ಬೆಂಗಳೂರು, ಜೂನ್ 27: 517ನೇ ವರ್ಷದ ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ, ದಾಖಲೆಯುತ 15 ಲಕ್ಷ ಸಸಿಗಳ ನೆಡುವಿಕೆ, ಎಸ್.ಎಂ.ಕೃಷ್ಣ ದಶಪಥ ರಸ್ತೆ, 10 ಕೆ ರನ್, 5 ಕೆ ವಾಕಥಾನ್, ಅಂತಾರಾಷ್ಟ್ರೀಯ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಹೀಗೆ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಶನಿವಾರ ಭಾಗವಹಿಸಿದರು.
ಬೆಂಗಳೂರು ನಿರ್ಮಿಸಿದ, ಪೇಟೆಗಳನ್ನು ಕಟ್ಟಿದ, ಕೆರೆಗಳನ್ನು ನಿರ್ಮಿಸಿ ಹೊಸ ಚರಿತ್ರೆ ಸೃಷ್ಟಿಸಿದ, ದೂರದೃಷ್ಟಿಯ ಮಣ್ಣಿನ ಮಗ ಕಲಿವೀರ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಕಂಚಿನ ಪ್ರತಿಮೆಗೆ ಮೊದಲಿಗೆ ಪುಷ್ಪಾರ್ಚನೆ ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಅವರು ಜಯಂತಿಗೆ ಚಾಲನೆ ನೀಡಿದರು.
ಬೃಹತ್ ಪ್ರತಿಮೆಯ ಪಾದವನ್ನು ಮುಟ್ಟಿ ನಮಸ್ಕಿರಿಸಿದ ಮುಖ್ಯಮಂತ್ರಿಯವರು ಪ್ರತಿಮೆಯ ಪಾದಗಳಿಗೆ ಭಕ್ತಿಯಿಂದ ಪುಷ್ಪಾರ್ಚನೆ ಮಾಡಿ ನಮಿಸಿದರು. ನಂತರ ಪ್ರತಿಮೆಯ ಪಕ್ಕದಲ್ಲಿ ನಿರ್ಮಾಣ ಮಾಡಿರುವ ಥೀಮ್ ಪಾರ್ಕ್ ಅನ್ನು ವೀಕ್ಷಿಸಿದರು.
ಇದಾದ ಬಳಿಕ ಬೆಂಗಳೂರು ಉತ್ತರ ಯಲಹಂಕ ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆನಂತರ ವೇದಿಕೆ ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘಕ್ಕೆ ರಿಯಾಯಿತಿ ದರದಲ್ಲಿ ಕೆಎಚ್‌ಬಿ ನಿವೇಶನ ನೀಡುವುದಾಗಿ ಘೋಷಣೆ ಮಾಡಿದರು. ನಂತರ ವಿಧಾನಸೌಧದ ಮುಂದಿರುವ ಕುದುರೆಯ ಮೇಲೆ ವಿರಾಜಮಾನರಾಗಿರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಗಮನ ಸೆಳೆದ ವಾಲ್ ಆಫ್ ಗ್ರಾಟಿಟ್ಯೂಡ್
ಎಸ್.ಎಂ. ಕೃಷ್ಣ ರಸ್ತೆ (ಬೆಂಗಳೂರು-ಮೈಸೂರು ದಶಪಥ ರಸ್ತೆ) ಅಭಿವೃದ್ಧಿಗಾಗಿ ಯಾವುದೇ ವಿವಾದವಿಲ್ಲದೆ ಸ್ವಯಂಪ್ರೇರಿತವಾಗಿ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟ ರೈತರು ಮತ್ತು ಸ್ಥಳೀಯರನ್ನು ಗೌರವಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 'ವಾಲ್ ಆಫ್ ಗ್ರಾಟಿಟ್ಯೂಡ್' (ಕೃತಜ್ಞತಾ ಫಲಕ) ನಿರ್ಮಿಸಿದೆ. ಮೈಸೂರು ರಸ್ತೆಯಲ್ಲಿರುವ ಈ ವಿಶೇಷ ಗೋಡೆಯು ರೈತರ ತ್ಯಾಗವನ್ನು ಸ್ಮರಿಸುತ್ತದೆ. ರಸ್ತೆ ಉದ್ಘಾಟನೆ ನಂತರ ಈ ಫಲಕವನ್ನು ಸಿಎಂ ಗಣ್ಯರ ಜತೆಗೂಡಿ ಲೋಕಾರ್ಪಣೆ ಮಾಡಿದರು. ಇದು ಎಲ್ಲರ ಗಮನ ಸೆಳೆಯಿತು.
