ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚೆನ್ನಮ್ಮ ನಿಧನಕ್ಕೆ ಸಿಎಂ ಡಿಕೆಶಿ, ಸಿದ್ದರಾಮಯ್ಯ, ಜೋಶಿ ಸೇರಿ ಗಣ್ಯರ ಸಂತಾಪ

Chennamma Deve Gowda: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) ಅವರು ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾಗಿದ್ದಾರೆ. ಚೆನ್ನಮ್ಮ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಚೆನ್ನಮ್ಮ ದೇವೇಗೌಡ.

ಬೆಂಗಳೂರು, ಜು.18: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) (Chennamma Deve Gowda) ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ದೇವೇಗೌಡರಿಗೆ ಬೆನ್ನೆಲುಬಾಗಿ ನಿಂತವರು ಚೆನ್ನಮ್ಮ: ಸಿಎಂ ಸಂತಾಪ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರ ನಿಧನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಅಪಾರ ಧೈವಭಕ್ತೆಯಾಗಿದ್ದ ಚೆನ್ನಮ್ಮನವರು ತುಂಬು ಕುಟುಂಬವನ್ನು ಸಾಕಿ ಸಲಹಿದ ಮಹಾನ್ ತಾಯಿ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿ ಅವರ ಕುಟುಂಬ ಸದಸ್ಯರ ರಾಜಕೀಯ ಮತ್ತು ಬದುಕಿನ ಏಳ್ಗೆಯ ಹಿಂದೆ ಚೆನ್ನಮ್ಮನವರ ಪರಿಶ್ರಮ ಅಡಗಿದೆ. ಅವರು ಆಸ್ಪತ್ರೆಯಿಂದ ಗುಣಮುಖರಾಗಿ ವಾಪಸ್ ಬರುತ್ತಾರೆ ಎಂದು ಎಲ್ಲರೂ ನಂಬಿಕೆ ಇಟ್ಟಿದ್ದರು. ಆ ನಂಬಿಕೆ ಸುಳ್ಳಾಗಿರುವುದಕ್ಕೆ ಬಹಳ ಬೇಸರವಾಗಿದೆ.

ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎನ್ನುತ್ತಾರೆ. ದೇವೇಗೌಡರ ಪ್ರತಿ ಯಶಸ್ಸಿನ‌ ಹಿಂದೆ ನಿಂತಿದ್ದವರು ಚೆನ್ನಮ್ಮ. ಕುಟುಂಬ ಸದಸ್ಯರು ಸೋತಾಗ ಅವರು ಕುಗ್ಗಲಿಲ್ಲ, ಗೆದ್ದಾಗ ಹಿಗ್ಗಲಿಲ್ಲ. ರಾಜಕೀಯದ ಏಳು-ಬೀಳುಗಳಲ್ಲಿ ದೇವೇಗೌಡರಿಗೆ ಬೆನ್ನೆಲುಬಾಗಿ ನಿಂತಿದ್ದರು. ಮನೆಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ಮೂಲಕ ಅವರು ಗೌಡರ ಬದುಕಿನ ನಿಜವಾದ ಶಕ್ತಿಯಾಗಿದ್ದರು. ಮೌನದಿಂದಲೇ ಇಡೀ ಕುಟುಂಬದ ನಿರ್ವಹಣೆ ಮಾಡಿದವರು. ಯಾವುದೇ ಪ್ರಚಾರ ಬಯಸದೆ, ತೆರೆಮರೆಯಲ್ಲಿ ಇದ್ದವರು ಎಂದು ಸ್ಮರಿಸಿದ್ದಾರೆ.

