ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಅವರ ರಕ್ತದೊತ್ತಡದಲ್ಲಿ ಹಠಾತ್ ವ್ಯತ್ಯಾಸ ಉಂಟಾಗಿ, ವಿಧಾನಸೌಧದಲ್ಲಿ ಕೊಂಚ ಅಸ್ವಸ್ಥಗೊಂಡ ಘಟನೆ ಮಂಗಳವಾರ ನಡೆದಿದೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ಇದ್ದ ವೇಳೆ ತೀವ್ರ ಆಯಾಸ ಹಾಗೂ ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ತಕ್ಷಣವೇ ವೈದ್ಯರ ತಂಡವನ್ನು ಸ್ಥಳಕ್ಕೆ ಬರಮಾಡಿಕೊಂಡು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ನಿನ್ನೆಯಿಂದ ವಿಶ್ರಾಂತಿಯಿಲ್ಲದೆ ಸತತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಿಎಂ, ಇಂದು ಮುಂಜಾನೆಯೇ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬೆಳಗಿನಿಂದಲೂ ಸರಣಿ ಸಭೆ ಹಾಗೂ ಓಡಾಟದಲ್ಲಿದ್ದ ಕಾರಣ ದೈಹಿಕ ಬಳಲಿಕೆಯಿಂದ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿದೆ ಎಂದು ತಿಳಿದುಬಂದಿದೆ. ಸದ್ಯ ವೈದ್ಯರ ಚಿಕಿತ್ಸೆಯ ನಂತರ ಅವರ ಬಿಪಿ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಿದ್ದು, ಆರೋಗ್ಯ ಚೇತರಿಸಿಕೊಂಡಿದೆ ಎಂದು ತಿಳಿದುಬಂದಿದೆ.