಣಿಸುತ್ತಿರುವ ಕಾಂಗ್ರೆಸ್ ಪಕ್ಷ, ಡಿಲಿಮಿಟೇಷನ್ ಅಲ್ಲಿ ಸಮಸ್ಯೆ ಇದ್ದದ್ದೇ ನಿಜವಾದರೆ ಬಿಬಿಎಂಪಿಯಲ್ಲಿ ಏಕೆ ತಂದಿತು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆಗಳಲ್ಲಿ ಸೋಲಿನ ಹತಾಶೆ, ನಿರಾಸೆ ಮತ್ತು ಭವಿಷ್ಯದಲ್ಲಿ ಭಯಪಟ್ಟು ಕಾಂಗ್ರೆಸ್ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರಿವಿಂಗಡಣೆ ವಿರೋಧಿಸುತ್ತಿದೆ ಎಂದು ಟೀಕಿಸಿದರು.
ಪ್ರಬುದ್ಧ ವಿಪಕ್ಷ ನಾಯಕ ಬೇಡವೆ?
ಸಂಸತ್ತಿನಲ್ಲಿ ಕಾಂಗ್ರೆಸ್‌ಗೆ ಒಬ್ಬ ಪ್ರಬುದ್ಧ ವಿಪಕ್ಷ ನಾಯಕ ಬೇಡವಾದಂತಿದೆ. ಹಾಗಾಗಿ ತಮ್ಮ ಮಾತಿಗೆ ತಲೆದೂಗುವರಿಗೆ ಮಾತ್ರ ಆ ಸ್ಥಾನ ನೀಡುತ್ತಾರೆಂದು ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮಿಡಿ ರಾಜಕೀಯ ಜೀವನವನ್ನು ವಿಧಾನಸಭೆ, ರಾಜ್ಯಸಭೆ, ಲೋಕಸಭೆಯಲ್ಲಿ ಕಳೆದರೂ ತಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
Cabinet meeting: ಹೊಸ ಒಳ ಮೀಸಲಾತಿ ಅನ್ವಯ 56,432 ಹುದ್ದೆಗಳ ನೇಮಕಾತಿಗೆ ತುರ್ತು ಕ್ರಮ: ಸಿಎಂ ಘೋಷಣೆ
ಸುದ್ದಿಗೋಷ್ಠಿಯಲ್ಲಿ ಮೇಯರ್ ಜ್ಯೋತಿ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದವಾ, ಸವಿತಾ ಚವ್ಹಾಣ, ಅಕ್ಕಮ್ಮ ಹೆಗಡೆ, ನಾಗರತ್ನ ಬಳ್ಳಾರಿ, ಶಾಂತಕ್ಕ ನಿಡವಣಿ ಇದ್ದರು.