ಇಳಿ ವಯಸ್ಸಿನಲ್ಲಿ ಪತ್ನಿಯ ಅಗಲಿಕೆ ದೇವೇಗೌಡರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ನೋವು ತರುವುದರ ಜತೆಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಅವರ ಕುಟುಂಬವರ್ಗ, ಬಂಧುಗಳು ಹಾಗೂ ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ

ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದಿಂದ ದುಃಖಿತನಾಗಿದ್ದೇನೆ. ಜನತಾ ಪರಿವಾರದಲ್ಲಿದ್ದ ನಾನು ದೇವೇಗೌಡರ ಕುಟುಂಬದೊಂದಿಗೆ ನಿಕಟವಾದ ಒಡನಾಟ ಇಟ್ಟುಕೊಂಡವನಾಗಿ ಚೆನ್ನಮ್ಮನವರನ್ನು‌ ಸಮೀಪದಿಂದ ಬಲ್ಲವನು. ಚೆನ್ನಮ್ಮನವರು ತಮ್ಮ ಜೀವನದಲ್ಲಿ ಎದುರಾದ ಕಷ್ಟ - ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ. ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿದ್ದರು ಎಂದು ಸ್ಮರಿಸಿದ್ದಾರೆ.

ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಚೆನ್ನಮ್ಮನವರು, ಮಾದರಿ ಸತಿಯಾಗಿ ತುಂಬು ಜೀವನ ಸಾಗಿಸಿದವರು. ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ದೇವೇಗೌಡರಿಗೆ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಗೌಡರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.



ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸಂತಾಪ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಪತ್ನಿ ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಮಾತ್ರೋಶ್ರೀ ಚೆನ್ನಮ್ಮ ದೇವೇಗೌಡ ಅವರ ನಿಧನ ತೀವ್ರ ದುಃಖ ತರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಂಬನಿ ಮಿಡಿದಿದ್ದಾರೆ. ಚೆನ್ನಮ್ಮ ಅವರು ಆದರ್ಶ ಗೃಹಿಣಿಯಾಗಿ, ಸರಳತೆಯ ಸಾಕಾರ ಮೂರ್ತಿಯಾಗಿದ್ದರು. ದೇವೇಗೌಡರ ಕುಟುಂಬ ಮಾತ್ರವಲ್ಲ, ನಾಡಿಗೆ ಒಂದು ದೊಡ್ಡ ಶಕ್ತಿಯಾಗಿದ್ದರು. ದೇಶದ ಅತ್ಯುನ್ನತ ರಾಜಕೀಯ ಕುಟುಂಬದ ಭಾಗವಾಗಿದ್ದರೂ ಅವರ ನಮ್ರತೆ ಮತ್ತು ಮಮತಾಮಯಿ, ಮಾತೃಹೃದಯದ ವ್ಯಕ್ತಿತ್ವ ಸರ್ವರಿಗೂ ಮಾದರಿಯಾಗಿತ್ತು ಎಂದು ಜೋಶಿ ಸ್ಮರಿಸಿದ್ದಾರೆ.

ಚೆನ್ನಮ್ಮ ಅವರ ಅಗಲಿಕೆಯಿಂದ ದೇವೇಗೌಡರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ಮಹಿಳಾ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜೋಶಿ ಶೋಕ ವ್ಯಕ್ತಪಡಿಸಿದ್ದಾರೆ. ಭಗವಂತ ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ಮತ್ತವರ ಪುತ್ರರೂ ಆಗಿರುವ ಕೆಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಸೇರಿದಂತೆ ಅವರ ಒಟ್ಟು ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಾರ್ಥಿಸಿದ್ದಾರೆ.

ಪದ್ಮನಾಭನಗರದ ನಿವಾಸದಲ್ಲಿ ಚೆನ್ನಮ್ಮ ಅಂತಿಮ ದರ್ಶನಕ್ಕೆ ವ್ಯವಸ್ಥೆ; ಹೊಳೆನರಸೀಪುರದಲ್ಲಿ ಸೋಮವಾರ ಅಂತ್ಯಕ್ರಿಯೆ

ದೇವೇಗೌಡರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ದೇವರು ನೀಡಲಿ: ಹೆಬ್ಬಾಳ್ಕರ್‌



ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ನೋವಾಯಿತು. ಅವರ ಸರಳತೆ, ಸಹನೆ ಹಾಗೂ ತಮ್ಮ ಕುಟುಂಬಕ್ಕೆ ನೀಡಿದ ಅಚಲ ಬೆಂಬಲ ಸದಾ ಸ್ಮರಣೀಯವಾದದ್ದು ಎಂದು ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಮರಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ದೇವೇಗೌಡರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.