ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chalavadi Narayanaswamy: ಹಿಂದುಳಿದ ವರ್ಗಗಳ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ: ಛಲವಾದಿ ನಾರಾಯಣಸ್ವಾಮಿ ಆರೋಪ

Chalavadi Narayanaswamy: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ. ಈ ಆಯೋಗವನ್ನು ಆಯೋಗದಲ್ಲಿ ಇರುವವರೇ ನಡೆಸುತ್ತಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ. ಈ ಆಯೋಗವನ್ನು ಆಯೋಗದಲ್ಲಿ ಇರುವವರೇ ನಡೆಸುತ್ತಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇನ್ನೂ 15 ಜಾತಿಗಳಿಗೆ ಕ್ರೈಸ್ತ ಟ್ಯಾಗ್ ನೀಡಿರುವುದನ್ನು ರದ್ದು ಮಾಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿತು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಿನ್ನೆ ಪ್ರಾರಂಭವಾಗಿದೆ. ಈ ಸಮೀಕ್ಷೆ ಒಂದು ಗೊಂದಲದ ಗೂಡು ಎಂದು ಟೀಕಿಸಿದರು. ಇದು ಹಿಂದುತ್ವ ವಿರೋಧ ನೀತಿ ಎಂದು ಆರೋಪಿಸಿದರು.

ಗೊಂದಲ ಪರಿಹರಿಸಲು ಕೋರಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ. ಬ್ರಾಹ್ಮಣ ಕ್ರೈಸ್ತರು, ಲಿಂಗಾಯತ ಕ್ರೈಸ್ತರು, ಒಕ್ಕಲಿಗ, ವೀರಶೈವ ಮೊದಲಾದ ಎಲ್ಲರನ್ನೂ ಕ್ರೈಸ್ತ ಎಂದು ಹೆಸರಿಸಿದ್ದಾರೆ. ಹೊಲೆಯ, ಮಾದಿಗ, ಬಂಜಾರ ಕ್ರೈಸ್ತ, ಬೋವಿ ಕ್ರೈಸ್ತ ಎಲ್ಲವನ್ನೂ ಸೇರಿಸಿದ್ದರು ಎಂದು ಆಕ್ಷೇಪಿಸಿದರು.

ಹೋರಾಟಗಳು ನಡೆದು ಪ್ರಭಾವಿ ಸಮುದಾಯಗಳು ಹೋರಾಟಕ್ಕೆ ಇಳಿದಾಗ ಅವುಗಳನ್ನು ಕಾಣದಂತೆ (ಹೈಡ್) ಮಾಡಿದ್ದಾಗಿ ಹೇಳಿದ್ದರು. ಆದರೆ, ಪರಿಶಿಷ್ಟ ಜಾತಿ, ವರ್ಗಗಳದು ಹೈಡ್ ಮಾಡಿಲ್ಲ. ಇದರಿಂದ ಗೊಂದಲವಾಗಿದೆ. ಎಲ್ಲ ಜಾತಿಗಳನ್ನು ಸಂಪೂರ್ಣ ಕೈಬಿಟ್ಟಿಲ್ಲ ಎಂದು ದೂರಿದರು.

ಸುತ್ತಿ ಬಳಸಿ ಮಾತನಾಡುತ್ತಿದ್ದಾರೆ. ಕ್ರೈಸ್ತರಾಗಿ ಮತಾಂತರ ಹೊಂದಿದವರ ಮೂಲಜಾತಿ ಹಾಗೇ ಉಳಿಯುತ್ತದೆ ಎಂದು ಹೇಳಿದ್ದಾರೆ. ಅದ್ಹೇಗೆ ಉಳಿಯಲು ಸಾಧ್ಯ ಎಂದು ಕೇಳಿದರು. ಮೂಲಜಾತಿಯಲ್ಲೇ ಮೀಸಲಾತಿ ಕೊಡಬೇಕೇ ಎಂದು ತೀರ್ಮಾನ ಮಾಡುತ್ತಾರಂತೆ. ಕೋರ್ಟ್ ತೀರ್ಮಾನ ಮಾಡಿದೆ, ತೀರ್ಮಾನ ಮಾಡಲು ಇವರ್ಯಾರು ಎಂದು ಕೇಳಿದರು. ದಲಿತರು ಕ್ರೈಸ್ತರಾಗಿ ಸೇರಿದರೆ ಅವರನ್ನು ದಲಿತರೆಂದು ಪರಿಗಣಿಸಲಾಗುವುದಿಲ್ಲ; ಇಲ್ಲಿ ಗೊಂದಲವಿದೆ ಎಂದು ಟೀಕಿಸಿದರು.

ಸದಾಶಿವ ಆಯೋಗ, ನಾಗಮೋಹನ್ ದಾಸ್ ಆಯೋಗ, ಕಾಂತರಾಜು ಆಯೋಗ, ಜಯಪ್ರಕಾಶ್ ಹೆಗ್ಡೆ ಆಯೋಗದಲ್ಲಿ ಪರಿಶಿಷ್ಟ ಜಾತಿಗೆ ಕ್ರಿಶ್ಚಿಯನ್ ಪದ ಇರಲಿಲ್ಲ ಎಂದು ವಿವರಿಸಿದರು. ಈಗ ಎಲ್ಲಿಂದ ಯಾಕೆ ಹುಟ್ಟಿದೆ? ಇವತ್ತು ಸಂಜೆಯೇ ಸಭೆ ಕರೆದು ತೀರ್ಮಾನ ಮಾಡುವುದಾಗಿ ಅಧ್ಯಕ್ಷರು ತಿಳಿಸಿದ್ದಾಗಿ ಹೇಳಿದ ಅವರು, ಇವತ್ತೇ ತೀರ್ಮಾನ ಆಗದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಆಯೋಗವೇ ಹೊಣೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಈ ಸುದ್ದಿಯನ್ನೂ ಓದಿ | ICOMM: ಸಿಆರ್‌ಪಿಎಫ್‌ಗೆ ಐಕಾಮ್‌ನಿಂದ 200 ಆಧುನಿಕ ಸ್ನೈಪರ್ ರೈಫಲ್‌ಗಳ ತಯಾರಿಕೆ

ನಿಯೋಗದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮಾಜಿ ಸಂಸದ ಎಸ್. ಮುನಿಸ್ವಾಮಿ, ಮಾಜಿ ಶಾಸಕ ವೈ. ಸಂಪಂಗಿ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಅನಿಲ್ ಕುಮಾರ್, ಬಿಜೆಪಿ ರಾಜ್ಯ ವಕ್ತಾರ ಎಚ್. ವೆಂಕಟೇಶ್ ದೊಡ್ಡೇರಿ, ಬಿಜೆಪಿ ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಸಹ ಸಂಚಾಲಕ ಪ್ರಶಾಂತ್ ಕೆಡಂಜಿ, ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಮತ್ತು ಎಸ್.ಸಿ ಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಅವರ ನಿಯೋಗ ಇಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿತು.