ಬೆಳಗಾವಿ, ಡಿ.19: ದಲಿತರ ಉದ್ಧಾರ ಮಾಡದೇ ವಂಚನೆಗೆ ಕಾರಣರಾದ ಸಚಿವ ಮಹದೇವಪ್ಪ ಅವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಮಹದೇವಪ್ಪ ಅವರು ದಲಿತ ವಿರೋಧಿ. ಇವರು ಕೇವಲ ತಮ್ಮ ಬಾಸ್‍ಗಳನ್ನು ಓಲೈಕೆ ಮಾಡಿಕೊಂಡು ಲೂಟಿ ಮಾಡಿ, ಇವರ ಕುಟುಂಬಗಳನ್ನು ಉದ್ಧಾರ ಮಾಡುತ್ತಿದ್ದಾರೆ. ಸಮುದಾಯಗಳ ಉದ್ಧಾರ ಇವರಿಂದ ಆಗುತ್ತಿಲ್ಲ ಎಂದು ಆರೋಪಿಸಿದರು.
ಒಳ ಮೀಸಲಾತಿಯಲ್ಲೂ ಸಂಪೂರ್ಣ ತಾರತಮ್ಯ
ಒಳ ಮೀಸಲಾತಿಯಲ್ಲೂ ಸಂಪೂರ್ಣ ತಾರತಮ್ಯ ಮಾಡಲಾಗಿದೆ. ಯಾರಿಗೂ ನೆಮ್ಮದಿ ಇಲ್ಲದಂತೆ ಮಾಡಿದ್ದಾರೆ. ಈ ಕುರಿತ ಮಸೂದೆ ಬರಲಿದೆ ಎಂದು ತಿಳಿಸಿದರು. ಎಸ್‍ಇಪಿ, ಟಿಎಸ್‍ಪಿ ಹಣವನ್ನು ಅನ್ಯಕಾರ್ಯಗಳಿಗೆ ಬಳಸಿ ಪರಿಶಿಷ್ಟ ಜಾತಿ, ವರ್ಗ- ದಲಿತ ಸಮುದಾಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರದ ಈ ಕ್ರಮ ಖಂಡನೀಯ. ಸಚಿವ ಮಹದೇವಪ್ಪ ಅವರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಈ ವರ್ಷದಲ್ಲಿ ಪರಿಶಿಷ್ಟ ಜಾತಿಗಳ ಶ್ರೇಯೋಭಿವೃದ್ಧಿಗೆ 42 ಸಾವಿರ ಕೋಟಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಮೊತ್ತವನ್ನು ಮೀಸಲಿಟ್ಟಿದ್ದೇವೆ ಎಂದು ಹೇಳುತ್ತಾರೆ. ಇದುವರೆಗೆ ಈ 3 ವರ್ಷಗಳಲ್ಲಿ 39 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಎಸ್‍ಇಪಿ, ಟಿಎಸ್‍ಪಿ ಹಣ ದಲಿತರ ಶ್ರೇಯೋಭಿವೃದ್ಧಿಗಾಗಿ ಇದೆ. ಮನೆ ಕಟ್ಟಿ ಕೊಡುವುದು, ಯುವಕರಿಗೆ ಕಾರು ಖರೀದಿಸಿ ಕೊಟ್ಟು ಸ್ವಂತ ಉದ್ಯೋಗಕ್ಕೆ ಪ್ರೋತ್ಸಾಹ, ವ್ಯಾಪಾರಕ್ಕೆ ಸಾಲ ಸಹಾಯ, ಗಂಗಾ ಕಲ್ಯಾಣ ಅನುಷ್ಠಾನ, ಅವರ ಮನೆಗೆ ರಸ್ತೆಯಂಥ ಚಟುವಟಿಕೆ ಮಾಡಬೇಕಿತ್ತು. ಗ್ಯಾರಂಟಿ ಕೊಡುವಾಗ ನನಗೂ ಫ್ರೀ, ನಿನಗೂ ಫ್ರೀ ಎಂದರು ಎಂದು ದೂರಿದರು.
ಆದರೆ, ಇಲ್ಲಿ ಮಾಡಿದ್ದೇನು? ಎಲ್ಲರಿಗೂ ಖಜಾನೆ ಹಣ ಕೊಟ್ಟು, ದಲಿತರಿಗೆ ಅನ್ಯಾಯ, ಮೋಸ ಮಾಡಿ, ಎಸ್‍ಇಪಿ, ಟಿಎಸ್‍ಪಿ ಹಣವನ್ನು ಇದೇ ಗ್ಯಾರಂಟಿ ಹಣ ಎಂದು ಕೊಡಲಾಗಿದೆ ಎಂದು ಟೀಕಿಸಿದರು. ಸರ್ಕಾರವು ಗ್ಯಾರಂಟಿ ಯೋಜನೆ ತಾರದೇ ಇದ್ದರೆ 42 ಸಾವಿರ ಕೋಟಿಯನ್ನು ಯಾರಿಗೆ ಕೊಡುತ್ತಿದ್ದರು? ದಲಿತ ಸಮುದಾಯದ ಅಭಿವೃದ್ಧಿಗೇ ಅದು ಹೋಗುತ್ತಿತ್ತು ಎಂದರು.
Pralhad Joshi: ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರ ಡಿಪಿಆರ್: ಪ್ರಲ್ಹಾದ್ ಜೋಶಿ
ಕೆಲವು ದಲಿತ ಸಂಘಟನೆಗಳ ಮೂಗಿಗೆ ತುಪ್ಪ ಸವರಿದ ಕಾಂಗ್ರೆಸ್
ಅನೇಕ ದಲಿತ ಸಂಘಟನೆಗಳಿವೆ. ದಲಿತರಿಗೆ ಅನ್ಯಾಯ ಆದಾಗ ಅವು ಹೊರಕ್ಕೆ ಬಂದು ಹೋರಾಟ ಮಾಡುತ್ತವೆ. ಈಚೆಗೆ ಕೆಲವು ಸಂಘಟನೆಗಳು ಕಾಂಗ್ರೆಸ್ ಜತೆ ಮಾರಾಟ ಆಗಿ ಹೋಗಿವೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಎಲ್ಲ ಸಂಘಟನೆಗಳು ಎಂದು ನಾನು ಹೇಳಿಲ್ಲ. ಮಾರಾಟ ಆದ ಕಾರಣದಿಂದ ಅವರು ಏನೇ ಆದರೂ ಕಾಂಗ್ರೆಸ್ ಜತೆ ಉಳಿಯುತ್ತಾರೆ. ಹೊರತು ಹೊರಗಡೆ ಬಂದಿಲ್ಲ. ಕಾಂಗ್ರೆಸ್ ಪಕ್ಷವು ಅವರ ಮೂಗಿಗೆ ತುಪ್ಪ ಸವರಿದೆ ಎಂದು ಆರೋಪಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಎಸ್. ಕೇಶವ್ ಪ್ರಸಾದ್ ಉಪಸ್ಥಿತರಿದ್ದರು.