ತದ ನಂತರ ಚಲ್ಲಘಟ್ಟದ ನಾಡಪ್ರಭು ಕೆಂಪೇಗೌಡ ಬಡಾವಣೆ ಬಳಿ ಎಸ್.ಎಂ.ಕೃಷ್ಣ ದಶಪಥ ರಸ್ತೆಯ ಬಳಿ ಬೆಂಗಳೂರಿನ ನಾಲ್ಕು ದಿಕ್ಕುಗಳಿಂದಲೂ ಸಚಿವರುಗಳ ನೇತೃತ್ವದಲ್ಲಿ ತಂದಂತಹ ಪುರಜ್ಯೋತಿಗಳನ್ನು ಸಿಎಂ ಡಿ.ಕೆ.ಶಿವಕುಮಾರ್ ಸ್ವೀಕರಿಸಿದರು. ನಂತರ ಕೆಂಪೇಗೌಡರ ಕೋಟೆಯ ಪ್ರತಿಕೃತಿ ಎದುರು ಎಲ್ಲಾ ಪುರಜ್ಯೋತಿಗಳನ್ನು ಇಡಲಾಯಿತು. ಇದಕ್ಕೂ ಮೊದಲು ಚಲ್ಲಘಟ್ಟದ ನಾಡಪ್ರಭು ಕೆಂಪೇಗೌಡ ಬಡಾವಣೆ ಬಳಿ ಎಸ್.ಎಂ.ಕೃಷ್ಣ ದಶಪಥ ರಸ್ತೆಯಲ್ಲಿ 10 ಕೆ ರನ್, 5 ಕೆ ವಾಕಥಾನ್ ಏರ್ಪಡಿಸಲಾಗಿತ್ತು. ಸಾವಿರಾರು ಜನರು ನೂತನ ರಸ್ತೆಯಲ್ಲಿ ಓಡಿ ಸಂತಸಪಟ್ಟರು. ಈ ರಸ್ತೆ ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿದೆ ಎಂದು ಅಭಿಪ್ರಾಯ ಹಂಚಿಕೊಂಡರು. ಬಳಿಕ ನೂತನ ರಸ್ತೆಯನ್ನು ಅವರು ಉದ್ಘಾಟಿಸಿದರು.
ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ದಾಖಲೆ ಅಭಿಯಾನ
ಶನಿವಾರ ಬೆಳಿಗ್ಗೆಯಿಂದಲೇ 50-60 ಸಾವಿರ ಸ್ವಯಂ ಸೇವಕರು ಉತ್ಸಾಹದಿಂದ ಕೆಂಪೇಗೌಡ ಬಡಾವಣೆ, ಶಿವರಾಂ ಕಾರಂತ ಬಡಾವಣೆ ಸೇರಿದಂತೆ ಇತರೆಡೆ ಸುಮಾರು 15 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು. ಕೇವಲ 12 ಗಂಟೆಗಳ ಅವಧಿಯಲ್ಲಿ ಇಷ್ಟೊಂದು ಸಸಿಗಳನ್ನು ನೆಟ್ಟು ದಾಖಲೆ ನಿರ್ಮಿಸಲಾಯಿತು. ದಶಪಥ ರಸ್ತೆ ಉದ್ಘಾಟನೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ವತಃ ಸಲಿಕೆ ಹಿಡಿದು ಸ್ಥಳೀಯ ಸಸಿಯಾದ ‘ಬಸವನ ಪಾದ’ ಗಿಡ ನೆಟ್ಟು ನೀರೆರೆದರು.
ಉದ್ಯಾನ ನಗರಿ, ಏರ್ ಕಂಡೀಷನ್ ಸಿಟಿ ಎಂದು ಹೆಸರಾಗಿರುವ ಬೆಂಗಳೂರು ತನ್ನ ಉದ್ಯಾನಗಳಿಂದಲೇ ಹೆಸರಾಗಿದೆ. ಈ ಗರಿಮೆಯನ್ನು ಉಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಬಿಡಿಎ ವತಿಯಿಂದ ಆಯೋಜಿಸಲಾಗಿತ್ತು. ಮಿಯಾವಾಕಿ ಅರಣ್ಯ ಮಾದರಿಯಲ್ಲಿ ಸುಮಾರು 250 ಎಕರೆ ಪ್ರದೇಶದಲ್ಲಿ ಸ್ಥಳೀಯ ಜಾತಿಯ ವಿವಿಧ ಸಸಿಗಳನ್ನು ನೆಡಲಾಯಿತು.
ಭೂ ಮಾಲೀಕರ ತ್ಯಾಗ ಸ್ಮರಣೆಗೆ ವಾಲ್ ಆಫ್ ಗ್ರ್ಯಾಟಿಟ್ಯೂಡ್: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ
ಜಿಕೆವಿಕೆ, ಎಂಜಿನಿಯರ್ ವಿಶ್ವನಾಥ್ ಅವರಿಗೆ ಕೆಂಪೇಗೌಡ ಪ್ರಶಸ್ತಿ
ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ದೇಶದ ಪ್ರಮುಖ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ಸಂಸ್ಥೆಯಾಗಿ, ಆಧುನಿಕ ಕೃಷಿ ಹಾಗೂ ನವೀನ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸುವ ಮೂಲಕ ಹೆಸರು ಮಾಡಿರುವ ಜಿಕೆವಿಕೆ, ನಗರ ಯೋಜನಾ ತಜ್ಞರಾಗಿ ಪ್ರಸಿದ್ಧಿ ಹೊಂದಿರುವ ಎಂಜಿನಿಯರ್ ಎಸ್. ವಿಶ್ವನಾಥ್ ಹಾಗೂ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಹುಲ್ ದ್ರಾವಿಡ್ ಅವರು ವಿದೇಶದಲ್ಲಿ ಇದ್ದ ಕಾರಣಕ್ಕೆ ಅವರು ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಜಿಕೆವಿಕೆ ಸಂಸ್ಥೆಯ ಪರವಾಗಿ ಉಪಕುಲಪತಿ ಎಸ್.ವಿ.ಸುರೇಶ್ ಅವರು ಪಡೆದುಕೊಂಡರು.